ವೀರಾಜಪೇಟೆ, ಮಾ. ೧೭: ಯುವಕರು ಜೀವನದಲ್ಲಿ ತಾಳ್ಮೆ ಮತ್ತು ಸಹನೆಯಿಂದ ಜೀವನ ನಡೆಸುವಂತಾಗಬೇಕು. ಧೈರ್ಯದಿಂದ ಜೀವನದಲ್ಲಿ ಬದುಕು ರೂಪಿಸಿಕೊಂಡು ಹಠ ಮತ್ತು ಚಟಗಳನ್ನು ಬಿಡುವಂತಾದಾಗ ಮಾತ್ರ ಉತ್ತಮ ಬದುಕು ಸಾಧ್ಯವಾಗುತ್ತದೆ ಎಂದು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಚೋಟು ಅಪ್ಪಯ್ಯ ಕರೆ ನೀಡಿದರು.

ವೀರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇAದ್ರ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಹೊಂಬೆಳಕು ಕಿರಣ ೨೧೭ ರ ಮಾಸಿಕ ತತ್ವ ಚಿಂತನಾಗೋಷ್ಠಿ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚೋಟು ಅಪ್ಪಯ್ಯ ಅವರು, ‘ಯುವ ಜನಾಂಗದಲ್ಲಿ ಆಕಸ್ಮಿಕ ಮರಣಗಳು ಕಾರಣ ಮತ್ತು ಪರಿಹಾರ' ಎಂಬ ವಿಷಯದ ಬಗ್ಗೆ ತಮ್ಮ ಉಪನ್ಯಾಸದಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು. ತಮ್ಮ ಮಕ್ಕಳು ವಿದ್ಯೆ ಕಲಿತು ಉತ್ತಮ ವ್ಯಕ್ತಿಗಳಾಗಬೇಕೆಂದು ಪೋಷಕರು ಕಷ್ಟಪಟ್ಟು ತಮ್ಮ ಜೀವವನ್ನು ಮುಡಿಪಾಗಿಟ್ಟು, ಶಾಲೆ ಕಾಲೇಜಿಗೆ ಕಳುಹಿಸುತ್ತಾರೆ ಆದರೆ, ಯುವಕರು ದುಷ್ಚಟಗಳಿಗೆ ದಾಸರಾಗಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದರು. ಪೋಷಕರು ಮಕ್ಕಳ ಮನಸನ್ನು ಅರಿತುಕೊಂಡು ಅವರನ್ನು ಉತ್ತಮ ಪ್ರಜೆಗಳಾಗಿ ರೂಪಿಸುವ ಕರ್ತವ್ಯವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀ ಮಠದ ಅಧ್ಯಕ್ಷರಾದ ಶಾಂತಮಲ್ಲಿಕಾರ್ಜುನ ಸ್ವಾಮಿ ಸಾನಿಧ್ಯ ವಹಿಸಿ ಮಾತನಾಡಿದರು. ಪಕ್ಷಿ ವೀಕ್ಷಕರಾದ ಡಾ. ಎಸ್.ವಿ. ನರಸಿಂಹನ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು ಸನ್ಮಾನ ಸ್ವಿಕರಿಸಿದ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಗೋಣಿಕೊಪ್ಪಲುವಿನ ಕಾಳಿಮಾಡ ಡಾ. ಶಿವಪ್ಪ ಅವರು ಶ್ರೀ ಬಸವೇಶ್ವರರ ವಚನಗಳ ಗೀತಗಾಯನ ನಡೆಸಿಕೊಟ್ಟರು, ಹುಣಸೂರಿನ ದಂತ ಚಿಕಿತ್ಸಾ ತಜ್ಞರಾದ ಡಾ. ಎಂ. ಶಿವಕುಮಾರ್ ಹಾಜರಿದ್ದರು.