ಮಡಿಕೇರಿ, ಮಾ. ೨೦: ಮಲೆನಾಡು ಜಿಲ್ಲೆಯಾದರೂ ಕೊಡಗು ಈ ಬಾರಿ ನೀರಿನ ಅಭಾವ ಎದುರಿಸುವಂತಾಗಿದ್ದು, ದಿನೇ ದಿನೇ ಪರಿಸ್ಥಿತಿ ಮತ್ತಷ್ಟು ಉಲ್ಭಣಗೊಳ್ಳುತ್ತಿದೆ.

ಮಾರ್ಚ್ ಎರಡನೇ ವಾರದಲ್ಲೇ ನೀರಿಗಾಗಿ ಹಾಹಾಕಾರ ಎದುರಾಗಿರುವುದು ಜಿಲ್ಲೆಯ ದುರಂತವಾಗಿದೆ. ನೀರಿನ ಸಮಸ್ಯೆಯ ನಡುವೆಯೇ ಸುಡುಬಿಸಿಲಿನ ಈಗಿನ ಸನ್ನಿವೇಶದಲ್ಲಿ ಮತ್ತೊಂದು ವಿಚಾರದತ್ತಲೂ ಜನರೂ ಸೇರಿದಂತೆ ಜಿಲ್ಲಾಡಳಿತ, ಅರಣ್ಯ ಇಲಾಖೆ, ಸಂಬAಧಿಸಿದ ಎಲ್ಲರೂ ಹೆಚ್ಚಿನ ಜಾಗ್ರತೆ ವಹಿಸಬೇಕಾಗಿದೆ.

ಬೇಸಿಗೆಯ ಸಂದರ್ಭದಲ್ಲಿ ಅಗ್ನಿ ಅನಾಹುತಗಳು ಸಂಭವಿಸುವ ಅಪಾಯವಿದ್ದು, ಈ ಬಗ್ಗೆ ಪ್ರಸಕ್ತ ವರ್ಷ ಹಿಂದಿನ ವರ್ಷಗಳಿಗಿಂತಲೂ ಹೆಚ್ಚಿನ ಜಾಗ್ರತೆಯನ್ನು ವಹಿಸಲೇಬೇಕಾಗಿದೆ. ಈಗಾಗಲೇ ಅಲ್ಲಲ್ಲಿ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಅನಾಹುತಗಳು ಉಂಟಾಗಿರುವ ಬಗ್ಗೆ ವರದಿಯಾಗುತ್ತಿರುವುದನ್ನು ಜನರು ಗಮನಿಸಿದ್ದಾರೆ. ಕಾಡ್ಗಿಚ್ಚು ಸೇರಿದಂತೆ ಇತರ ರೀತಿಯಲ್ಲಿ ಬೆಂಕಿ ಅವಘಡಗಳು ದುರದೃಷ್ಟವಶಾತ್ ಸಂಭವಿಸುವ ಸಾಧ್ಯತೆಗಳನ್ನು ಮೊದಲೇ ಎಚ್ಚರಿಕೆ ವಹಿಸಿ ತಪ್ಪಿಸಿಕೊಳ್ಳಬೇಕಾಗಿರುವುದು ಇಂದಿನ ಅಗತ್ಯತೆಯೂ ಆಗಿದೆ. ಒಂದು ವೇಳೆ ದುರಂತಗಳು ಘಟಿಸಿಹೋದಲ್ಲಿ ಮೊದಲೇ ನೀರಿನ ತತ್ವಾರವಿರುವುದರಿಂದ ನಿಯಂತ್ರಿಸುವುದು ಹೇಗೆ? ಎಂಬುದನ್ನು ಗಂಭೀರವಾಗಿ ಮನಗಾಣಬೇಕಿದೆ.

ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೆಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆಯಾದರೂ ಇದಕ್ಕೆ ಜನ ಸಾಮಾನ್ಯರ ಸಹಕಾರವೂ ಅತ್ಯಗತ್ಯವಾಗಿದೆ. ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಮಾತ್ರವಲ್ಲ ಖಾಸಗಿ ತೋಟಗಳ ಸುತ್ತಮುತ್ತಲು ಸೇರಿದಂತೆ ಇತರ ಸ್ಥಳಗಳಲ್ಲೂ ಫಯರ್ ಲೈನ್ (ಬೆಂಕಿ ನಿಯಂತ್ರಣ ರೇಖೆ)ಯನ್ನು ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಈ ಹಿಂದಿನ ವರ್ಷಗಳಲ್ಲಿಯೂ ಬೇಸಿಗೆ ಸಂದರ್ಭದಲ್ಲಿ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಆವರಿಸಿಕೊಂಡು ಸಾವಿರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವ ನಿದರ್ಶನಗಳಿವೆ.

ಹಲವೆಡೆ ಖಾಸಗಿ ತೋಟಗಳು, ಹುಲ್ಲಿನ ಮೆದೆಗಳೂ ಬೆಂಕಿಯ ಕೆನ್ನಾಲಗೆಗೆ ಸಿಲುಕಿರುವ ಉದಾಹರಣೆಗಳಿದ್ದು, ಈ ಬಗ್ಗೆ ಗಂಭೀರ ಚಿಂತನೆ ಅಗತ್ಯವಾಗಿದೆ. ನಗರ-ಪಟ್ಟಣ-ಸ್ಥಳೀಯ- ಸಂಸ್ಥೆಗಳೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಎಲ್ಲೆಲ್ಲೂ ನೀರಿನ ಅಭಾವವಿರುವುದರಿಂದ ಬೆಂಕಿ ನಂದಿಸುವ ಕೆಲಸ ಈ ಬಾರಿ ತೀರಾ ಪ್ರಯಾಸಕರವಾಗಲಿದೆ ಎಂಬುದನ್ನು ಸಂಬAಧಿಸಿದ ಇಲಾಖೆಗಳೊಂದಿಗೆ ಜನತೆಯೂ ಅರಿತುಕೊಳ್ಳಬೇಕಿದೆ. ಬೀಡಿ-ಸಿಗರೇಟು ಸೇದಿ ಸಿಕ್ಕಿದಲ್ಲಿ ಬಿಸಾಡುವಂತಹ ಹೀನ ಕೆಲಸವನ್ನು ಯಾರೂ ಮಾಡಬಾರದು, ಬೆಂಕಿಯ ಕಿಡಿಯ ಬಗ್ಗೆ ಹೆಚ್ಚಿನ ನಿಗಾವಹಿಸಬೇಕಿದೆ. ಜಿಲ್ಲೆಯಲ್ಲಿ ಅಗ್ನಿಶಾಮಕ ದಳದ ವಾಹನಗಳೂ ಕಡಿಮೆ ಇವೆ. ಇದ್ದರೂ ಎಲ್ಲಾ ಪ್ರದೇಶಗಳಲ್ಲಿ ನೀರು ಲಭಿಸುವುದಿಲ್ಲ. ಕೇವಲ ಮನುಷ್ಯರು ಮಾತ್ರವಲ್ಲ ಪ್ರಾಣಿಪಕ್ಷಿ ಸಂಕುಲಕ್ಕೂ ಇತರ ರೀತಿಯ ಪ್ರಾಕೃತಿಕ ಸಂಪತ್ತಿಗೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಪ್ರತಿಯೊಬ್ಬರು ಮನದಟ್ಟು ಮಾಡಿಕೊಳ್ಳಲೇಬೇಕು. ಪ್ರಸಕ್ತ ವರ್ಷ ಈಗಾಗಲೇ ಒಂದೆರಡು ಕಡೆಗಳಲ್ಲಿ ಸಣ್ಣಪುಟ್ಟ ಬೆಂಕಿ ದುರಂತಗಳು ಈಗಾಗಲೇ ಸಂಭವಿಸಿದ್ದು, ಅದೃಷ್ಟವಶಾತ್ ಹೆಚ್ಚಿನ ಅನಾಹುತ ನಡೆದಿಲ್ಲ. ಮುನ್ನೆಚ್ಚರಿಕೆಯೊಂದೇ ಮಾರ್ಗವಾಗಿರುವದರಿಂದ ಎಲ್ಲರೂ ಜವಾಬ್ದಾರಿ ಅರಿತುಕೊಳ್ಳಬೇಕೆಂಬುದಾಗಿ ‘ಶಕ್ತಿ’ ಈ ಮೂಲಕ ಸಾರ್ವಜನಿಕರಲ್ಲಿ ನಿವೇದಿಸಿಕೊಳ್ಳುತ್ತಿದೆ. ಬಯಲು ಪ್ರದೇಶಕ್ಕೂ ಭೌಗೋಳಿಕವಾಗಿ ವಿಭಿನ್ನವಾಗಿ ಬೆಟ್ಟಗುಡ್ಡಗಳು ಅರಣ್ಯ ತೋಟಗಳಿಂದ ಆವೃತ್ತವಾಗಿರುವ ಮಲೆನಾಡು ಜಿಲ್ಲೆ ಕೊಡಗಿಗೂ ವ್ಯತ್ಯಾಸವಿರುವುದನ್ನು ಎಲ್ಲರೂ ಅರಿತುಕೊಳ್ಳುವಂತಾಗಬೇಕು.