ಗೋಣಿಕೊಪ್ಪಲು, ಮಾ. ೨೩: ಕುಟ್ಟ ಭಾಗದ ಸುಂದರ ಪರಿಸರದ ನಡುವೆ ಅತಿ ಎತ್ತರದ ಗರುಡಗಿರಿಯಲ್ಲಿ ನಿರ್ಮಾಣವಾದ ಶ್ರೀಕೃಷ್ಣನ ದೇವಾಲಯದಲ್ಲಿ ೩ ದಿನಗಳ ಕಾಲ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಸಾವಿರಾರು ಭಕ್ತರು ಶ್ರೀ ಕೃಷ್ಣನ ದರ್ಶನ ಪಡೆದರು. ದೇವಾಲಯ ಆವರಣದಲ್ಲಿ ನಮಸ್ಕಾರ ಮಂಟಪ, ನಾಗನ ಪ್ರತಿಷ್ಠೆ, ಗಣಪತಿ ದೇವಾಲಯವಿದೆ.

ರೂ. ೩.೬೦ ಕೋಟಿ ವೆಚ್ಚದಲ್ಲಿ ದಾನಿಗಳ ಜನಪ್ರತಿನಿಧಿಗಳ ಸಹಕಾರದಿಂದ ೪೦ ವರ್ಷ ಇತಿಹಾಸವಿರುವ ಶ್ರೀ ಕೃಷ್ಣನ ದೇವಾಲಯ ಇದೀಗ ಲೋಕಾರ್ಪಣೆಗೊಂಡಿದ್ದು, ಪ್ರತಿ ನಿತ್ಯ ಪೂಜಾಕೈಂಕರ್ಯಗಳು ನಡೆಯಲಿವೆ. ಸುಮಾರು ೧ ಎಕರೆ ವಿಸ್ತಿçÃರ್ಣದಲ್ಲಿ ಸುಸಜ್ಜಿತ ದೇವಾಲಯವು ನಿರ್ಮಾಣಗೊಂಡಿದೆ. ಸ್ಥಳೀಯ ಶ್ರೀ ಕೃಷ್ಣ ದೇವಸ್ಥಾನ ಟ್ರಸ್ಟ್ನ ಆಡಳಿತ ಮಂಡಳಿಯ ವಿಶೇಷ ಶ್ರಮದೊಂದಿಗೆ ದೇವಾಲಯ ನಿರ್ಮಾಣವಾಗಿದೆ. ೩ ದಿನಗಳ ಕಾಲ ಹೋಮ, ಹವನ, ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.

ಕುಟ್ಟ, ಬಾಡಗ, ತೈಲ, ಹಾಗೂ ಮಂಚಳ್ಳಿ ಗ್ರಾಮಸ್ಥರು ಒಟ್ಟಾಗಿ ಸೇರಿ ಸಮಿತಿ ರಚನೆಗೊಂಡು ಆ ಮೂಲಕ ದೇವಾಲಯದ ನಿರ್ಮಾಣದ ಕೆಲಸಕ್ಕೆ ಮುಂದಾಗಿದ್ದರು.

ದೇವಾಲಯ ಸಮಿತಿಯ ಅಧ್ಯಕ್ಷ ಚೆಕ್ಕೆರ ಜಫ್ಫ್ ಗಣಪತಿ ಉಪಾಧ್ಯಕ್ಷ ತೀತಿರ ನರೇನ್ ಬಾಲಕೃಷ್ಣ, ಕಾರ್ಯದರ್ಶಿ ಚೋಡುಮಾಡ ಶರೀನ್ ಸುಬ್ಬಯ್ಯ ಸೇರಿದಂತೆ ೧೭ ಸಮಿತಿ ಸದಸ್ಯರು, ಮೂರು ದಿನಗಳ ಕಾಲ ನಡೆದ ಶ್ರೀ ಕೃಷ್ಣನ ಪ್ರತಿಷ್ಠಾಪನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕೊಡಗು ಸೇರಿದಂತೆ ಇತರ ಜಿಲ್ಲೆಗಳಿಂದ ಶ್ರೀ ಕೃಷ್ಣನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ದರ್ಶನ ನೀಡಿದ ಗರುಡ

ಶ್ರೀ ಕೃಷ್ಣನ ಪ್ರತಿಷ್ಠಾಪನೆಯ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದಂತೆಯೇ, ಗರುಡಗಿರಿಯ ಮೇಲೆ ಗರುಡವೊಂದು ಹಾರಾಡಿದೆ. ಪೂಜೆಯಲ್ಲಿ ಪಾಲ್ಗೊಂಡಿದ್ದ ಅಪಾರ ಭಕ್ತರು, ಆಡಳಿತ ಮಂಡಳಿಯವರು ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊAಡರು.