ಸುಂಟಿಕೊಪ್ಪ, ಮಾ. ೧೮: ಜಿಲ್ಲೆಯ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸುಂಟಿಕೊಪ್ಪ ಗ್ರೇಡ್ ೧ ಗ್ರಾಮ ಪಂಚಾಯಿತಿ ಕೋಳಿ, ಕುರಿ, ಮೀನು ಮಾಂಸ ಮಳಿಗೆಗಳನ್ನು ಹಾಗೂ ಸಂತೆ ಸುಂಕ ಟೆಂಡರ್ ಮೂಲಕ ಹರಾಜು ಪ್ರಕ್ರಿಯೆ ನಡೆದು ಲಾಭಾಂಶವನ್ನು ಪಡೆದಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಮತ್ತು ಪಂಚಾಯಿತಿ ಅಭಿವೃದ್ಧಿ ಲೋಕೇಶ್ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯ ನಿರ್ಣಯದಂತೆ ಟೆಂಡರ್ ಪ್ರಕ್ರಿಯೆಯನ್ನು ಮಾಡಲಾಗಿತ್ತು. ಆದರೆ ಕೊನೆಯ ದಿನದಂದು ಪಂಚಾಯಿತಿಯ ಕೆಲವು ಸದಸ್ಯರು ಮತ್ತು ಹಾಲಿ ವರ್ತಕರು ಟೆಂಡರ್ ಪ್ರಕ್ರಿಯೆಯನ್ನು ಕಾನೂನು ಬದ್ಧವಾಗಿ ಮತ್ತು ಪಾರದರ್ಶಕವಾಗಿ ಮಾಡಿಲ್ಲವೆಂದು ತಕರಾರು ತೆಗೆದಿದ್ದರಲ್ಲದೆ ಪರಿಸ್ಥಿತಿ ವಿಕೋಪಕ್ಕೆ ಹೋಗುವಂತಹ ಬೆಳವಣಿಗೆ ಕಂಡು ಬಂದಿತು. ಆದರೆ ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಪೊಲೀಸ್ ಮಧ್ಯ ಪ್ರವೇಶದಿಂದ ಟೆಂಡರ್ ಪ್ರಕ್ರಿಯೆ ಕಾನೂನು ಬದ್ಧವಾಗಿ ನೆಡೆದಿದ್ದು, ಗ್ರಾಮ ಪಂಚಾಯಿತಿಗೆ ಟೆಂಡರ್ ಪ್ರಕ್ರಿಯೆ ಹಿನ್ನೆಲೆಯಲ್ಲಿ ಒಟ್ಟು ರೂ. ೮ ಲಕ್ಷಕ್ಕೂ ಮಿಕ್ಕಿ ಆದಾಯ ಬಂದಿದೆ.
೨೦೨೨-೨೩ನೇ ಸಾಲಿನಲ್ಲಿ ೧೦ ಕೋಳಿ ಮಾಂಸದ ಅಂಗಡಿಗಳು ತಲಾ ರೂ. ೧.೫ ಲಕ್ಷದಂತೆ ಹರಾಜು ಗೊಳಿಸಲಾಗಿತ್ತು. ಅಂತೆಯೇ ೫ ಕುರಿ ಮಾಂಸದ ಅಂಗಡಿಗಳನ್ನು ತಲಾ ೮೬ ಸಾವಿರದಂತೆ ಹರಾಜು ಹಾಕಲಾಗಿತ್ತು. ಒಂದು ಹಂದಿ ಮಾಂಸದ ಅಂಗಡಿ ಯನ್ನು ರೂ ೧.೫೦,೧೦೦ ನೀಡಲಾಗಿತ್ತು. ೩ ಹಸಿಮೀನು ಮಾರಾಟದ ಮಳಿಗೆಗಳನ್ನು ತಲಾ ರೂ ೨ ಲಕ್ಷದಂತೆ ಹರಾಜು ಹಾಕಲಾಗಿತ್ತು. ಸಂತೆ ಸುಂಕ ಎತ್ತುವಳಿಯನ್ನು ೧೩,೦೦,೩೩೩ ರೂಗೆ ನೀಡಲಾಗಿತ್ತು.
ಇದೀಗ ಟೆಂಡರ್ ಪ್ರಕ್ರಿಯೆ ಒಟ್ಟು ಮೊತ್ತವು ೪೫,೩೭,೪೯೫ ಜೊತೆಗೆ ಜಿಎಸ್ಟಿ ೮,೧೬,೭೪೮ ಸೇರಿ ಗ್ರಾಮ ಪಂಚಾಯಿತಿಗೆ ರೂ ೫೩,೫೪,೨೪೩ ಆದಾಯ ಬಂದಿದೆ. ಇದರಿಂದಾಗಿ ಗ್ರಾಮ ಪಂಚಾಯಿತಿಗೆ ರೂ.೧೩,೭೩,೮೧೦ ಹೆಚ್ಚುವರಿ ಆದಾಯ ಬಂದಿದ್ದು, ಇದರಲ್ಲಿ ರೂ. ೮ ಲಕ್ಷದಷ್ಟು ನಿವ್ವಳ ಲಾಭ ಬಂದಿದೆ ಎಂದು ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಸರ್ವ ಸದಸ್ಯರ ಸಭೆ ಕರೆದು ಕೋಳಿ, ಕುರಿ, ಮೀನು ಮಾಂಸ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಒಪ್ಪಿಗೆ ಪಡೆದು ಸಾರ್ವಜನಿಕ ಜಾಹೀರಾತು ಮೂಲಕ ಟೆಂಡರ್ ಪ್ರಕ್ರಿಯೆಗೆ ೧೫ ದಿನಗಳ ಹಿಂದೆಯೇ ಸೂಚನೆ ನೀಡಲಾಗಿತ್ತು. ಅದರಂತೆ ಫೆ. ೨೭ ರಂದು ಟೆಂಡರ್ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿಗದಿತ ಶುಲ್ಕವನ್ನು ನಿಗದಿತ ನಮೂನೆಯಲ್ಲಿ ಬ್ಯಾಂಕಿಗೆ ಪಾವತಿ ಮಾಡಲು ಹಾಲಿ ಅಂಗಡಿ ಹೊಂದಿರುವ ಕೆಲವು ವ್ಯಾಪಾರಸ್ಥರು ವಿಫಲರಾಗಿದ್ದರು. ಇದೇ ಹೊತ್ತಿಗೆ ಹಾಲಿ ವ್ಯಾಪಾರಸ್ಥರ ಪೈಕಿ ಕೆಲವರು ಮತ್ತು ಹೊಸಬರು ನಿಗದಿತ ಶುಲ್ಕಕಟ್ಟಿ ಟೆಂಡರ್ ಪ್ರಕಿಯೆಯಲ್ಲಿ ಪಾಲ್ಗೊಳ್ಳಲು ಆರ್ಹರಾಗಿದ್ದರು. ಇದು ಗೊಂದಲಕ್ಕೆ ಕಾರಣವಾಗಿತ್ತು. ಟೆಂಡರ್ ಪ್ರಕ್ರಿಯೆ ನಡೆಯಲು ಬಿಡುವುದಿಲ್ಲ ಎಂಬ ಕೆಲವು ಪಂಚಾಯಿತಿ ಸದಸ್ಯರ ಮಾತನ್ನು ನಂಬಿ ಕೆಲವು ವ್ಯಾಪಾರಸ್ಥರು ಮೋಸ ಹೋಗಿರುವುದು ಬಹಿರಂಗಗೊAಡ ಹಿನ್ನೆಲೆಯಲ್ಲಿ ಫೆ.೨೭ರ ಸಂಜೆಯಿAದಲೇ ಪಂಚಾಯಿತಿ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಮುಂದುವರಿದ ಇದು ಪರ ಮತ್ತು ವಿರೋಧ ಗುಂಪುಗಳಾಗಿ ಬುಧವಾರದ ಸಭೆಯಲ್ಲಿ ಮಾತಿನ ಸಮರ ಸ್ಫೋಟಗೊಂಡಿದೆ. ಇದರಿಂದಾಗಿ ಪರಿಸ್ಥಿತಿ ಕೈಮೀರಿ ಕೈ ಕೈ ಮಿಲಾಯಿಸುವ ಹಂತಕ್ಕೆ ಬೆಳೆದಿದೆ. ಈ ಹಿನ್ನೆಲೆಯಲ್ಲಿ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಠಾಣಾಧಿಕಾರಿ ಎಂ.ಸಿ. ಶ್ರೀಧರ್ ಮತ್ತು ನಾಲ್ವರು ಸಹಾಯಕ ಸಬ್ಇನ್ಸ್ಪೆಕ್ಟರ್ ಸಹಿತವಾದ ಪೊಲೀಸ್ ತಂಡ ಸಭೆಗೆ ಬಂದೋಬಸ್ತ್ ಕಲ್ಪಿಸಿತ್ತು.