ವೀರಾಜಪೇಟೆ, ಮಾ. ೨೦: ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದು, ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ತೀವ್ರಗೊಂಡಿದೆ.
ಕರ್ನಾಟಕ ಕೇರಳ ಅಂತರರಾಜ್ಯ ಸಂಪರ್ಕ ಕಲ್ಪಿಸುವ ಮಾಕುಟ್ಟ ಚೆಕ್ ಪೋಸ್ಟ್ ಬಳಿ ಕೇರಳದಿಂದ ವೀರಾಜಪೇಟೆ ಮೂಲಕ ಜಿಲ್ಲೆಗೆ ಪ್ರವೇಶ ಮಾಡುವ ಪ್ರತಿಯೊಂದು ವಾಹನಗಳನ್ನು ನಿಯಮಾನುಸಾರವಾಗಿ ನೋಂದಣಿ ಮಾಡಿ ನಂತರ ತಪಾಸಣೆ ಮಾಡಿ ಬಿಡಲಾಗುತ್ತಿದೆ. ಪೊಲೀಸ್ ಇಲಾಖೆ ಹಗಲು ರಾತ್ರಿ ನಿರಂತರವಾಗಿ ಗಡಿಭಾಗದಲ್ಲಿ ತಪಾಸಣೆಯಲ್ಲಿ ನಿರತರಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸರಕು ಸಾಗಣೆ ಮಾಡುವವರು ಸೂಕ್ತ ಕಾನೂನು ದಾಖಲೆಗಳನ್ನು ಹೊಂದಿರಬೇಕು. ಸರಕು ವಾಹನ ತಪಾಸಣೆ ವೇಳೆ ಮಾಲೀಕರು ಅಥವಾ ಸರಕು ಸಾಗಣೆದಾರರು ಜಿಎಸ್ಟಿಐಎನ್ ಬಿಲ್ ಮತ್ತು ಇತರ ದಾಖಲೆಗಳನ್ನು ಇಟ್ಚುಕೊಂಡಿರುವುದು ಅತ್ಯಗತ್ಯ. ಇದಲ್ಲದೆ ವಸ್ತುವನ್ನು ಖರೀದಿಸಿದ ಸ್ಥಳ, ಉದ್ದೇಶ ಸೇರಿದಂತೆ ಇತರ ದಾಖಲೆಗಳನ್ನು ಇಟ್ಟುಕೊಂಡಿರಬೇಕು.
ವಾಣಿಜ್ಯ ಬಳಕೆಗೆ, ಇ-ವೇ ಬಿಲ್ ಕಡ್ಡಾಯವಾಗಿದೆ. ಇದು ವಾಣಿಜ್ಯ ತೆರಿಗೆ ಇಲಾಖೆಯಿಂದ ನೀಡಲಾಗುವ ಎಲೆಕ್ಟಾçನಿಕ್ ಬಿಲ್ ಆಗಿದೆ. ಕೃಷಿ ಉತ್ಪನ್ನಗಳಿಗೆ, ಯಾವುದೇ ಇ-ವೇ ಬಿಲ್ ಅಗತ್ಯವಿಲ್ಲ, ಆದರೆ ಹಣಕಾಸಿನ ವಹಿವಾಟಿನ ವಿವರಗಳನ್ನು ಪ್ರಮಾಣೀಕರಿಸುವ ಇತರ ಕಾನೂನು ದಾಖಲೆಗಳನ್ನು ಹೊಂದಿರ ಬೇಕಾಗುತ್ತದೆ. ಅಂಗಡಿ ಅಥವಾ ಕಾರ್ಖಾನೆ ಇದ್ದರೆ, ಡೀಲರ್ಗಳ ವಿವರಗಳು, ತಯಾರಕರ ವಿವರ, ಗುಣಮಟ್ಟ ಮತ್ತು ವಾಹನದ ವಿವರಗಳು, ಜಿಎಸ್ಟಿ ಬಿಲ್ಗಳ ಅಗತ್ಯವಿರುತ್ತದೆ ಎಂದು ಅಧಿಕಾರಿಗಳು ಹಾಗೂ ಪೊಲೀಸರು ತಿಳಿಸಿದ್ದಾರೆ.
ಚುನಾವಣಾ ಭದ್ರತೆ ಮುಖ್ಯವಾಗಿದ್ದು, ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳು ಪ್ರತಿ ಟ್ರಕ್ ಮತ್ತು ಸಾಗಣೆದಾರರು, ಸರಕು ಮತ್ತು ಇತರ ವಸ್ತುಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಪರವಾನಗಿ ಮತ್ತು ಸರಿಯಾದ ದಾಖಲೆಗಳಿಲ್ಲದ ಯಾವುದೇ ಲಾರಿ ಅಥವಾ ಸರಕುಗಳ ವಾಹನವನ್ನು ವಶಕ್ಕೆ ಪಡೆಯಲಾಗುವುದು ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವೀರಾಜಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಮಾಕುಟ್ಟ ಗಡಿ ಚೆಕ್ಪೋಸ್ಟ್ಗೆ ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ವೀರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಶಿವರುದ್ರ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.