ಭಾಗಮAಡಲ, ಮಾ. ೨೧: ಯಾತ್ರಾರ್ಥಿಗಳಿಗೆ ಅಧ್ಯಾತ್ಮಿಕ ವಾತಾವರಣದ ಅನುಭವಕ್ಕಾಗಿ ಭಾಗಮಂಡಲದ ಸಂಗಮ ಪರಸರವನ್ನು ಹಸಿರೀಕಣದೊಂದಿಗೆ ಸಜ್ಜುಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಪ್ರಾಯಪಟ್ಟರು. ಕನ್ನಿಕೆ ಮತ್ತು ಸುಜ್ಯೋತಿ ನದಿಗಳು ಕಾವೇರಿಯನ್ನು ಸೇರುವ ಭಾಗಮಂಡಲ ತ್ರಿವೇಣೀ ಸಂಗಮದಲ್ಲಿ ನಡೆಯುತ್ತಿರುವ ಪರಿಸರ ಆಧಾರಿತ ಸೌಂದರ್ಯೀಕರಣ ಕಾಮಗಾರಿಗಳ ಬಗ್ಗೆ ಕೇಳಿದಾಗ ಅವರು “ಶಕ್ತಿ” ಯೊಂದಿಗೆ ಈ ಅಭಿಪ್ರಾಯ ವ್ಯಕ್ತಗೊಳಿಸಿದರು. ಈ ಹಿಂದೆ ಶಾಸಕ ಎ.ಎಸ್.ಪೊನ್ನಣ್ಣ ಅವರ ಮನವಿಗೆ ಸ್ಪಂದಿಸಿದ ಕಾವೇರಿ ನೀರಾವರಿ ನಿಗಮದಿಂದ ರೂ. ೨ ಕೋಟಿ ಬಿಡುಗಡೆ ಮಾಡಲಾಗಿದ್ದು, ಸೌಂದರ್ಯೀಕರಣ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಈ ಮೊತ್ತದಲ್ಲಿ ಇಲ್ಲಿಯವರೆಗೆ ರೂ. ೧ ಕೋಟಿ ೯೨ ಲಕ್ಷ ವೆಚ್ಚ ಮಾಡಲಾಗಿದ್ದು, ಉಳಿದ ಮೊತ್ತವನ್ನು ಆದ್ಯತೆಯ ಮೇರೆಗೆ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಗತ್ಯ ಕಾಮಗಾರಿಗಳಿಗಾಗಿ ತಜ್ಞರೊಂದಿಗೆ ಸಮಾಲೋಚಿಸಿ ತೀರ್ಮಾನಿಸಲಾಗುವುದು ಎಂದು ವಿವರಿಸಿದರು. ೪೦ ವರ್ಷಗಳಿಂದ ಸಂಗಮದ ಬಳಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಐತಿಹಾಸಿಕ ಭಗಂಡೇಶ್ವರ ದೇವಸ್ಥಾನದ ಬಳಿಯಿರುವ ತ್ರಿವೇಣಿ ಸಂಗಮದ ಆವರಣವು ಕಾವೇರಿ ಸಂಗಮದ ಮುಂಭಾಗದ ಎರಡೂ ಬದಿಗಳಲ್ಲಿ ಸಂಪೂರ್ಣ ಸುತ್ತಮುತ್ತಲಿನ ಪ್ರದೇಶದಲ್ಲಿ ಆಕರ್ಷಕ ಉದ್ಯಾನವನಗಳ ರಚನೆಯೊಂದಿಗೆ ಇದೀಗ ಕಂಗೊಳಿಸುತ್ತಿದೆ. ಮಧ್ಯ ಭಾಗದಲ್ಲಿ ಯಾತ್ರಾರ್ಥಿಗಳು ಸಂಗಮದ ಬಳಿ ತೆರಳಲು ಮಾರ್ಗ ಬಿಡಲಾಗಿದ್ದು ಸುತ್ತಲಿನ ಪರಿಸರದಲ್ಲಿ ಹೂವಿನ ಗಿಡಗಳು, ಹಸಿರೆಲೆಗಳ ಸಸ್ಯಗಳಿಂದ ಸುಂದರಗೊಳಿಸಲಾಗಿದೆ. ಯಾತ್ರಾರ್ಥಿಗಳು ಸಂಗಮ ಕಡೆಗೆ ನಡೆಯುವಾಗ ಮತ್ತು ನದಿ ಸಂಗಮದಲ್ಲಿ ಪವಿತ್ರ ಸ್ನಾನದ ನಂತರ ದೇವಸ್ಥಾನವನ್ನು ತಲುಪಲು ಹಿಂದಿರುಗುವಾಗ ಆಕರ್ಷಕ ಹೂವುಗಳು ಮತ್ತು ಸಸ್ಯರಾಶಿಯ ಹಸಿರು ಪರಿಸರವನ್ನು ಆನಂದಿಸಬಹುದು. ತ್ರಿವೇಣಿ ಸಂಗಮದ ಸುತ್ತಲೂ ಆಕರ್ಷಕವಾದ ಹೂಗಳಿಂದ ಅಲಂಕರಿಸಿದ ಉದ್ಯಾನಗಳನ್ನು ನಿರ್ಮಿಸಲಾಗಿದೆ. ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಉದ್ಯಾನವನದ ಸುತ್ತಲೂ ಸ್ಟೀಲ್ ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ತ್ರಿವೇಣಿ ಸಂಗಮದಲ್ಲಿ ಕುಳಿತು ವೀಕ್ಷಣೆಗೆ ಶಿಲೆಯ ಆಸನಗಳನ್ನು ವ್ಯವಸ್ಥೆಗೊಳಿಸುವ ಕುರಿತು ಈ ಹಿಂದೆ ಯೋಜನೆ ರೂಪಿಸಲಾಗಿತ್ತು, ಆದರೆ, ಸದ್ಯಕ್ಕೆ ಇದನ್ನು ಕಾರ್ಯಗತಗೊಳಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಂಗಮ ಪ್ರವೇಶ ದ್ವಾರದ ಮಧ್ಯ ಭಾಗದಲ್ಲಿ ಹೆಂಚುಗಳ ಹೊದಿಕೆಯೊಂದಿಗೆ ಮುಖ್ಯ ಶಿಲಾ ಕಮಾನು ನಿರ್ಮಿಸಲಾಗುತ್ತಿದ್ದು ಎಡ ಮತ್ತು ಬಲ ಬದಿಗಳಲ್ಲಿಯೂ ಪ್ರತ್ಯೇಕ ಮತ್ತೆರಡು ಕಿರಿದಾದ ಕಮಾನುಗಳನ್ನು ನಿರ್ಮಿಸಲಾಗುತ್ತದೆ. ಸಂಗಮ ಪ್ರವೇಶ ಮಾಡುವ ಸಂದರ್ಭ ದೇವಾಲಯದೊಳಕ್ಕೆ ಪ್ರವೇಶಿಸುವ ಭಾವನೆ ಬರುವಂತೆ ಇವುಗಳನ್ನು ನಿರ್ಮಿಸಲಾಗುತ್ತಿದೆ. ಮೂರು ಕಮಾನುಗಳನ್ನು ಕೌಶಲ್ಯದ ಶಿಲಾ ಕೆಲಸಗಳೊಂದಿಗೆ ನಿರ್ಮಿಸಲಾಗುತ್ತಿದೆ. ರಾತ್ರಿಯ ವೇಳೆ ಉದ್ಯಾನಗಳ ಪಕ್ಕದಲ್ಲಿ ಹರಿಯುವ ಕಾವೇರಿ ಸಂಗಮದ ವಿಧ್ಯುಕ್ತ ನೋಟವನ್ನು ವೀಕ್ಷಿಸಲು ಆಲಂಕಾರಿಕ ಬೆಳಕಿನ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಉದ್ಯಾನದ ಸುತ್ತಲೂ ಮತ್ತು ಮಧ್ಯದಲ್ಲಿ ಇಂಟರ್ಲಾಕ್, ಜಾರದ ರೀತಿಯ ಗ್ರಾನೈಟ್‌ಗಳನ್ನು ಅಳವಡಿಸಿಲಾಗಿದೆ.

ಉದ್ಯಾನವನ ಈಗ ಆಕರ್ಷಕವಾಗಿ ಕಂಡರೂ ಮಳೆಗಾಲದಲ್ಲಿ ತನ್ನ ಆಕರ್ಷಣೆಯನ್ನು ಉಳಿಸಿಕೊಳ್ಳಲಿದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ..

ಕಾವೇರಿಯ ಉಗಮ ಸ್ಥಾನ ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರಗಳಿಗೆ ಅಸಂಖ್ಯಾತ ಪ್ರವಾಸಿಗರು ಭಕ್ತರು ಇತ್ತೀಚೆಗೆ ಭೇಟಿ ನೀಡುತ್ತಿದ್ದಾರೆ. ತಲಕಾವೇರಿ ಕ್ಷೇತ್ರ ಮತ್ತು ಭಾಗಮಂಡಲದ ಭಗಂಡೇಶ್ವರ ದೇವಾಲಯಗಳನ್ನು ಹಲವು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿದೆಯಾದರೂ ತ್ರಿವೇಣಿ ಸಂಗಮದ ಬಳಿ ಆಹ್ಲಾದಕರ ವಾತಾವರಣದ ಕೊರತೆಯಿತ್ತು. ಅದನ್ನು ನೀಗಿಸುವ ಸಲುವಾಗಿ ಹಾಗೂ ಸಂಗಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲು ಈ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಭಾಗಕ್ಕೆ ಸುತ್ತಲೂ ಭದ್ರತಾ ವ್ಯವಸ್ಥೆಯನ್ನು ಕೂಡ ಏರ್ಪಡಿಸಲಾಗುತ್ತಿದೆ.

- ಕುಯ್ಯಮುಡಿ ಸುನಿಲ್