ಮುಳ್ಳೂರು, ಮಾ. ೨೦: ಆಟ ಆಡುತ್ತಿದ್ದ ಬಾಲಕನ ಮೇಲೆ ಏಕಾಏಕಿ ಬೀದಿನಾಯಿಯೊಂದು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದ ಘಟನೆ ಬುಧವಾರ ಬೆಳಿಗ್ಗೆ ಆಲೂರುಸಿದ್ದಾಪುರದಲ್ಲಿ ಸಂಭವಿಸಿದೆ. ಆಲೂರುಸಿದ್ದಾಪುರ ಗ್ರಾಮದ ಮಮತ ಎಂಬುವವರ ಪುತ್ರ ೮ ವರ್ಷದ ಮೋಕ್ಷಿತ್ ಗಾಯಗೊಂಡ ಬಾಲಕ. ಬೆಳಿಗ್ಗೆ ೯ ಗಂಟೆ ಸುಮಾರಿಗೆ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿ ಬಳಿ ಬಾಲಕ ಮೋಕ್ಷಿತ್ ಆಟವಾಡುತ್ತಿದ್ದಾಗ ಏಕಾಏಕಿ ಬಂದ ಬೀದಿನಾಯಿಯೊಂದು ಬಾಲಕನ ಮೇಲೆ ದಾಳಿ ನಡೆಸಿದೆ. ಬಾಲಕ ಮೋಕ್ಷಿತ್ ಕೂಗಿಕೊಂಡು ಓಡಿದರೂ ಬಿಡದ ಬೀದಿನಾಯಿ ಅಟ್ಟಾಡಿಸಿಕೊಂಡು ಬೀಳಿಸಿದೆ. ಬಾಲಕನ ಕಾಲು, ಕೈ, ಕುತ್ತಿಗೆ, ಮುಖ, ಕಣ್ಣು ಭಾಗಕ್ಕೆಲ್ಲ ಕಚ್ಚಿ ಗಾಯಗೊಳಿಸಿದೆ, ಬಾಲಕ ಕೂಗುತ್ತಿದ್ದುದ್ದನ್ನು ಗಮನಿಸಿದ ಸ್ಥಳೀಯರು ಓಡಿಬಂದು ಬೀದಿನಾಯಿಯನ್ನು ಓಡಿಸಿ ಬಾಲಕನ್ನು ರಕ್ಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಕ ಮೋಕ್ಷಿತ್‌ನಿಗೆ ಸ್ಥಳೀಯ ಆಸ್ಪತ್ರೆ ಹಾಗೂ ಸೋಮವಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. -ಭಾಸ್ಕರ್ ಮುಳ್ಳೂರು