ಸೋಮವಾರಪೇಟೆ, ಮಾ. ೧೯: ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಜನ್ಮ ದಿನಾಚರಣೆಯನ್ನು ಅಪ್ಪು ಅಭಿಮಾನಿ ಬಳಗದ ವತಿಯಿಂದ ಪಟ್ಟಣದಲ್ಲಿ ಆಚರಿಸಲಾಯಿತು. ಬಳಗದ ಮುಖಂಡ ಹೆಚ್. ಮಂಜುನಾಥ್ ಅವರ ನೇತೃತ್ವದಲ್ಲಿ ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ನಂತರ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಹಾಗೂ ಸದಾ ಸಾರ್ವಜನಿಕ ಸೇವೆಯಲ್ಲಿರುವ ಆಸ್ಪತ್ರೆಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ವರ್ಗಕ್ಕೆ ಮಧ್ಯಾಹ್ನದ ಊಟದ ವ್ಯವಸ್ಥೆ ಒದಗಿಸಲಾಯಿತು. ಸೋಮವಾರಪೇಟೆ ವಿರಕ್ತ ಮಠಾಧೀಶರಾದ ನಿಶ್ಚಲ ನಿರಂಜನ ದೇಶೀಕೇಂದ್ರ ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜೀವನದಲ್ಲಿ ಪ್ರತಿಯೋರ್ವರೂ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಅಪ್ಪು ಅಭಿಮಾನಿ ಬಳಗದ ಈಶ, ಜಗನ್ನಾಥ, ರಾಘು ಕರ್ಕಳ್ಳಿ, ಸಂದೀಪ್, ಶರತ್, ಸುಬ್ರಮಣಿ, ರಮೇಶ್, ಕ.ರ.ವೇ. ಕೊಡಗು ಜಿಲ್ಲಾ ಅಧ್ಯಕ್ಷ ದೀಪಕ್, ಜಿಲ್ಲಾ ಉಪಾಧ್ಯಕ್ಷ ಚಂದ್ರು, ಕಾರ್ಯದರ್ಶಿ ಕೆ.ಆರ್. ಮಂಜುನಾಥ, ಕೋಶಾಧಿಕಾರಿ ಜಗನ್ನಾಥ್, ಯುವ ಘಟಕದ ಸಂಚಾಲಕ ನಿತನ್ ಮಿಟ್ಟು, ಪುರುಷೋತ್ತಮ ಮತ್ತಿತರರು ಭಾಗವಹಿಸಿದ್ದರು.