ಸೋಮವಾರಪೇಟೆ, ಮಾ. ೧೯: ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಮತ್ತು ಕುಡಿಯುವ ನೀರಿನ ಶುದ್ಧೀಕರಣ ಘಟಕದ ಸಮೀಪ ರಸ್ತೆ ಬದಿಯಲ್ಲಿ ಹಾಕಿರುವ ತ್ಯಾಜ್ಯ ಮತ್ತು ಮಹದೇಶ್ವರ ಬ್ಲಾಕ್ ರಸ್ತೆಯಲ್ಲಿರುವ ಅಬಕಾರಿ ಇಲಾಖೆಯ ಮುಂಭಾಗ ರಸ್ತೆ ಬದಿ ನಿಲ್ಲಿಸಿರುವ ವಾಹನಗಳನ್ನು ತಕ್ಷಣ ತೆರವುಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ನಗರ ಘಟಕ ಆಗ್ರಹಿಸಿದೆ.
ಈ ಬಗ್ಗೆ ಪಟ್ಟಣ ಪಂಚಾಯಿತಿ ಮತ್ತು ಅಬಕಾರಿ ಇಲಾಖಾ ಕಚೇರಿಗೆ ಮನವಿ ಸಲ್ಲಿಸಿರುವ ಕಾರ್ಯಕರ್ತರು, ತಕ್ಷಣ ತೆರವುಗೊಳಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಕರವೇ ನಗರ ಘಟಕದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಮಡಿಕೇರಿ ರಸ್ತೆಯಲ್ಲಿರುವ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಕಟ್ಟಡಗಳನ್ನು ಒಡೆದ ಕಲ್ಲು, ಮಣ್ಣು, ಗಾರೆ, ಇಟ್ಟಿಗೆ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲಿ ಸುರಿಯಲಾಗಿದ್ದು, ಇದರಿಂದಾಗಿ ವಾಹನ ಮತ್ತು ಸಾರ್ವಜನಿಕರ ಸಂಚಾರಕ್ಕೆ ತೊಡಕಾಗಿದೆ.
ಅಂತೆಯೇ ಅಬಕಾರಿ ಇಲಾಖೆಯಿಂದ ವಶಪಡಿಸಿಕೊಂಡ ವಾಹನವನ್ನು ಕಚೇರಿ ಮುಂಭಾಗದ ರಸ್ತೆ ಬದಿಯಲ್ಲಿ ನಿಲುಗಡೆಗೊಳಿಸಲಾಗಿದೆ. ತಿರುವು ರಸ್ತೆಯಾಗಿರುವುದರಿಂದ ಇತರ ವಾಹನಗಳ ಸಂಚಾರ, ನಿಲುಗಡೆಗೆ ಸಮಸ್ಯೆಯಾಗಿದೆ. ತಕ್ಷಣ ಈ ಬಗ್ಗೆ ಗಮನ ಹರಿಸಿ ತ್ಯಾಜ್ಯ-ವಾಹನಗಳನ್ನು ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಕರವೇ ವತಿಯಿಂದ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭ ಕರವೇ ನಗರ ಘಟಕದ ಕಾರ್ಯದರ್ಶಿ ಕೆ.ಪಿ. ರವೀಶ್, ಸಹ ಕಾರ್ಯದರ್ಶಿ ಮಹಮ್ಮದ್ ಶಫಿ, ಗೌರವಾಧ್ಯಕ್ಷ ದೇವೇಂದ್ರ, ಸಲಹೆಗಾರ ದೇವರಾಜು ಸೇರಿದಂತೆ ಶೇಖರ್, ವೆಂಕಟೇಶ, ಲತ, ಸಿಮ್ರಾನ್ ಬಾನು, ಗಣೇಶ್, ಇಬ್ರಾಹಿಂ, ರವಿ, ಮಣಿ, ಅಜಯ್, ಸೀಮಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.