ಕುಶಾಲನಗರ, ಮಾ.೧೮: ಕೊಡಗು ಮೈಸೂರು ಜಿಲ್ಲೆಗಳ ಗಡಿಭಾಗಗಳಲ್ಲಿ ರೈತರಿಗೆ ಸರ್ಕಾರದಿಂದ ಸಬ್ಸಿಡಿ ಮೂಲಕ ಲಭ್ಯವಾಗುವ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿ ಕೇರಳಕ್ಕೆ ಸಾಗಾಟ ಮಾಡುವ ದಂಧೆಯನ್ನು ಯುವಕರು ಪತ್ತೆ ಹಚ್ಚಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ನಡೆದಿದ್ದು, ಲಾರಿ ಚಾಲಕ ಪರಾರಿಯಾಗಿದ್ದಾನೆ.
ರೂ. ೩ ಸಾವಿರ ಮೌಲ್ಯದ ಯೂರಿಯಾ ಸರ್ಕಾರದ ಸಬ್ಸಿಡಿ ಮೂಲಕ ರೈತರಿಗೆ ಕೇವಲ ರೂ. ೨೬೫ಕ್ಕೆ ದೊರಕುತ್ತಿದ್ದು, ಇದನ್ನು ಕೆಲವು ಗೊಬ್ಬರದ ಅಂಗಡಿಯ ಮಾಲೀಕರು ಹಾಗೂ ದಂಧೆಕೋರರು ಶಾಮೀಲಾಗಿ ರೈತರ ಹೆಸರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಗೊಬ್ಬರವನ್ನು ಅಸಲಿ ಚೀಲದಿಂದ ನಕಲಿ ಚೀಲಗಳಿಗೆ ತುಂಬಿ ಲಾರಿಗಳ ಮೂಲಕ ಕೇರಳಕ್ಕೆ ಸಾಗಿಸುತ್ತಿರುವ ಸಂದರ್ಭ ಸ್ಥಳೀಯ ಯುವಕರು ಪತ್ತೆ ಹಚ್ಚಿ ಕೃಷಿ ಇಲಾಖೆ ಅಧಿಕಾರಿಗಳ ಮೂಲಕ ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಶಾಲನಗರ ಸೇರಿದಂತೆ ಹೆಬ್ಬಾಲೆ, ಆವರ್ತಿ, ಕೊಪ್ಪ ಗ್ರಾಮಗಳಲ್ಲಿ ಈ ದಂಧೆ ನಿರಂತರವಾಗಿ ನಡೆಯುತ್ತಿದ್ದು ಯೂರಿಯಾ ಗೊಬ್ಬರಕ್ಕೆ ಕೇರಳದಲ್ಲಿ ಭಾರೀ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಬ್ಯಾಗ್ ಒಂದಕ್ಕೆ ರೂ. ೪ ಸಾವಿರದಂತೆ ಮಾರಾಟ ಮಾಡುವ ಮೂಲಕ ಲಕ್ಷಾಂತರ ಹಣಗಳಿಸುತ್ತಿರುವ ಪ್ರಕರಣ ಇದಾಗಿದೆ. ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕುಶಾಲನಗರದ ಕೈಗಾರಿಕಾ ಬಡಾವಣೆ, ಕೊಪ್ಪ ಗ್ರಾಮದ ಆವರ್ತಿ ವೀರಾಜಪೇಟೆ ಮತ್ತಿತರ ಕಡೆಗಳಲ್ಲಿ ಈ ದಂಧೆಗಳು ಮಿತಿಮೀರಿದ್ದು ರೈತಾಪಿ ವರ್ಗಕ್ಕೆ ಅಗತ್ಯವಾಗಿ ಲಭ್ಯವಾಗಬೇಕಾದ ಯೂರಿಯಾ ಗೊಬ್ಬರ ದೊರಕುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ.
ಎರಡು ಜಿಲ್ಲೆಗಳಲ್ಲಿ ರೈತರು ಕೃಷಿ ಕಾಫಿ ಕರಿಮೆಣಸು ಭತ್ತ ಮತ್ತು ತೋಟಗಾರಿಕಾ ಬೆಳೆಗಳಿಗೆ ಯೂರಿಯಾ ಗೊಬ್ಬರ ಬಳಸುತ್ತಿದ್ದು ಪ್ರತಿ ರೈತರು ತಮ್ಮ ದಾಖಲೆ ನೀಡುವ ಮೂಲಕ ಗರಿಷ್ಠ ೪೯ ಬ್ಯಾಗ್ ಯೂರಿಯಾ ಗೊಬ್ಬರವನ್ನು ಪಡೆಯುವ ಅವಕಾಶ ಲಭ್ಯವಿದೆ.
ಆದರೆ ರೈತರಿಗೆ ಸರ್ಕಾರ ಸಬ್ಸಿಡಿ ಮೂಲಕ ಒದಗಿಸಿರುವ ಗೊಬ್ಬರ ಕುಶಾಲನಗರದ ಕೈಗಾರಿಕಾ ಬಡಾವಣೆಯ ಮತ್ತು ಸಮೀಪದ ಕೊಪ್ಪ ಗ್ರಾಮದ ಆವರ್ತಿ ಬಳಿ ಗೋಡೌನ್ಗಳಲ್ಲಿ ಸಂಗ್ರಹಿಸಿ ಅಸಲಿ ಚೀಲದಿಂದ ನಕಲಿ ಚೀಲಗಳಿಗೆ ತುಂಬಿಸಿ ನಂತರ ಬೃಹತ್ ಗಾತ್ರದ ಲಾರಿಗಳಲ್ಲಿ ಕೇರಳಕ್ಕೆ ಸಾಗಿಸುವ ದಂಧೆ ನಿರಂತರವಾಗಿ ನಡೆಯುತ್ತಿದೆ ಎನ್ನುವ ಮಾಹಿತಿಗಳು ಹೊರ ಬಿದ್ದಿವೆ.
ಈ ದಂಧೆಯಲ್ಲಿ ಕುಶಾಲನಗರ ಮತ್ತು ನೆರೆಯ ಕೊಪ್ಪ ವ್ಯಾಪ್ತಿಯ ಗೊಬ್ಬರದ ಅಂಗಡಿಗಳ ಕೆಲವು ಮಾಲೀಕರು ಕೂಡ ಶಾಮೀಲು ಆಗಿರುವ ಶಂಕೆ ವ್ಯಕ್ತಗೊಂಡಿದೆ.
ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಇಂತಹ ಮೂರು ಪ್ರಕರಣಗಳು ಪತ್ತೆಯಾಗಿದ್ದು ಕೃಷಿ ಇಲಾಖೆಯ ಜಾಗೃತ ದಳದ ಅಧಿಕಾರಿಗಳು ಕೆಲವು ವ್ಯಕ್ತಿಗಳ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಂಡು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಹೆಬ್ಬಾಲೆ ಕುಶಾಲನಗರ ವೀರಾಜ ಪೇಟೆ ವ್ಯಾಪ್ತಿಯಲ್ಲಿ ದಂಧೆ ಬೆಳಕಿಗೆ ಬಂದಿತ್ತು ಎಂದು ಕೃಷಿ ಇಲಾಖೆಯ ಜಾಗೃತ ದಳದ ಅಧಿಕಾರಿ ರಿಯಾಜ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. ಸಮೀಪದ ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಗೊಬ್ಬರವನ್ನು ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದ ಒಟ್ಟು ಐದು ಪ್ರಕರಣಗಳು ದಾಖಲಾ ಗಿವೆ ಎಂದು ಮಾಹಿತಿ ಒದಗಿಸಿದ್ದಾರೆ.
ಆವರ್ತಿ ಅಕ್ಕಿ ಗಿರಣಿಯಲ್ಲಿ ಈ ದಂದೆ ನಡೆಯುತ್ತಿದ್ದ ಸಂದರ್ಭ ಗಮನಿಸಿದ ಅಲ್ಲಿನ ಯುವಕರಾದ ಮ್ಯಾಥ್ಯೂ, ಪ್ರಜ್ಜು, ಮಹೇಶ್, ಪ್ರಕಾಶ, ದಯಾನಂದ ಮತ್ತಿತರರು ಈ ದಂಧೆಯ ಬಗ್ಗೆ ಭಾನುವಾರ ತಡರಾತ್ರಿಯಲ್ಲಿ ಸೂಕ್ಷö್ಮವಾಗಿ ಅವಲೋಕಿಸಿದ್ದು ಗೊಬ್ಬರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಹಿಂಬಾಲಿಸಿದ ಸಂದರ್ಭ ಲಾರಿ ಚಾಲಕ ಹೆದರಿ ಲಾರಿ ಅನ್ನು ಕೊಪ್ಪ ಪೆಟ್ರೋಲ್ ಪಂಪ್ ಒಂದರಲ್ಲಿ ನಿಲ್ಲಿಸಿ ಪರಾರಿಯಾಗಿದ್ದಾನೆ.
ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಕೃಷಿ ಇಲಾಖೆ ಅಧಿಕಾರಿಗಳಾದ ಪ್ರಸಾದ್, ಹಿತೇಶ್ ಮತ್ತು ಸಿಬ್ಬಂದಿಗಳು ಲಾರಿಯನ್ನು ವಶಕ್ಕೆ ತೆಗೆದುಕೊಂಡು ಬೈಲುಕೊಪ್ಪೆ ಪೊಲೀಸರ ಸಹಕಾರದೊಂದಿಗೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಲಾರಿಯಲ್ಲಿ ಅಂದಾಜು ೫೦೦ ರಿಂದ ೬೦೦ ರಷ್ಟು ಗೊಬ್ಬರ ತುಂಬಿದ ನಕಲಿ ಚೀಲಗಳು ಪತ್ತೆಯಾಗಿದ್ದು, ಇವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಪ್ರಸಾದ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕೃಷಿ ಇಲಾಖೆಯ ಜಾಗೃತದಳದ ಅಧಿಕಾರಿಗಳು ಇಂತಹ ಪ್ರಕರಣಗಳು ಕಂಡುಬAದಲ್ಲಿ ತಕ್ಷಣ ತಮ್ಮ ಇಲಾಖೆಯನ್ನು ಸಂಪರ್ಕಿಸಿ ದಂಧೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಶಕ್ತಿ ಮೂಲಕ ಕೋರಿದ್ದಾರೆ.