ಕುಶಾಲನಗರ, ಮಾ. ೨೪ : ಚುನಾವಣಾ ಸಂಬAಧ ವಾಹನಗಳ ತಪಾಸಣೆಗೆ ಕುಶಾಲನಗರ ಗಡಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಚುನಾವಣಾ ಅಧಿಕಾರಿಗಳು ಸಿಬ್ಬಂದಿಗಳು ಮೂಲಭೂತ ಸೌಕರ್ಯಗಳ ಕೊರತೆ ನಡುವೆ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಇದೆ.
ದಿನಕ್ಕೆ ಮೂರು ಪಾಳಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಚುನಾವಣಾ ಅಧಿಕಾರಿ ಸಿಬ್ಬಂದಿಗಳ ತಂಡದ ಸದಸ್ಯರು ಹೆದ್ದಾರಿ ರಸ್ತೆ ಬದಿಯಲ್ಲಿ ಧೂಳಿನ ನಡುವೆ ಕೆಲಸ ನಿರ್ವಹಿಸುತ್ತಿದ್ದಾರೆ.
ಇದರೊಂದಿಗೆ ಉರಿ ಬಿಸಿಲಿನಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ಅಧಿಕಾರಿ ಸಿಬ್ಬಂದಿಗಳಿಗೆ ನೆರಳಿಗೆ ಕನಿಷ್ಟ ಶಾಮಿಯಾನ ವ್ಯವಸ್ಥೆ ಕೂಡ ಕಲ್ಪಿಸಿಲ್ಲ. ವಿಶ್ರಾಂತಿಯ ಅಗತ್ಯತೆ ಬಂದಾಗ ಸ್ಥಳದಲ್ಲಿರುವ ಮರಗಳ ನೆರಳಿನ ಆಶ್ರಯ ಪಡೆಯುವಂತಹ ಪರಿಸ್ಥಿತಿ ಉಂಟಾಗಿದೆ. ಇದರೊಂದಿಗೆ ಕೇಂದ್ರದ ಸಮೀಪದಲ್ಲಿರುವ ಚರಂಡಿ ಮೂಲಕ ಹರಿಯುವ ಕಲುಷಿತ ನೀರಿನ ವಾಸನೆ ಇವರ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡುತ್ತಿದೆ.
ಸುಮಾರು ೪೦ ದಿನಗಳ ಕಾಲ ಬಿಸಿಲು ಚಳಿ ಮಳೆ ಎನ್ನದೆ ಚುನಾವಣಾ ಕೆಲಸ ಕಾರ್ಯ ನಿರಂತರವಾಗಿ ನಿರ್ವಹಿಸಬೇಕಾಗಿದ್ದು ತಕ್ಷಣ ಸಂಬAಧಿಸಿದ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಸೌಲಭ್ಯವನ್ನು ಕಲ್ಪಿಸಬೇಕಾಗಿದೆ.
ತಪಾಸಣಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚುನಾವಣಾ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಯಾವುದೇ ರೀತಿಯ ಗುರುತಿನ ಚೀಟಿ ಕೂಡ ಈ ಬಾರಿ ನೀಡಿಲ್ಲ . ಕೆಲವರು ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ನೀಡಿದ ಗುರುತಿನ ಚೀಟಿಯನ್ನು ಹಾಕಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವುದು ಗೋಚರಿಸಿದೆ.
ಈ ನಡುವೆ ಚುನಾವಣಾ ಕರ್ತವ್ಯ ಸಲ್ಲಿಸುತ್ತಿರುವ ಇತರೆ ಇಲಾಖೆಗಳಿಗೆ ೮ ಗಂಟೆಗಳ ಕಾಲ ಅವಧಿಯ ಪಾಳಿ ಇದ್ದರೆ ಪೊಲೀಸ್ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಮಾತ್ರ ದಿನವೊಂದಕ್ಕೆ ಸುಮಾರು ೨೦ ಗಂಟೆಗಳ ಕಾಲ ಕರ್ತವ್ಯ ಮಾಡುತ್ತಿರುವುದು ಕಂಡು ಬಂದಿದೆ. ಬೆಳಿಗ್ಗೆ ೮ ಗಂಟೆಗಳ ಕಾಲ ಸಂಜೆ ಮತ್ತೆ ನಿತ್ಯದ ಕರ್ತವ್ಯ ಮುಂದುವರಿಸುತ್ತಿದ್ದು, ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ವಿಶ್ರಾಂತಿಯ ಕೊರತೆ ಎದುರಿಸುತ್ತಿರುವುದು ಕಾಣಬಹುದು. ಚುನಾವಣಾ ಅಧಿಕಾರಿಗಳು ಈ ಬಗ್ಗೆ ಗಮನಿಸಿ ಕ್ರಮ ಕೈಗೊಳ್ಳಬೇಕಾಗಿದೆ. -ಚಂದ್ರಮೋಹನ್