ಸೋಮವಾರಪೇಟೆ, ಮಾ. ೨೧: ಇಲ್ಲಿನ ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಜಾತ್ರೋತ್ಸವ ಹಲವು ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ಸಂಪನ್ನಗೊAಡಿತು.

ದೇವಾಲಯದಲ್ಲಿ ರಾತ್ರಿ ಭಗವತಿ ದೇವಿಯ ಕೋಲ, ಕಂಡಕರ್ಣ ದೇವರ ಕೋಲ, ಪೊಟ್ಟನ್‌ದೇವರ ಕೋಲ, ಕರಿಂಗುಟ್ಟಿ ಚಾತನ್‌ದೇವರ ಕೋಲ ಜರುಗಿತು. ಬೆಳಗಿನ ಜಾವ ೫ ಗಂಟೆಗೆ ಪೊಟ್ಟನ್‌ದೇವರು ಅಗ್ನಿಗೇರುವ ದೃಶ್ಯ ಎಲ್ಲರನ್ನೂ ಭಕ್ತಿಯ ಪರಾಕಾಷ್ಠೆಗೆ ಕೊಂಡೊಯ್ಯಿತು.

ನಂತರ ಶ್ರೀ ಮುತ್ತಪ್ಪನ್ ಹಾಗೂ ತಿರುವಪ್ಪನ್ ದೇವರ ಕೋಲ ಜರುಗಿತು. ರಕ್ತ ಚಾಮುಂಡಿ ದೇವಿಯ ಕೋಲ, ವಿಷ್ಣುಮೂರ್ತಿ ದೇವರ ಕೋಲ, ಕಂಡಕರ್ಣ ದೇವರ ಗುರು ಶ್ರೀದರ್ಪಣ ಸಾವಿರಾರು ಭಕ್ತಾದಿಗಳ ಸಮ್ಮುಖ ಸಂಪನ್ನಗೊAಡಿತು.

ಗುಳಿಗ ದೇವರ ಕೋಲ ಮುಗಿದ ನಂತರ ಗುಳಿಗ ದೇವರಿಗೆ ಬಲಿ ಅರ್ಪಣೆ ನಡೆಯಿತು. ಸಂಜೆ ವಿಷ್ಣುಮೂರ್ತಿ ದೇವರು ದೇವಾಲಯದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ಪ್ರಸಕ್ತ ಸಾಲಿನ ಜಾತ್ರೋತ್ಸವ ತೆರೆಕಂಡಿತು.

ಮೂರು ದಿನಗಳ ಕಾಲ ಭಕ್ತಾದಿಗಳಿಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತಾದಿಗಳು ರಾತ್ರಿಯಿಡೀ ವೆಳ್ಳಾಟಂ ಮತ್ತು ಕೋಲಗಳನ್ನು ವೀಕ್ಷಿಸಿದರು. ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಜಾತ್ರೋತ್ಸವದ ಅಂಗವಾಗಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ, ಅರ್ಚಕರಾದ ಜಗದೀಶ್ ಉಡುಪ, ವೆಂಕಟೇಶ್ ಹೊಳ್ಳ, ಚಂದ್ರಶೇಖರ್, ಪ್ರಸಾದ್ ಭಟ್ ಮತ್ತಿತರರು ಪೂಜಾ ಕಾರ್ಯವನ್ನು ನೆರವೇರಿಸಿದರು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ ಕುಮಾರ್ ಮತ್ತು ಪದಾಧಿಕಾರಿಗಳು, ಸದಸ್ಯರುಗಳು, ಮುತ್ತಪ್ಪನ್ ದೇವಾಲಯದ ಮಡಯನ್ ಸುಧೀಶ್, ಕ್ಷೇತ್ರದ ಭಕ್ತಾದಿಗಳು ಇದ್ದರು.