ಪೊನ್ನಂಪೇಟೆ, ಮಾ. ೨೨: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ವೀರಾಜಪೇಟೆ ಮತ್ತು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಇವುಗಳ ಆಶ್ರಯದಲ್ಲಿ ಜೇನು ಸಾಕಾಣಿಕೆ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ. ಕೆಂಚರೆಡ್ಡಿ, ಜೇನು ಸಾಕಾಣಿಕೆಯಿಂದ ರೈತರಿಗೆ ಆಗುವ ಲಾಭಗಳು, ಪರಾಗಸ್ಪರ್ಶ ಆಗಿ ಬೆಳೆಯ ಇಳುವರಿ ಹೆಚ್ಚಾಗುವ ಬಗ್ಗೆ, ಜೇನು ನೊಣಗಳಿಂದ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

ಆನಂತರ ಜೇನು ಕುಟುಂಬದಲ್ಲಿರುವ ರಾಣಿ ಜೇನು ನೊಣ, ಗಂಡು ಜೇನು ನೊಣದ ಪ್ರಯೋಜನದ ಬಗ್ಗೆ ತಿಳಿಸಿದರು. ಜೇನು ಸಾಕಾಣಿಕೆಗೆ ಆಗುವ ಖರ್ಚು-ವೆಚ್ಚ, ಗಳಿಸಬಹುದಾದ ಆಧಾಯದ ಬಗ್ಗೆ ಮತ್ತು ಜೇನಿನ ವಿಧಗಳಾದ ಕೋಲು ಜೇನು, ತುಡವೆ ಜೇನು, ಮುಜಂಟಿ ಜೇನು, ಹೆಜ್ಜೇನು ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು.

ಕೃಷಿ ಮೇಲ್ವಿಚಾರಕ ಹರೀಶ್ ಕುಮಾರ್ ಸೇವಾಪ್ರತಿನಿಧಿಗಳಾದ ಸರೋಜ ಬಾಳೆಲೆ, ಸರೋಜ ದೇವರಪುರ ಉಪಸ್ಥಿತರಿದ್ದರು.