ಗೋಣಿಕೊಪ್ಪ ವರದಿ, ಮಾ. ೨೦: ಕಿರುಗೂರು ಗ್ರಾಮದ ಶ್ರೀ ಮಹಾದೇವರ ವಾರ್ಷಿಕ ಉತ್ಸವದ ಪ್ರಯುಕ್ತ ದೇವರ ಕೊಡಿಮರ ನಿಲ್ಲಿಸುವ ಆಚರಣೆ ಪೂಜಾ ವಿಧಿ-ವಿಧಾನದಂತೆ ನೆರವೇರಿತು.

ಮೊದಲ ದಿನ ಮಹಾ ಗಣಪತಿ ಹೋಮ, ಮೃತ್ಯುಂಜಯ ಹೋಮ, ನಂತರ ಮಹಾಪೂಜೆಯ ಬಳಿಕ ನೆರೆದಿದ್ದ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿತರಣೆ ನಡೆಯಿತು. ಸಂಜೆ ದೇವತಾ ಪ್ರಾರ್ಥನೆ, ಆರಿದ್ರ ನಕ್ಷತ್ರದ ಶುಭ ಮುಹೂರ್ತದಲ್ಲಿ ಕೇರಳ ರಾಜ್ಯದ ನಿಲೇಶ್ವರದ ಪ್ರಮೋದ್ ಹಾಗೂ ತಂಡದವರಿAದ ಪಂಚವಾದ್ಯ ದೊಂದಿಗೆ ಅರ್ಚಕ ಸುದರ್ಶನ್ ಭಟ್ ನೇತೃತ್ವದಲ್ಲಿ ದೇವರ ಕೊಡಿ ಮರ ನಿಲ್ಲಿಸಲಾಯಿತು. ವಿವಿಧ ಪೂಜಾ ಕೈಂಕರ್ಯದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿ ಪುನೀತರಾದರು.

ತಾ. ೨೧ ರಂದು (ಇಂದು) ಬೆಳಿಗ್ಗೆ ೭ ಗಂಟೆಗೆ ಕಣಿದರ್ಶನ, ನವಕಲಶ ಪೂಜೆ, ಕಲಶಾಭಿಷೇಕ, ವಿಶೇಷ ಪೂಜೆ, ತುಲಾಭಾರ, ಮಹಾಪೂಜೆ ನೆರವೇರಲಿದೆ. ಸಂಜೆ ೪.೩೦ ಗಂಟೆಗೆ ಉತ್ಸವ ಮೂರ್ತಿಯ ಮೆರವಣಿಗೆ, ಮಹಾ ದೇವರ ಕೆರೆಯಲ್ಲಿ ಅವಭೃತ ಸ್ನಾನ, ೧೧ ಸುತ್ತು ದೇವರ ನೃತ್ಯ ಬಲಿ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ ನಡೆಯಲಿದೆ.