ಮೇಕೆದಾಟು ಯೋಜನೆಗೆ ಡಿಎಂಕೆ ವಿರೋಧ ಪ್ರಣಾಳಿಕೆ

ಬೆಂಗಳೂರು, ಮಾ. ೨೧: ೨೦೨೪ ಲೋಕಸಭಾ ಚುನಾವಣೆಯಲ್ಲಿ ‘‘ಇಂಡಿಯಾ’’ ಒಕ್ಕೂಟ ಗೆದ್ದು ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಕಾವೇರಿ ನದಿಗೆ ನಿರ್ಮಿಸಲು ಯೋಜಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ತಡೆಯುವುದಾಗಿ ಡಿಎಂಕೆ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದು ಕರ್ನಾಟಕದ ಕಾಂಗ್ರೆಸ್ ಮುಖಂಡರಿಗೆ ತೀವ್ರ ಇರಿಸು ಮುರಿಸು ಉಂಟು ಮಾಡಿದೆ. ಐಎನ್‌ಡಿಐಎ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪ್ರಮುಖ ಪಕ್ಷವಾಗಿದ್ದು, ಡಿಎಂಕೆ ಪ್ರಣಾಳಿಕೆಯಿಂದ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಅದಲ್ಲದೇ ಡಿಎಂಕೆ ಪ್ರಣಾಳಿಕೆ ಐಎನ್‌ಡಿಐಎ ಒಕ್ಕೂಟದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆಗೂ ಮುನ್ನ ‘ನಮ್ಮ ನೀರು ನಮ್ಮ ಹಕ್ಕು’ ಎಂದು ದೊಡ್ಡ ಪಾದಯಾತ್ರೆಯನ್ನೇ ಕಾಂಗ್ರೆಸ್ ನಡೆಸಿತ್ತು. ಆದರೆ, ಈಗ ಕಾಂಗ್ರೆಸ್‌ನ ಮಿತ್ರಪಕ್ಷವೇ ಮೇಕೆದಾಟು ಡ್ಯಾಂಗೆ ತಡೆ ತರುತ್ತೇವೆ ಎಂದಿರುವುದು ಬಿಜೆಪಿಗೆ ಕರ್ನಾಟಕದಲ್ಲಿ ಅಸ್ತç ಸಿಕ್ಕಂತಾಗಿದೆ.

ಮೆಟ್ರೋ ರೈಲು ಹಳಿ ಮೇಲೆ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು, ಮಾ. ೨೧: ಮೆಟ್ರೋ ರೈಲು ಬರುತ್ತಿದ್ದಂತೆಯೇ ಹಳಿ ಮೇಲೆ ಜಿಗಿದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆತಂಕಕಾರಿ ಘಟನೆ ಗುರುವಾರ ನಡೆದಿದೆ. ಮಧ್ಯಾಹ್ನ ೨.೧೦ ನಿಮಿಷದಲ್ಲಿ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಮೆಟ್ರೋ ರೈಲಿನ ಅಡಿಯಲ್ಲಿ ಸಿಲುಕಿದ್ದ ಶವವನ್ನು ಕೆಲಕಾಲ ಹರಸಾಹಸದ ಬಳಿಕ ಹೊರಗೆ ತರಲಾಯಿತು. ಮೃತ ವಿದ್ಯಾರ್ಥಿಯನ್ನು ನ್ಯಾಷನಲ್ ಲಾ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಧ್ರುವ್ ಎಂದು ಗುರುತಿಸಲಾಗಿದೆ. ಆತನ ರುಂಡ, ಮುಂಡ ಬೇರ್ಪಟ್ಟಿದ್ದು, ದೇಹ ಛಿದ್ರಗೊಂಡಿತ್ತು. ಆದರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಮೆಟ್ರೋ ಪಿಆರ್ ಒ ಯಶವಂತ್ ಚೌಹಾಣ್ ಮಾಹಿತಿ ನೀಡಿದ್ದಾರೆ. ಮೊಬೈಲ್ ನಲ್ಲಿ ಮಾತನಾಡಿಕೊಂಡೆ ಹಳಿ ಮೇಲೆ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಿಂದಾಗಿ ವೈಟ್‌ಫೀಲ್ಡ್ನಿಂದ ಚಲ್ಲಘಟ್ಟ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಕೆಲಕಾಲ ಮಾಗಡಿ ರಸ್ತೆ ಮತ್ತು ವೈಟ್ ಫೀಲ್ಡ್ ನಡುವಣ ಮಾತ್ರ ರೈಲು ಸಂಚಾರವಿತ್ತು.

ಶೋಭಾ ಕರಂದ್ಲಾಜೆ, ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮೊಕದ್ದಮೆ

ಬೆಂಗಳೂರು, ಮಾ. ೨೧: ಚುನಾವಣಾಧಿಕಾರಿಗಳ ದೂರಿನ ಮೇರೆಗೆ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಈ ನಡುವೆ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧವೂ ಹಲಸೂರು ಗೇಟ್ ಪೊಲೀಸರು ದ್ವೇಷ ಭಾಷಣದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಮಾರ್ಚ್ ೧ ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೆ ತಮಿಳುನಾಡಿನ ವ್ಯಕ್ತಿಯೊಬ್ಬರು ಕಾರಣ ಎಂದು ಆರೋಪ ಮಾಡಿದ್ದ ಶೋಭಾ ಕರಂದ್ಲಾಜೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಎಂಕೆ ಮನವಿ ಮಾಡಿತ್ತು. ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕರಂದ್ಲಾಜೆ, ತಮ್ಮ ಹೇಳಿಕೆಯನ್ನು ಹಿಂತೆಗೆದುಕೊAಡಿದ್ದಾರೆ ಮತ್ತು ಅದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಆದರೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಡಿಎಂಕೆ ನೀಡಿದ ದೂರಿನ ಕುರಿತು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ಬುಧವಾರ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ(ಸಿಇಒ)ಗೆ ಸೂಚಿಸಿತ್ತು. ಗುರುವಾರ, ಚುನಾವಣಾ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ, ಕಾಟನ್‌ಪೇಟೆ ಪೊಲೀಸರು ಕೇಂದ್ರ ಸಚಿವೆ ವಿರುದ್ಧ ಧರ್ಮ, ಜನಾಂಗ, ಜಾತಿ ಆಧಾರದ ಮೇಲೆ ಜನರ ನಡುವೆ ದ್ವೇಷ ಉತ್ತೇಜಿಸಿದ ಆರೋಪದ ಮೇಲೆ ಸೆಕ್ಷನ್ ೧೨೩ (೩ಂ), ೧೨೩ (೩), ಮತ್ತು ೧೨೫ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ, ಕಳೆದ ಭಾನುವಾರ ನಗರತ್ ಪೇಟೆಯಲ್ಲಿ ಆಜಾನ್ ಸಂದರ್ಭದಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಿ ಅಂಗಡಿಯವನ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ತೇಜಸ್ವಿ ಸೂರ್ಯ ವಿರುದ್ಧ ಹಲಸೂರು ಗೇಟ್ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.

ಮಹಿಳೆ, ಮೊಮ್ಮಗಳನ್ನು ತುಂಡರಿಸಿ ಕೆರೆಗೆ ಎಸೆದ ಹಂತಕರು!

ಮAಡ್ಯ, ಮಾ. ೨೧: ಮಹಿಳೆ ಮತ್ತು ಆಕೆಯ ಎರಡೂವರೆ ವರ್ಷದ ಮೊಮ್ಮಗಳನ್ನು ಕೊಂದು, ಮೃತದೇಹಗಳನ್ನು ತುಂಡು ತಂಡಾಗಿ ಕತ್ತರಿಸಿ ಕೆರೆಗೆ ಎಸೆದಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಚಿಕ್ಕಮಗಳೂರು ಜಿಲ್ಲೆಯ ಕಲ್ಕೆರೆ ಗ್ರಾಮದ ನಿವಾಸಿ ಜಯಮ್ಮ (೪೬) ಮತ್ತು ಆಕೆಯ ಮೊಮ್ಮಗಳು ರಿಷಿಕಾ ಎಂದು ಗುರುತಿಸಲಾಗಿದೆ. ಆದಿಚುಂಚನಗಿರಿಯಲ್ಲಿ ಸಾಲ ನೀಡಿದ್ದ ವ್ಯಕ್ತಿಯನ್ನು ಭೇಟಿಯಾಗಿ, ಹಣ ವಾಪಸ್ ಪಡೆದು ಮನೆಗೆ ಮರಳುವುದಾಗಿ ಕುಟುಂಬ ಸದಸ್ಯರಿಗೆ ಹೇಳಿದ್ದ ಜಯಮ್ಮ ಮಾರ್ಚ್ ೧೨ ರಂದು ಮೊಮ್ಮಗಳೊಂದಿಗೆ ಮನೆಯಿಂದ ಹೊರಟಿದ್ದರು. ಆದರೆ, ಮಾರ್ಚ್ ೧೮ರವರೆಗೆ ಮನೆಗೆ ವಾಪಸ್ ಬಾರದೆ, ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಕಂಡು ಬಂದ ಹಿನ್ನೆಲೆ ಮಗ ಪ್ರವೀಣ್ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಅದೇ ದಿನ, ಪ್ರವೀಣ್‌ಗೆ ಅಪರಿಚಿತರಿಂದ ಕರೆ ಬಂದಿದ್ದು, ಅವರು ತಮ್ಮ ತಾಯಿ ಮತ್ತು ಮಗಳನ್ನು ಕೊಂದು, ಮೃತದೇಹಗಳನ್ನು ತುಂಡಾಗಿ ಕತ್ತರಿಸಿ ಗೋಣಿ ಚೀಲಗಳಲ್ಲಿ ತುಂಬಿ ಆದಿಚುಂಚನಗಿರಿ ಬಳಿಯ ಕೆರೆಗೆ ಎಸೆದಿರುವುದಾಗಿ ಹೇಳಿದ್ದರು. ಮಾಹಿತಿ ನೀಡಿದ ನಂತರ, ಪೊಲೀಸರು ಕೆರೆಯಿಂದ ಗೋಣಿ ಚೀಲಗಳನ್ನು ಹೊರತೆಗೆದಿದ್ದು, ಅದರಲ್ಲಿ ಜಯಮ್ಮ ಮತ್ತು ಅವರ ಮೊಮ್ಮಗಳ ಶವಗಳು ಪತ್ತೆಯಾಗಿವೆ. ಬೆಳ್ಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.