ಅನಿಲ್ ಎಚ್.ಟಿ.

ಮಡಿಕೇರಿ, ಮಾ. ೧೮: ಅಚ್ಚರಿಯ ರಾಜಕೀಯ ವಿದ್ಯಮಾನದಲ್ಲಿ ಮಾಜಿ ಕೇಂದ್ರ ಸಚಿವ ಡಿ. ವಿ.ಸದಾನಂದಗೌಡ ಅವರನ್ನು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ತೀವ್ರ ಚಿಂತನೆ ಹರಿಸಿದೆ ಎಂಬ ಮಾತು ಕೇಳಿ ಬಂದಿದೆ.

ಪ್ರಸ್ತುತ ಬಿಜೆಪಿಯ ರಾಜ್ಯ ನಾಯಕರಾಗಿರುವ ಸದಾನಂದಗೌಡ ಅವರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ನೀಡದೇ ಈ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿ ವರಿಷ್ಠರು ಕಣಕ್ಕಿಳಿಸಿದ್ದಾರೆ. ಇದರಿಂದಾಗಿ ತೀವ್ರ ಬೇಸರಗೊಂಡಿರುವ ಸದಾನಂದಗೌಡ ತನ್ನ ರಾಜಕೀಯ ನಿರ್ಧಾರವನ್ನು ಮಂಗಳವಾರ ಸುದ್ದಿಗೋಷ್ಠಿ ಮೂಲಕ ಘೋಷಿಸುವು ದಾಗಿ ಹೇಳಿದ್ದಾರೆ. ಇವರ ಈ ಸುಳಿವು ಇದೀಗ ಕುತೂಹಲ ಕೆರಳಿಸಿದೆ. ೩ಮೂರನೇ ಪುಟಕ್ಕೆ

(ಮೊದಲ ಪುಟದಿಂದ) ಈಗಾಗಲೇ ಕಾಂಗ್ರೆಸ್‌ನ ಅನೇಕ ಮುಖಂಡರು ಸದಾನಂದಗೌಡ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಸೇರ್ಪಡೆಯಾಗುವುದಾದಲ್ಲಿ ತಾವು ಬಯಸಿದ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ಹಲವು ಪ್ರಮುಖರು ಸಾಕಷ್ಟು ಲೆಕ್ಕಾಚಾರ ಹಾಕಿದ್ದು ಸದಾನಂದಗೌಡ ಕಾಂಗ್ರೆಸ್ ಸೇರಿದ್ದೇ ಆದಲ್ಲಿ ಅವರನ್ನು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಾ ಕಣಕ್ಕಿಳಿಸಲು ಕೂಡ ಯೋಚಿಸಲಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ಈ ಕ್ಷೇತ್ರದಿಂದ ರಾಜವಂಶಸ್ಥ ಯದುವೀರ್ ಒಡೆಯರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಯದುವೀರ್‌ಗೆ ಸ್ಪರ್ಧೆಯೊಡ್ಡುವ ಸಮರ್ಥರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯವಿದೆ. ಸದಾನಂದಗೌಡ ಅವರೇ ಕಾಂಗ್ರೆಸ್ ಅಭ್ಯರ್ಥಿಯಾದಲ್ಲಿ ಇವರಿಗಿಂತ ಸಮರ್ಥರು ದೊರಕಲಿಕ್ಕಿಲ್ಲ ಎಂಬುದು ಕೈ ಪಾಳಯದ ಚಿಂತನೆ.

ಕೊಡಗು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ೮ ಲಕ್ಷದಷ್ಟು ಒಕ್ಕಲಿಗ ಮತಗಳಿದೆ. ಸದಾನಂದಗೌಡರು ಅಭ್ಯರ್ಥಿಯಾದಲ್ಲಿ ಒಕ್ಕಲಿಗರ ಮತ ಶೇ. ೫೦ ಲಭಿಸಿದರೂ ಅದು ಗೆಲುವಿನ ಹಾದಿಗೆ ನೆರವಾಗಲಿದೆ. ಜತೆಗೇ ಕಾಂಗ್ರೆಸ್ ಮತಗಳು, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮತಗಳೂ ಸೇರ್ಪಡೆಯಾದಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ ಗೆಲವು ಸುಲಭ ಸಾಧ್ಯವಾಗಲಿದೆ ಎಂಬ ಲೆಕ್ಕಾಚಾರ ವ್ಯಕ್ತವಾಗಿದೆ. ಜೆಡಿಎಸ್ ನ ಒಕ್ಕಲಿಗ ಮತಗಳೂ ಸೇರಿದಂತೆ ಬಿಜೆಪಿ ಮೈತ್ರಿಯಿಂದ ಅಸಮಧಾನಗೊಂಡಿರುವ ಜೆಡಿಎಸ್‌ನ ಅನೇಕ ಮತದಾರರೂ ಕೂಡ ಸದಾನಂದಗೌಡ ಕೈ ಹಿಡಿಯಬಹುದು ಎಂದು ಕಾಂಗ್ರೆಸ್ ಮುಖಂಡರು ಅಭಿಪ್ರಾಯ ಹೊಂದಿದ್ದಾರೆ.

ಸದಾನAದಗೌಡರು ಕೊಡಗಿನ ಅಳಿಯ ಆಗಿದ್ದು, ಕೊಡಗಿನ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿದ್ದಾರೆ. ಕೊಡಗಿನಲ್ಲಿ ಸದಾನಂದಗೌಡರ ಬಳಗವೂ ಮತಗಳಿಕೆಗೆ ಸಹಕಾರಿಯಾಗಬಲ್ಲದು. ಈ ಮೊದಲು ಕೊಡಗು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ೨೦೦೪ರಲ್ಲಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪ ಮೊಯಿಲಿ ಅವರನ್ನು ಸೋಲಿಸಿ ಸದಾನಂದಗೌಡ ಸಂಸದರಾಗಿದ್ದರು. ೨೦೦೯ರಲ್ಲಿ ಸದಾನಂದಗೌಡ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಅಭ್ಯರ್ಥಿಯಾಗಿ, ಸಂಸದರಾಗಿ ಆಯ್ಕೆಯಾದರು. ೨೦೦೫ರಲ್ಲಿ ಸದಾನಂದಗೌಡ ಕಾಫಿ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡು ಕಾಫಿ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಯೋಜನೆ ರೂಪಿಸಿದ್ದರು.

೨೦೦೬ ರಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷರಾದ ಸಂದರ್ಭ ಸದಾನಂದ ಗೌಡ ಪಕ್ಷವನ್ನು ಪ್ರಬಲವಾಗಿ ಸಂಘಟಿಸಿದ್ದ ಪರಿಣಾಮವೇ ೨೦೦೮ ರಲ್ಲಿ ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ೨೦೧೧ ರಲ್ಲಿ ವಿವಾದದ ಕಾರಣದಿಂದಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನೆÀ್ನಲೆಯಲ್ಲಿ ಬಿಜೆಪಿ ಹೈಕಮಾಂಡ್ ಸದಾನಂದಗೌಡರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿತ್ತು. ಆದರೆ ೨೦೧೨ ರಲ್ಲಿ ಸದಾನಂದಗೌಡರು ಜಗದೀಶ್ ಶೆಟ್ಟರ್ ಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕಾಗಿ ಬಂದಿತ್ತು.

೨೦೧೪ ರಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸದಾನಂದಗೌಡ ಸಚಿವರಾಗಿ ಅಧಿಕಾರ ಪಡೆದು ರೈಲ್ವೇ ಬಜೆಟ್ ಮಂಡಿಸಿದರು. ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿಯೂ ಸದಾನಂದಗೌಡ ಅವರು ಸಚಿವರಾಗಿ ಅಧಿಕಾರ ಪಡೆದರಾದರೂ ೨೦೨೧ರಲ್ಲಿ ಸಚಿವ ಸಂಪುಟದ ಪುನರ್ ರಚನೆ ಸಂದರ್ಭ ಸದಾನಂದಗೌಡರಿಗೆ ಸಚಿವರಾಗುವ ಅವಕಾಶ ತಪ್ಪಿತ್ತು.

ಕಳೆದ ವರ್ಷದ ನವೆಂಬರ್‌ನಲ್ಲಿ ಚುನಾವಣಾ ರಾಜಕೀಯದಿಂದ ತಾನು ನಿವೃತ್ತನಾಗುತ್ತಿರುವುದಾಗಿ ಸದಾನಂದಗೌಡ ಘೋಷಿಸಿದ್ದರೂ ಇದೀಗ ಮತ್ತೆ ಬೆಂಗಳೂರು ಉತ್ತರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದರು. ಆದರೆ ಶೋಭಾ ಕರಂದ್ಲಾಜೆಗೆ ಅವಕಾಶ ನೀಡುವ ಮೂಲಕ ಸದಾನಂದಗೌಡರನ್ನು ಬಿಜೆಪಿ ವರಿಷ್ಠರು ಮೂಲೆಗುಂಪು ಮಾಡಿದರು. ಮಗನಿಗೆ ಸ್ಪರ್ಧಿಸಲು ಅವಕಾಶ ದೊರಕಲಿಲ್ಲ ಎಂದು ಅಸಮಾಧಾನಗೊಂಡಿರುವ ಬಿಜೆಪಿ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಅವರೊಂದಿಗೂ ಮಾತುಕತೆ ನಡೆಸಿದ್ದ ಸದಾನಂದಗೌಡ ಎಲ್ಲಾ ಅವಕಾಶ ವಂಚಿತರು ತಮ್ಮ ದೂರನ್ನು ಹೈಕಮಾಂಡ್ ವರಿಷ್ಠರಿಗೆ ತಿಳಿಸೋಣ ಎಂದು ಸಲಹೆ ನೀಡಿದ್ದರಾದರೂ ಈಶ್ವರಪ್ಪ ಇದಕ್ಕೊಪ್ಪದೇ ಪಕ್ಷೇತರ ಸ್ಪರ್ಧೆಗೆ ಮುಂದಡಿಯಿಟ್ಟರು. ಹೀಗಾಗಿ ಇದೀಗ ಸದಾನಂದಗೌಡ ಒಬ್ಬಂಟಿಗರಾಗಿಯೇ ಬಿಜೆಪಿ ವರಿಷ್ಠರ ವಿರುದ್ಧ ಆಕ್ರೋಷ ಹೊರಹಾಕುವಂತಾಗಿದೆ. ಸೋಮವಾರ ಡಿ.ವಿ.ಎಸ್. ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೀಗ ಮಂಗಳವಾರ ಕಾಂಗ್ರೆಸ್ ಸೇರುವ ನಿರ್ಧಾರ ಘೋಷಿಸುವರೇ? ಕಾಂಗ್ರೆಸ್ ಸೇರಿದ್ದೇ ಆದಲ್ಲಿ ಇವರನ್ನು ಕೊಡಗು-ಮೈಸೂರು ಕ್ಷೇತ್ರದಿಂದ ಕಾಂಗ್ರೆಸ್ ಕಣಕ್ಕಿಳಿಸುವುದೇ? ಮಂಗಳವಾರದ ಕುತೂಹಲ ಇದು.!