ಕುಶಾಲನಗರ, ಮಾ. ೧೭: ಅಂತರ ಜಿಲ್ಲೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಪೆಡ್ಲರ್ ಒಬ್ಬನನ್ನು ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು ೨೪೫ ಗ್ರಾಂ ಗಾಂಜಾ ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಿರಿಯಾಪಟ್ಟಣ ತಾಲೂಕು ದೊಡ್ಡಹೊಸೂರು ಗ್ರಾಮದ ಬಸವರಾಜು (೩೭) ಎಂಬಾತ ಮೈಸೂರು ಮತ್ತು ಕೊಡಗು ವ್ಯಾಪ್ತಿಯಲ್ಲಿ ಕಳೆದ ಹಲವು ಸಮಯದಿಂದ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದು, ಈ ಬಗ್ಗೆ ಮಾಹಿತಿ ದೊರೆತ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ನಿರ್ದೇಶನದಂತೆ ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಆರ್.ವಿ. ಗಂಗಾಧರಪ್ಪ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರಾದ ರಾಜೇಶ್ ಕೋಟ್ಯಾನ್ ಮತ್ತು ಕುಶಾಲನಗರ ಗ್ರಾಮಾಂತರ ಠಾಣಾ ಪಿಎಸ್‌ಐ ಮೋಹನ್ ರಾಜು ನೇತೃತ್ವದಲ್ಲಿ ಕಳೆದ ಕೆಲವು ದಿನಗಳಿಂದ ಕಾರ್ಯಾಚರಣೆ ನಡೆದಿದೆ.

ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತಂಡ ಭಾನುವಾರ ಆರೋಪಿಯನ್ನು ಗುಡ್ಡೆಹೊಸೂರು ಸಮೀಪದ ತೆಪ್ಪದಕಂಡಿ ಬಳಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಆರೋಪಿ ಬಸವರಾಜು ತನ್ನ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದು ಬೆನ್ನಟ್ಟಿದ ಪೊಲೀಸರು ಆತನ ಮನೆಗೆ ದಾಳಿ ಮಾಡಿ ಕಾರ್ಯಾಚರಣೆ ನಡೆಸಿದಾಗ ಸುಮಾರು ೨೪೫ ಗ್ರಾಂ ಒಣಗಿದ ಗಾಂಜಾ ಪತ್ತೆಯಾಗಿದೆ. ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಭೂಮಿ ಒಳಗೆ ಹುದುಗಿಸಿ ಇಟ್ಟಿದ್ದ ಗಾಂಜಾವನ್ನು ಪೊಲೀಸ್ ಶ್ವಾನ "ಕಾಪರ್" ಪತ್ತೆ ಹಚ್ಚಿ ಪೊಲೀಸರಿಗೆ ಸುಳಿವು ನೀಡಿದೆ. ಈ ಸಂದರ್ಭ ಮನೆಯ ಶೌಚಾಲಯ ಸಮೀಪ ಭೂಮಿ ಅಗೆದು ನೋಡಿದಾಗ ಪೊಟ್ಟಣ ಒಂದರಲ್ಲಿ ಹುದುಗಿಸಿ ಇಟ್ಟಿದ್ದ ಸುಮಾರು ಗಾಂಜಾ ಪ್ಯಾಕೆಟ್‌ಗಳು ಪತ್ತೆಯಾಗಿವೆ.

ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಆತನಿಗೆ ಸಂಬAಧಿಸಿದ ದ್ವಿಚಕ್ರ ವಾಹನ ವಶಪಡಿಸಿ ಕೊಂಡಿದ್ದಾರೆ.

ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಶಾಲನಗರ ಗ್ರಾಮಾಂತರ ಠಾಣಾ ಪಿಎಸ್‌ಐ ಪಿ. ಮೋಹನ್ ರಾಜ್, ಎಎಸ್‌ಐ ವಿ.ಜಿ. ವೆಂಕಟೇಶ್, ಸಿಬ್ಬಂದಿಗಳಾದ ಎಂ.ಎಸ್. ಜೀವನ್, ಪಿ.ಎಸ್. ದಿನೇಶ್, ವಿ. ಪ್ರಕಾಶ್, ಮಹಿಳಾ ಸಿಬ್ಬಂದಿ ಬಿ.ಪಿ. ಕಾಂತಿ, ಶ್ವಾನದಳ ಸಿಬ್ಬಂದಿಗಳಾದ ಮನಮೋಹನ್, ವಿಜಯಕುಮಾರ್ ಭಾಗವಹಿಸಿದ್ದರು. ಪೊಲೀಸ್ ಇಲಾಖೆಯ ವಿಶೇಷ ತರಬೇತಿ ಪಡೆದ ಶ್ವಾನ ‘ಕಾಪರ್’ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.

ಪ್ರಕರಣವನ್ನು ಪತ್ತೆ ಹಚ್ಚಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ಕಾಪರ್ ಶ್ವಾನದ ನಿರ್ವಾಹಕ ಪೊಲೀಸ್ ಪೇದೆ ಮನಮೋಹನ್ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ರಾಜನ್ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿ ಸಿದ್ದಾರೆ.

-ಚಂದ್ರಮೋಹನ್