ಕುಶಾಲನಗರ, ಮಾ. ೨೨: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಬಾಗಿಲಲ್ಲಿ ನೇತಾಡಿ ಕೊಂಡು ಪ್ರಯಾಣಿಸುತ್ತಿದ್ದ ಹತ್ತಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಇಳಿಸಿ ಅವರಿಗೆ ಅಪಾಯದ ಬಗ್ಗೆ ಅರಿವು ಮೂಡಿಸಿ ಬದಲಿ ವಾಹನ ವ್ಯವಸ್ಥೆ ಕಲ್ಪಿಸಿದ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರ ಕರ್ತವ್ಯ ಪ್ರಜ್ಞೆ ಎಲ್ಲರ ಗಮನ ಸೆಳೆಯಿತು.

ಕುಶಾಲನಗರ-ಮಡಿಕೇರಿ ಹೆದ್ದಾರಿ ರಸ್ತೆಯ ತಾವರೆಕೆರೆ ಬಳಿ ಶುಕ್ರವಾರ ಬೆಳಿಗ್ಗೆ ಈ ದೃಶ್ಯ ಕಂಡು ಬಂತು. ಕುಶಾಲನಗರದಿಂದ ಮಡಿಕೇರಿಗೆ ತೆರಳುತ್ತಿದ್ದ ನಿಲುಗಡೆ ಬಸ್ಸಿನಲ್ಲಿ ನೂರಕ್ಕೂ ಅಧಿಕ ಪ್ರಯಾಣಿಕರನ್ನು ತುಂಬಿಕೊAಡು ಹೋಗುತ್ತಿದ್ದು, ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್‌ನ ಎರಡು ಬಾಗಿಲುಗಳಲ್ಲಿ ನೇತಾಡಿಕೊಂಡು ಹೋಗುತ್ತಿದ್ದಾಗ ತಾವರೆಕೆರೆ ಬಳಿ ಕರ್ತವ್ಯದಲ್ಲಿದ್ದ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಆಶಾ ಎಂಬವರು ಗಮನಿಸಿ, ಬಸ್ಸನ್ನು ನಿಲ್ಲಿಸಿ ನೇತಾಡುತ್ತಿದ್ದ ವಿದ್ಯಾರ್ಥಿಗಳನ್ನು ಬಸ್ ನಿಂದ ಇಳಿಸಿ ಅವರಿಗೆ ಅಪಾಯದ ಬಗ್ಗೆ ಅರಿವು ಮೂಡಿಸಿ ಬಸ್ ಸಿಬ್ಬಂದಿಗಳಿಗೆ ತಿಳಿಹೇಳಿ ನಂತರ ಆ ವಿದ್ಯಾರ್ಥಿಗಳನ್ನು ಅದೇ ದಾರಿಯಲ್ಲಿ ತೆರಳುತ್ತಿದ್ದ ಆಟೋ ಮತ್ತು ಇತರ ವಾಹನಗಳಲ್ಲಿ ಕಾಲೇಜಿಗೆ ತೆರಳಲು ವ್ಯವಸ್ಥೆ ಕಲ್ಪಿಸಿದ ದೃಶ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಯಿತು.

ಕುಶಾಲನಗರ ಸರಕಾರಿ ಬಸ್ ನಿಲ್ದಾಣದಿಂದ ನಿತ್ಯ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಸರಕಾರಿ ಇಂಜಿನಿಯರಿAಗ್ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತರಗತಿಗೆ ತೆರಳಲು ಬಸ್ಸಿನ ಕೊರತೆ ಉಂಟಾಗಿದ್ದು ಈ ಸಂದರ್ಭ ಬಸ್‌ನಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಯಾಣಿಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.

ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಈ ಬಗ್ಗೆ ಗಮನಿಸಿ, ಅಗತ್ಯವಿರುವ ಬಸ್ ಸೌಲಭ್ಯ ಕಲ್ಪಿಸಬೇಕಾಗಿದೆ ಎನ್ನುವುದು ಇಲ್ಲಿನ ನಾಗರಿಕರ ಕೋರಿಕೆಯಾಗಿದೆ.

-ಸಿಂಚು