ಮಡಿಕೇರಿ, ಮಾ. ೨೨: ಕೊಡಗು ಜಿಲ್ಲೆಯಲ್ಲಿ ಆರು ವರ್ಷದೊಳಗಿನ ಮಕ್ಕಳಲ್ಲಿ ಸಾಧಾರಣ ಮತ್ತು ತೀವ್ರ ಅಪೌಷ್ಟಿಕ ಮಕ್ಕಳನ್ನು ಪತ್ತೆ ಮಾಡಲಾಗಿದ್ದು, ಕೊಡಗು ಜಿಲ್ಲೆ ಇಡೀ ರಾಜ್ಯದಲ್ಲಿ ಅತೀ ಕಡಿಮೆ ಅಪೌಷ್ಟಿಕತೆ ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜಿಲ್ಲೆಯಲ್ಲಿ ಫೆಬ್ರವರಿ ಅಂತ್ಯದವರೆಗೆ ಕೇವಲ ೩೫೯ ಮಕ್ಕಳಲ್ಲಿ ಮಾತ್ರ ಅಪೌಷ್ಟಿಕತೆ ಕಂಡುಬAದಿದೆ. ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿಗಳ ಮೂಲಕ ೮ ಸಾವಿರಕ್ಕೂ ಅಧಿಕ ಮಕ್ಕಳನ್ನು ತೂಕ ಮಾಡಲಾಗಿದ್ದು, ಇದರಲ್ಲಿ ಕೇವಲ ೪೬ ಮಕ್ಕಳಲ್ಲಿ ಮಾತ್ರ ತೀವ್ರ ಅಪೌಷ್ಟಿಕತೆ ಕಂಡು ಬಂದಿದ್ದು, ಉಳಿದಂತೆ ೩೧೩ ಮಕ್ಕಳಲ್ಲಿ ಸಾಧಾರಣ ಪ್ರಮಾಣದ ಅಪೌಷ್ಟಿಕತೆ ಕಂಡು ಬಂದಿದ್ದು, ಕೊಡಗು ಜಿಲ್ಲೆ ಮಕ್ಕಳಲ್ಲಿ ಅಪೌಷ್ಟಿಕತೆ ನಿಯಂತ್ರಿಸುವಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ.
ಅಪೌಷ್ಟಿಕತೆ ಮಕ್ಕಳ ಬಗ್ಗೆ ಕಾಳಜಿ ನಿಯಂತ್ರಣಕ್ಕೆ ಕಾರಣ
ಕೊಡಗು ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ನಿಯಂತ್ರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ. ಮಕ್ಕಳ ತಾಯಿಯಂದಿರಿಗೆ ಮಕ್ಕಳಿಗೆ ನೀಡಬೇಕಾದ ಆಹಾರದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳು ಕಂಡಬAದರೆ ಅವರಿಗೆ ಆರೋಗ್ಯ ಇಲಾಖೆಯ ಸಹಕಾರದಿಂದ ವಿಶೇಷ ಆರೋಗ್ಯ ತಪಾಸಣೆ ನಡೆಸಿ ಅವರ ಆರೋಗ್ಯ ಮತ್ತು ಆಹಾರದ ಬಗ್ಗೆ ಅಂಗನವಾಡಿ ಕಾರ್ಯಕರ್ತರು ನಿಗಾ ಇಡುವ ಕಾರಣ ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ನಿಯಂತ್ರಣದಲ್ಲಿದೆ. ಅದಲ್ಲದೇ ಪ್ರತೀ ತಿಂಗಳು ಆಯಾ ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ಮುಖಾಂತರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಮಕ್ಕಳ ಅಪೌಷ್ಟಿಕತೆ ಬಗ್ಗೆ ನಿರಂತರವಾಗಿ ಅರಿವು ಮೂಡಿಸುತ್ತಿದೆ. ಅದಲ್ಲದೇ ಇತರೆ ಜಿಲ್ಲೆಗಳಲ್ಲಿ ಕ್ಷೀರ ಭಾಗ್ಯ ಯೋಜನೆಯಡಿಯಲ್ಲಿ ವಿತರಿಸುತ್ತಿರುವ ಹಾಲಿನ ಪುಡಿಯನ್ನು ಕೆಲವು ಜಿಲ್ಲೆಗಳಲ್ಲಿ ಸ್ಥಗಿತಮಾಡಲಾಗಿತ್ತು. ಆದರೆ ಕೊಡಗು ಜಿಲ್ಲೆಯಲ್ಲಿ ಸ್ಥಗಿತಗೊಂಡಿಲ್ಲ. ಅದಲ್ಲದೇ ಮಕ್ಕಳಿಗೆ ಮೊಟ್ಟೆಯನ್ನು ಕೂಡ ವಿತರಿಸಲಾಗುತ್ತಿವೆ.
ಅಂಗನವಾಡಿ ಕೇಂದ್ರಗಳಲ್ಲಿ ತಾಯಿಯಂದಿರಿಗೆ ಪೌಷ್ಟಿಕ ಆಹಾರ ಶಿಬಿರವನ್ನು ನಡೆಸಲಾಗುತ್ತಿದೆ. ಇದರಲ್ಲಿ ಅಪೌಷ್ಟಿಕತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವನ್ನು ವಿತರಿಸಲಾಗುತ್ತಿದೆ. ಅಪೌಷ್ಟಿಕ ಮಕ್ಕಳು ಪತ್ತೆಯಾದರೆ ಜಿಲ್ಲೆಯಲ್ಲಿ ತಕ್ಷಣ ಅಂಗನವಾಡಿ ಕಾರ್ಯಕರ್ತೆಯರು ಅವರನ್ನು ವೈದ್ಯರ ಮೂಲಕ ಆರೋಗ್ಯ ತಪಾಸಣೆಗೆ ಒಳಗಾಗುವಂತೆ ಮಾಡುವುದರಿಂದ ಮತ್ತು ಅಪೌಷ್ಟಿಕತೆ ಪತ್ತೆಯಾದ ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸುವುದರಿಂದ ಜಿಲ್ಲೆಯಲ್ಲಿ ಅಪೌಷ್ಟಿಕತೆ ಉಳ್ಳ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ನಟರಾಜು ಹೇಳುತ್ತಾರೆ. ೨೦೨೩ ಡಿಸೆಂಬರ್ ಅಂತ್ಯದವರೆಗೆ ರಾಜ್ಯದ ಜಿಲ್ಲೆಗಳಲ್ಲಿ ಅಂಗನವಾಡಿಗಳ ಮೂಲಕ ಆರು ವರ್ಷದೊಳಗಿನ ೨೭.೭೩ ಲಕ್ಷ ಮಕ್ಕಳನ್ನು ತೂಕ ಮಾಡಲಾಗಿದ್ದು, ಈ ಪೈಕಿ ಸಾಧಾರಣ ಅಪೌಷ್ಟಿಕ ಮಕ್ಕಳ ಸಂಖ್ಯೆ ೧,೪೬,೭೪೯, ತೀವ್ರ ಅಪೌಷ್ಟಿಕತೆಯುಳ್ಳ ಮಕ್ಕಳ ಸಂಖ್ಯೆ ೭೩,೩೦೦ ಇರುವುದು ಪತ್ತೆಯಾಗಿದೆ. ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿ-ಅAಶಗಳು ಹೇಳುತ್ತಿವೆ. ಸಾಧಾರಣ ಮತ್ತು ತೀವ್ರ ಅಪೌಷ್ಟಿಕ ಮಕ್ಕಳನ್ನು ಪತ್ತೆ ಮಾಡಲು ಇಲಾಖೆಯು ಅಂಗನವಾಡಿಗಳ ಮೂಲಕ ತೂಕ ಮಾಡುವ ಸಂದರ್ಭದಲ್ಕಿ ಬೆಳಗಾವಿ ಜಿಲ್ಲೆಯ ಅತೀ ಹೆಚ್ಚು ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬಂದಿದೆ. ಮಕ್ಕಳಿಗೆ ಇದೀಗ ಸರ್ಕಾರ ಪೂರಕ ಪೌಷ್ಟಿಕ ಆಹಾರವಾಗಿ ೧ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ವಿತರಿಸುತ್ತಿದೆ.
ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗಲು ಕಾರಣವೇನು...?
ಗರ್ಭಾವಸ್ಥೆಯಲ್ಲಿದ್ದಾಗಿನಿಂದ ಪೌಷ್ಟಿಕ ಆಹಾರದ ಕೊರತೆ, ಅವಧಿಪೂರ್ವ ಜನನ, ವಯಸ್ಸಿಗೆ ತಕ್ಕಂತೆ ಮಕ್ಕಳ ದೈಹಿಕ ಬೆಳವಣಿಗೆ ಕ್ಷೀಣ, ಬಾಲ್ಯವಿವಾಹ, ಬಡತನ, ವಯಸ್ಸಿಗೆ ತಕ್ಕ ತೂಕವಿರದಿರುವುದು, ಹೀಗೆ ನಾನಾ ಕಾರಣಗಳಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬರುತ್ತಿದೆ. ತೀವ್ರ ಅಪೌಷ್ಟಿಕತೆಯಿಂದ ಐದು ವರ್ಷದೊಳಗಿನ ಮಕ್ಕಳು ಮರಣ ಹೊಂದುವ ಸಾಧ್ಯತೆ ಕೂಡ ಇದೆ. ರಾಜ್ಯದಲ್ಲಿ ಕೋವಿಡ್ ಬಳಿಕ ಮಕ್ಕಳಲ್ಲಿ ಅತೀ ಹೆಚ್ಚು ಅಪೌಷ್ಟಿಕತೆ ಕಂಡುಬರುತ್ತಿದೆ.
- ಕೆ.ಎಂ ಇಸ್ಮಾಯಿಲ್ ಕಂಡಕರೆ