ಮಡಿಕೇರಿ, ಮಾ. ೨೨: ನಗರದ ಪತ್ರಿಕಾ ಭವನದಲ್ಲಿ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಬರೆದ ‘ಕೂಪದಿ' ಕೊಡವ ಪುಸ್ತಕವನ್ನು ಕುಂಡ್ಯೋಳAಡ ಹಾಕಿ ಉತ್ಸವದ ಅಧ್ಯಕ್ಷ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ರಮೇಶ್, ಈ ಹಿಂದೆ ಪರಿಕರಗಳ ಕೊರತೆಯಿದ್ದಾಗ ಊಟವನ್ನು ಕೊಂಡೊಯ್ಯಲು ಬಾಳೆ ಎಲೆಯನ್ನು ಬಳಸಿಕೊಂಡು ಬುತ್ತಿ ಕಟ್ಟಲಾಗುತಿತ್ತು. ಇದಕ್ಕೆ ‘ಕೂಪದಿ’ ಎಂದು ಕರೆಯುತ್ತಾರೆ. ಕೊಡವ ಮಕ್ಕಡ ಕೂಟ ಸಾಹಿತ್ಯ ಕೃಷಿಯ ಮೂಲಕ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವ ಕೆಲಸ ಮಾಡುತ್ತಿದೆ. ಪುಸ್ತಕ ಹೊರತರುವುದು ಕಷ್ಟದಾಯಕ. ಹಣ ಬಲವಿದ್ದರೆ ಮಾತ್ರ ಪುಸ್ತಕ ಪ್ರಕಟಿಸುವುದು ಸಾಧ್ಯವಾಗುವುದಿಲ್ಲ. ಅದಕ್ಕೆ ಶುದ್ಧ ಮನಸ್ಸಿರಬೇಕು. ಪುಸ್ತಕ ಪ್ರಕಾಶನ ಮೂಲಕ ಬೊಳ್ಳಜಿರ ಅಯ್ಯಪ್ಪ ಕೊಡವ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ಸುತ್ತಮುತ್ತಲಿನ ಘಟನಾವಳಿಗಳಿಂದ ಸಾಹಿತ್ಯ ವಸ್ತುಗಳು ದೊರೆಯುತ್ತವೆ. ಸಾಹಿತಿಗಳು ಅಧ್ಯಯನ ಶೀಲರಾಗಿರಬೇಕು. ಕೊಡಗಿನಲ್ಲಿ ಉತ್ತಮ ಸಾಹಿತಿಯಾಗಿ ಗುರುತಿಸಿಕೊಂಡಿರುವ ಫ್ಯಾನ್ಸಿ ಮುತ್ತಣ್ಣ ಅವರಿಂದ ಮತ್ತಷ್ಟು ಕೃತಿಗಳು ಹೊರಬರುವಂತಾಗಲಿ ಎಂದು ಆಶಿಸಿದರು.

ಸಾಹಿತಿ ಹಂಚೆಟ್ಟೀರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, ತನ್ನ ೭ನೇ ಪುಸ್ತಕ ಇದಾಗಿದ್ದು, ಬೊಳ್ಳಜಿರ ಅಯ್ಯಪ್ಪ ಅವರ ಶ್ರಮದಿಂದ ಪುಸ್ತಕ ಸುಲಭವಾಗಿ ಪ್ರಕಟಗೊಂಡಿದೆ. ಈ ರೀತಿಯ ಕಾರ್ಯಕ್ರಮದಿಂದ ಹಲವು ಲೇಖಕರಿಗೆ ಪ್ರೋತ್ಸಾಹ ದೊರೆತಂತಾಗಿದೆ. ಓದುಗರು ಕೂಡ ಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಕೊಡವ ಮಕ್ಕಡ ಕೂಟದ ಸಲಹೆಗಾರ ಕುಲ್ಲೇಟಿರ ಅಜಿತ್ ನಾಣಯ್ಯ ಮಾತನಾಡಿ, ಯಾವ ಸಂಘಟನೆಗಳು ಮಾಡದ ಕೆಲಸವನ್ನು ಕೊಡವ ಮಕ್ಕಡ ಕೂಟ ಮಾಡುತ್ತಿದೆ. ಆಟ್-ಪಾಟ್ ಶಿಬಿರದ ಮೂಲಕ ಸಂಸ್ಕೃತಿ ಉಳಿವಿಗೆ ಶ್ರಮಿಸಿದೆ ಎಂದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ದಾನಿಗಳ ಸಹಕಾರದಿಂದ ೮೭ ಪುಸ್ತಕ ಲೋಕಾರ್ಪಣೆ ಕಂಡಿದೆ. ೧೩ ಪುಸ್ತಕಗಳು ಬಿಡುಗಡೆ ಹಂತದಲ್ಲಿವೆ. ಸಾಹಿತಿ ಹಾಗೂ ಓದುಗರ ಸಂಖ್ಯೆ ಹೆಚ್ಚಾಗಬೇಕು. ಸಂಶೋಧನಾ ಕೃತಿಗಳು ಮತ್ತಷ್ಟು ಪ್ರಕಟವಾಗಬೇಕು. ಇದರಿಂದ ಅಧ್ಯಯನಕ್ಕೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಕೇವಲ ಕೊಡವ ಭಾಷೆ ಮಾತ್ರವಲ್ಲ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಪುಸ್ತಕವನ್ನು ಪ್ರಕಟಿಸಲಾಗಿದೆ. ಪ್ರಕಟಗೊಂಡ ಪುಸ್ತಕಗಳಲ್ಲಿ ಕೆಲವು ಸಿನಿಮಾವಾಗಿದೆ. ಮುಂದೆ ಬಾಲಿವುಡ್ ಸಿನಿಮಾ ಕೂಡ ತಯಾರಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಚೀಯಕಪೂವಂಡ ಸಚಿನ್ ಪೂವಯ್ಯ, ಪೊನ್ನಚೆಟ್ಟಿರ ಪ್ರದೀಪ್ ಹಾಜರಿದ್ದರು.