ವೀರಾಜಪೇಟೆ, ಮಾ. ೨೩: ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಗಾಯಾಳುವನ್ನು ಮೈಸೂರು ಆಸ್ಪತ್ರೆಗೆ ರವಾನಿಸುವ ಸಂದರ್ಭ ಆ್ಯಂಬ್ಯುಲೆನ್ಸ್ ಹಾಗೂ ಲಾರಿಯ ನಡುವೆ ಮುಖಾಮುಖಿ ಅಪಘಾತವಾಗಿ ಆ್ಯಂಬ್ಯುಲೆನ್ಸ್ ಚಾಲಕನೂ ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ.

ಕಾರುಗಳ ನಡುವೆ ಬಿಟ್ಟಂಗಾಲದಲ್ಲಿ ಅಪಘಾತ ಸಂಭವಿಸಿದರೆ, ಕೊಳ್ತೋಡುವಿನಲ್ಲಿ ಲಾರಿ ಹಾಗೂ ಆ್ಯಂಬ್ಯುಲೆನ್ಸ್ ನಡುವೆ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಗಾಯಾಳುಗಳೆಲ್ಲ ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಟ್ಟಂಗಾಲ ಮುಖ್ಯ ರಸ್ತೆಯಲ್ಲಿ ಗೋಣಿಕೊಪ್ಪ ಕಡೆಯಿಂದ ಬರುತ್ತಿದ್ದ ಮೂಲತಃ ಚಿಕ್ಕಮಗಳೂರಿನ ಜಗದೀಪ್ ಅವರ ಕಾರು ಹಾಗೂ ಬಿ.ಶೆಟ್ಟಿಗೇರಿಯಿಂದ ವೀರಾಜಪೇಟೆಗೆ ಬರುತ್ತಿದ್ದ ಜಯಂತ್ ಎಂಬವರ ಕಾರಿಗೆ ಅಪಘಾತವಾಗಿ ಜಯಂತ್ ಅವರ ತಂದೆ ಶಶಿಕಾಂತ್ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ತಕ್ಷಣ ಅವರನ್ನು ವೀರಾಜಪೇಟೆ ಆಸ್ಪತ್ರೆಗೆ ದಾಖಲಿಸಿ ಮೈಸೂರಿಗೆ ಹೆಚ್ಚಿನ ಚಿಕಿತ್ಸೆಗೆಂದು ಆ್ಯಂಬ್ಯುಲೆನ್ಸ್ನಲ್ಲಿ ರವಾನಿಸುವ ಸಂದರ್ಭ ಕೊಳ್ತೋಡು ಬಳಿ ವೀರಾಜಪೇಟೆಯ ಡಿ.ಹೆಚ್.ಎಸ್. ಸಂಸ್ಥೆಗೆ ಸೇರಿದ ಲಾರಿ ನಡುವೆ ಮುಖಾಮುಖಿ ಅಪಘಾತವಾಗಿ ಆ್ಯಂಬ್ಯುಲೆನ್ಸ್ ಚಾಲಕ ಯಾದವ್ ಕುಮಾರ್ ಅವರಿಗೂ ಗಂಭೀರ ಗಾಯಗಳಾಗಿವೆ.

ಈ ವೇಳೆ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಮತ್ತೊಬ್ಬ ಚಾಲಕ ಸುನಿಲ್ ಆ್ಯಂಬ್ಯುಲೆನ್ಸ್ನಲ್ಲಿಯೇ ಗೋಣಿಕೊಪ್ಪ ತೆರಳಿ ಬರುವಾಗ ಘಟನೆ ಬಗ್ಗೆ ತಿಳಿದು ತಕ್ಷಣ ಆ್ಯಂಬ್ಯುಲೆನ್ಸ್ನಲ್ಲಿ ಯಾದವ್ ಅವರನ್ನು ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಿಸಿ ನಂತರ ಮೈಸೂರಿಗೆ ತೆರಳಿ ಶಶಿಕಾಂತ್ ಅವರನ್ನು ಚಿಕಿತ್ಸೆಗೆ ದಾಖಲಿಸಿದ್ದಾರೆ.

ಎರಡು ಪ್ರಕರಣಗಳು ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ. ಲಾರಿ ಚಾಲಕ ಪೊನ್ನು ಡಿಕ್ಕಿಯ ರಭಸದಲ್ಲಿಯೂ ಸಮಯಪ್ರಜ್ಞೆ ಮೆರೆದಿದ್ದು, ಅವಘಡದ ಸಂದರ್ಭ ಲಾರಿಯನ್ನು ತಿರುಗಿಸಿದ ಪರಿಣಾಮ ಮರಕ್ಕೆ ಡಿಕ್ಕಿಯಾಗಿದೆ. ಏನಾದರೂ ತಿರುಗಿಸದೆ ನೇರವಾಗಿ ಡಿಕ್ಕಿಯಾಗಿ ದ್ದಾರೆ ಆ್ಯಂಬ್ಯುಲೆನ್ಸ್ನಲ್ಲಿದ್ದವರೂ ಪ್ರಾಣಾಪಾಯಕ್ಕೆ ಒಳಗಾಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಲಾರಿ ಚಾಲಕ ಪೊನ್ನು ವೀರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ೨ ಪ್ರತ್ಯೇಕ ಪ್ರಕರಣಗಳಲ್ಲಿಯೂ ಎಲ್ಲಾ ವಾಹನಗಳು ನಜ್ಜುಗುಜ್ಜಾಗಿವೆ.

-ವರದಿ : ಕಿಶೋರ್ ಕುಮಾರ್ ಶೆಟ್ಟಿ, ರಜಿತಾ