ಮಡಿಕೇರಿ, ಮಾ. ೨೩: ಕರ್ನಾಟಕ ಪರಂಪರೆ ರ‍್ಯಾಲಿ ಪರಿಕಲ್ಪನೆಯೊಂದಿಗೆ ಜಿಲ್ಲೆಗೆ ಆಗಮಿಸಿರುವ ನೌಕಾದಳದ ಅಧಿಕಾರಿಗಳ ತಂಡ ಇಂದು ನಗರದ ಬಾಲಭವನ ಹಾಗೂ ಶಕ್ತಿ ವೃದ್ಧಾಶ್ರಮಕ್ಕೆ ಭೇಟಿ ನೀಡಿತ್ತು.

ಈ ತಂಡದೊAದಿಗೆ ನಿನ್ನೆ ಸೇರ್ಪಡೆಗೊಂಡಿರುವ ಅಧಿಕಾರಿ ರಿಯರ್ ಅಡ್ಮಿರಲ್ ರಾಮಕೃಷ್ಣನ್ ನೇತೃತ್ವದಲ್ಲಿ ಬಾಲಭವನಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಅಗ್ನಿಪಥ್ ಯೋಜನೆಯ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಹಲವು ಮಾಹಿತಿಗಳನ್ನು ನೀಡಲಾಯಿತು. ಮಕ್ಕಳೊಂದಿಗೆ ಸಂವಾದವನ್ನು ನಡೆಸಿದ ತಂಡದ ಪ್ರಮುಖರು ಬಳಿಕ ಮಕ್ಕಳಿಗೆ ಅಗತ್ಯ ವಸ್ತುಗಳು, ತಿಂಡಿ- ಪದಾರ್ಥಗಳನ್ನು ವಿತರಿಸಿದರು.

ಇದಾದ ನಂತರ ಶಕ್ತಿ ವೃದ್ಧಾಶ್ರಮಕ್ಕೆ ಭೇಟಿಯಿತ್ತು ಅಲ್ಲಿ ಆಶ್ರಯ ಪಡೆದಿರುವವರನ್ನು ಭೇಟಿಯಾಗಿ ವಿವಿಧ ಅಗತ್ಯತೆಯ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು.

ಪ್ರಮುಖರೊಂದಿಗೆ ಸಮಾಲೋಚನೆ

ಶುಕ್ರವಾರ ಸಂಜೆ ಕ್ಯಾಪಿಟಲ್ ವಿಲೇಜ್‌ನಲ್ಲಿ ನಿವೃತ್ತ ಸೇನಾಧಿಕಾರಿಗಳು ಹಾಗೂ ಇತರ ಪ್ರಮುಖರೊಂದಿಗೆ ಸಮಾಲೋಚನಾ ಸಭೆ ನಡೆಸಲಾಯಿತು. ಅಲ್ಲದೆ, ಅಧಿಕಾರಿಗಳಿಗೆ ಕೊಡಗಿನ ಕೊಡವ ಸಂಸ್ಕೃತಿಯಾದ ಉಮ್ಮತ್ತಾಟ್, ಕತ್ತಿಯಾಟ್, ಬೊಳಕಾಟ್‌ನಂತಹ ಜನಪದ ಕಲೆಗಳನ್ನು ಪ್ರದರ್ಶಿಸಿ ಇಲ್ಲಿ ವಿಶೇಷತೆ ಕುರಿತು ವಿವರಿಸಲಾಯಿತು ಎಂದು ೩೦ ಮಂದಿ ಅಧಿಕಾರಿಗಳ ತಂಡದೊAದಿಗೆ ಆಗಮಿಸಿರುವ ಕೊಡಗಿನವರಾದ ಲೆಫ್ಟಿನೆಂಟ್ ಕಮಾಂಡರ್ ಕುಂಚೆಟ್ಟಿರ ಸುಬ್ಬಯ್ಯ ಅವರು ‘ಶಕ್ತಿ’ಗೆ ಮಾಹಿತಿ ನೀಡಿದರು.