ಗೋಣಿಕೊಪ್ಪಲು, ಮಾ. ೧೮: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ ಪ್ರಾಥಮಿಕ ಶಾಲಾ ಆವರಣದಲ್ಲಿ ಯರವ ಸಮಾಜದ ಪದಾಧಿಕಾರಿಗಳ ಸಭೆಯು ಸಮಾಜದ ಅಧ್ಯಕ್ಷ ವೈ.ಎಂ. ರವಿ ಅಧ್ಯಕ್ಷತೆಯಲ್ಲಿ ಜರುಗಿತು. ಯರವ ಸಮಾಜದ ವತಿಯಿಂದ ವಾರ್ಷಿಕವಾಗಿ ನಡೆಸಿಕೊಂಡು ಬರುತ್ತಿರುವ ಯರವ ಕ್ರಿಕೆಟ್ ಕ್ರೀಡೋತ್ಸವದ ಬಗ್ಗೆ ಹಲವು ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಸಭೆಯ ಮುಂದಿಟ್ಟರು.
ಮುಂದಿನ ಸಾಲಿನ ಯರವ ಸಮಾಜದ ಅಧ್ಯಕ್ಷರಾಗಿ ತಿತಿಮತಿ ಲ್ಯಾಂಪ್ಸ್ ಸೊಸೈಟಿಯ ನಿರ್ದೇಶಕ ಪಿ.ಕೆ. ಸಿದ್ದಪ್ಪ ಅವರನ್ನು ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆ ಮಾಡಿದರು. ಮುಂದಿನ ಮೇ ೧ ರಿಂದ ೫ ರವರೆಗೆ ತಿತಿಮತಿಯ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಯರವ ಕ್ರಿಕೆಟ್ ಹಬ್ಬವನ್ನು ನಡೆಸಲು ಸಮಿತಿ ಒಮ್ಮತದ ತೀರ್ಮಾನ ಕೈಗೊಂಡಿತು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಪಿ.ಕೆ. ಸಿದ್ದಪ್ಪ, ಯರವ ಸಮಾಜವು ಕೇವಲ ವಾರ್ಷಿಕವಾಗಿ ನಡೆಯುವ ಕ್ರೀಡೋತ್ಸವಕ್ಕೆ ಸೀಮಿತಗೊಳ್ಳದೆ ಸಮಾಜ ಬಾಂಧವರ ಕಷ್ಟಗಳಿಗೆ ಸ್ಪಂದಿಸುವAತಾಗಬೇಕು. ಸರ್ಕಾರದ ಯೋಜನೆಗಳನ್ನು ಆದಿವಾಸಿಗಳಿಗೆ ಸರಿಯಾದ ಪ್ರಮಾಣದಲ್ಲಿ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನತೆಗೆ ಜಾಗೃತಿ ಮೂಡಿಸುವ ಕೆಲಸ ಸಮಾಜದ ವತಿಯಿಂದ ನಡೆಯಬೇಕು ಎಂದರು. ಸಭೆಯಲ್ಲಿ ಯರವ ಸಮಾಜದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಉಪಾಧ್ಯಕ್ಷರಾಗಿ ಪಿ.ಎಂ. ರಘು, ಕಾರ್ಯದರ್ಶಿಯಾಗಿ ಪಿ.ಎಸ್. ಪ್ರಸನ್ನ, ಉಪಕಾರ್ಯದರ್ಶಿಯಾಗಿ ಪಿ.ಟಿ. ಪವಿ, ಖಜಾಂಚಿಯಾಗಿ ಪಿ.ಎ. ದಿನೇಶ್ ಹಾಗೂ ನಿತೀನ್, ಕ್ರೀಡಾ ಸಂಚಾಲಕರಾಗಿ ಪಿ.ಎಂ. ಪ್ರವೀಣ್ ಹಾಗೂ ಕ್ರೀಡಾ ಸಹ ಸಂಚಾಲಕರಾಗಿ ಪಿ.ಆರ್. ಸಂತೋಷ್ ಆಯ್ಕೆ ಯಾದರು. ಕಾರ್ಯದರ್ಶಿ ಪಿ.ಎನ್. ಪ್ರಸನ್ನ ಸ್ವಾಗತಿಸಿ, ವಂದಿಸಿದರು.