ಮಡಿಕೇರಿ, ಮಾ. ೨೧: ಲೋಕಸಭಾ ಚುನಾವಣೆ ಸಂಬAಧಿಸಿದAತೆ ಕಾಂಗ್ರೆಸ್ ಗೆಲುವಿಗೆ ರಣತಂತ್ರರೂಪಿಸುವ ನಿಟ್ಟಿನಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರತಿವಲಯ ಮತ್ತು ಬೂತ್ ಅಧ್ಯಕ್ಷರ ಹೊಣೆಗಾರಿಕೆ ಮತ್ತು ಕಾರ್ಯಸೂಚಿಗಳ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡರವರು ನಿರ್ದೇಶನ ನೀಡಿದರು. ಮಡಿಕೇರಿ ವಿಧಾನ ಸಭಾ ಕ್ಷೇತ್ರಕ್ಕೆ ಇಲ್ಲಿಯ ವರೆಗೆ ತಾವು ಚಾಲನೆ ನೀಡಿರುವ ಮತ್ತು ವಿಶೇಷವಾಗಿ ಬಿಡುಗಡೆ ಮಾಡಿಸಿದ ಅನುದಾನಗಳ ಒಟ್ಟು ಮೊತ್ತ ೩೫೦ ಕೋಟಿ ರೂಗಳನ್ನು ಮೀರಿದ್ದು ಅವುಗಳ ವಿವರಗಳನ್ನು ಜನತೆಯ ಮುಂದಿಡಲು ಸೂಚನೆ ನೀಡಿದರು. ಪ್ರತಿಯೊಬ್ಬ ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ ಈ ಬಾರಿ ಕೊಡಗಿನ ಇಬ್ಬರು ಶಾಸಕರುಗಳಾದ ಡಾ. ಮಂತರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ನವರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಕಾಂಗ್ರೆಸ್ ಪಕ್ಷಕ್ಕೆ ಮತಗಳಿಕೆಯ ಆಧಾರ ಸ್ತಂಭವಾಗಿದ್ದು ಪರಿಶ್ರಮ ಪಡುವಂತೆ ಕಾರ್ಯಕರ್ತರಿಗೆ ಸೂಚಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸರವರು ಕಳೆದ ಬಾರಿಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಡಿಕೇರಿ ಬ್ಲಾಕ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ದೊರಕಿದ್ದು ಆ ಮುನ್ನಡೆಯನ್ನು ದುಪ್ಪಟ್ಟು ಹೆಚ್ಚು ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಎಲ್ಲಾ ಕಾರ್ಯಕರ್ತರ ಸಹಕಾರದಿಂದ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಧರ್ಮಜ ಉತ್ತಪ್ಪ ಹಾಗೂ ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ನೇಮಕಗೊಂಡ ಮಂದ್ರಿರ ಮೋಹನ್ ದಾಸ್‌ರವರನ್ನು ಸನ್ಮಾನಿಸಲಾಯಿತು.

ಡಿಸಿಸಿ ಉಪಾಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಕೆಪಿಸಿಸಿ ಮುಖಂಡರಾದ ಟಿ.ಪಿ.ರಮೇಶ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್ ಹಾಗೂ ಇತರ ಪ್ರಮುಖರು ಹಾಜರಿದ್ದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ವಿ.ಜಿ.ಮೋಹನ್ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ರವೂಫ್ ಶೇಖ್ ವಂದಿಸಿದರು.