ಸೋಮವಾರಪೇಟೆ, ಮಾ. ೨೧: ಮಡಿಕೇರಿ-ಸೋಮವಾರಪೇಟೆ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಮತ್ತು ಸರ್ಕಾರಿ ಬಸ್ ನಡುವೆ ಮಾದಾಪುರದಲ್ಲಿ ತಿಕ್ಕಾಟ ನಡೆದಿದ್ದು, ಘಟನೆ ಪೊಲೀಸ್ ಠಾಣಾ ಮೆಟ್ಟಿಲೇರಿದೆ.

ಸೋಮವಾರಪೇಟೆಯಿಂದ ಮಾದಾಪುರಕ್ಕೆ ತೆರಳಿ ವಾಪಸಾಗುತ್ತಿದ್ದ ಖಾಸಗಿ ಬಸ್ ಹಾಗೂ ಅದೇ ಮಾರ್ಗವಾಗಿ ಸೋಮವಾರಪೇಟೆಗೆ ಬರುತ್ತಿದ್ದ ಸರ್ಕಾರಿ ಬಸ್‌ಗಳು ಮಾದಾಪುರ ಸೇತುವೆಯ ಮೇಲೆ ತಿಕ್ಕಾಟ ನಡೆಸಿವೆ.

ಇಂದು ಸಂಜೆ ೪ ಗಂಟೆ ಸುಮಾರಿಗೆ ಮಾದಾಪುರ ಸೇತುವೆ ಮೇಲೆ ಸಂಚರಿಸುತ್ತಿದ್ದ ಖಾಸಗಿ ಬಸ್‌ಗೆ ಬಲಬದಿಯಲ್ಲಿ ತೆರಳುತ್ತಿದ್ದ ಸರ್ಕಾರಿ ಬಸ್ ಒಮ್ಮೆಲೆ ಎಡಕ್ಕೆ ಬಂದಿದ್ದು, ಪರಿಣಾಮ ಖಾಸಗಿ ಬಸ್, ಸರ್ಕಾರಿ ಬಸ್‌ಗೆ ಗುದ್ದಿದೆ. ಈ ಘಟನೆಯ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮಡಿಕೇರಿಯಿಂದಲೇ ಎರಡೂ ಬಸ್‌ಗಳ ಚಾಲಕರ ನಡುವೆ ಪೈಪೋಟಿ ಏರ್ಪಟ್ಟಿದ್ದು, ಮಾದಾಪುರದಲ್ಲಿ ಇದು ತಾರಕಕ್ಕೇರಿದೆ. ಪರಿಣಾಮ ಬಸ್‌ಗಳು ತಿಕ್ಕಾಟ ನಡೆಸಿವೆ. ಘಟನೆಯಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಖಾಸಗಿ ಬಸ್‌ನ ಮುಂಭಾಗ ಹಾಗೂ ಸರ್ಕಾರಿ ಬಸ್‌ನ ಹಿಂಭಾಗ ಸಣ್ಣಪುಟ್ಟ ಜಖಂಗೊAಡಿದೆ.

ಘಟನೆಯ ಬಗ್ಗೆ ಖಾಸಗಿ ಬಸ್‌ನ ಚಾಲಕ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.