ಕಣಿವೆ, ಮಾ. ೧೫: ಈ ಬಾರಿ ಶುಂಠಿ ಕೃಷಿಕರಿಗೆ ಬಹು ಮುಖ್ಯವಾಗಿ ಬೇಕಾದ ನೀರಿನ ಅಲಭ್ಯತೆ ಬಹು ದೊಡ್ಡ ಚಿಂತೆಯಾಗಿ ಕಾಡುತ್ತಿದೆ. ಎಲ್ಲೆಲ್ಲೂ ಪಾತಾಳಕ್ಕಿಳಿದ ಅಂತರ್ಜಲದಿAದಾಗಿ ಬಹುತೇಕ ಕೊಳವೆ ಬಾವಿಗಳು ಕೆಲಸ ನಿಲ್ಲಿಸಿವೆ.

ಇನ್ನು ಕೆರೆ - ತೊರೆ, ಹಳ್ಳ - ಕೊಳ್ಳ, ನದಿಯ ನೀರನ್ನು ಅವಲಂಬಿಸಿ ಶುಂಠಿ ಬೆಳೆಯುತ್ತಿದ್ದ ಕೃಷಿಕರಿಗೆ ಈಗ ಯಾವ ಜಲಮೂಲಗಳೂ ಉಳಿದಿಲ್ಲ. ಎಲ್ಲವೂ ಅಯೋಮಯವಾಗಿದೆ.

ಫೆಬ್ರವರಿ ಮಾಸಾಂತ್ಯ ಹಾಗೂ ಮಾರ್ಚ್ ಎರಡನೇ ವಾರದಲ್ಲಿ ಶೇ. ೫೦ ರಷ್ಟು ಶುಂಠಿ ಬಿತ್ತನೆಯಾಗಬೇಕಿತ್ತು. ಆದರೆ ಎಲ್ಲೆಲ್ಲೂ ನೀರಿನ ಕೊರತೆಯ ಕಾರಣ ಕೃಷಿಕರು ವರುಣ ದೇವನ ಮೊರೆ ಹೋಗುತ್ತಿದ್ದಾರೆ.

ಬೆಂಕಿಯ ಉಂಡೆಯಾಗುತ್ತಿರುವ ಭೂಮಿ

ದಿನೇ ದಿನೇ ತನ್ನ ಉಗ್ರ ಪ್ರತಾಪ ತೋರುತ್ತಿರುವ ಬೇಸಿಗೆಯ ಬಿಸಿಲಿನ ಕಾವಿಗೆ ಅಂತರ್ಜಲ ಪ್ರಪಾತಕ್ಕಿಳಿದಿದೆ. ಜೊತೆಗೆ ಬೆಂಕಿಯನ್ನು ಉಗುಳುತ್ತಿರುವ ಬಿಸಿಲ ಬೇಗೆಗೆ ಭೂಮಿಯ ಮೇಲ್ಮೆöÊ ಕಾದು ಕಾದು ಬೆಂಕಿಯ ಉಂಡೆಯAತಾಗುತ್ತಿದೆ.

ಮೊಳಕೆಯೊಡೆದ ಶುಂಠಿ

ಸಾಮಾನ್ಯವಾಗಿ ಜನವರಿ ತಿಂಗಳಿನಲ್ಲಿ ಬಿತ್ತನೆಯ ಶುಂಠಿಯನ್ನು ತಂದು ಅದನ್ನು ಹದವಾಗಿ ಮುರಿದು ಬಿತ್ತನೆ ಬೀಜವಾಗಿ ಮಾರ್ಪಡಿಸಿ ಬೀಜೋಪಚಾರಕ್ಕೆ ಇಟ್ಟ ಬಹುತೇಕ ರೈತರ ಬಿತ್ತನೆ ಶುಂಠಿ ಇಟ್ಟಲ್ಲಿಯೇ ಮೊಳಕೆಯೊಡೆದಿದೆ.

ಅತ್ತ ಹೊಲದಲ್ಲಿ ಬಿತ್ತನೆ ಮಾಡೋಣ ಎಂದರೆ ನೀರಿಲ್ಲದೇ ಕಾದು ಧಗಧಗಿಸುತ್ತಿರುವ ಹೊಲ ಗದ್ದೆಗಳ ಮಣ್ಣನ್ನು ತಂಪುಗೊಳಿಸಿ ಬಿತ್ತನೆ ಮಾಡಲು ಕೊಳವೆ ಬಾವಿಗಳಲ್ಲೂ ನೀರಿಲ್ಲ. ಇತ್ತ ಕೆರೆ, ನದಿ, ಹಳ್ಳ, ಕೊಳ್ಳಗಳಲ್ಲೂ ನೀರಿಲ್ಲ. ಇರುವ ಅಲ್ಪಸ್ವಲ್ಪ ನೀರನ್ನು ಹೊರತೆಗೆಯಲು ಜಿಲ್ಲಾಧಿಕಾರಿಗಳು ಹೊರಡಿಸಿರುವ ‘ವಾಟರ್ ಎಮರ್ಜೆನ್ಸಿ’ ಆದೇಶ ಕೃಷಿಕರಿಗೆ ಶಾಪವಾಗಿದೆ.

ಮಳೆ ಬಾರದಿದ್ದರೆ ಮಾರಕ

ಈ ಹಿಂದಿನ ಅನೇಕ ವರ್ಷಗಳಲ್ಲಿ ಸಾಮಾನ್ಯವಾಗಿ ಮಹಾಶಿವರಾತ್ರಿ ಬಳಿಕ ಅಲ್ಲಲ್ಲಿ ಒಂದಷ್ಟು ಮಳೆಯಾಗುತ್ತಿತ್ತು. ಈ ಬಾರಿ ಶಿವರಾತ್ರಿ ಕಳೆದು ಹಲವು ದಿನಗಳು ಕಳೆದರೂ ಕೂಡ ಮಳೆಯ ಲಕ್ಷಣವೇ ಗೋಚರವಾಗುತ್ತಿಲ್ಲ.

ಲಕ್ಷಾಂತರ ರೂಪಾಯಿ ವ್ಯಯ ಮಾಡಿರುವ ಕೃಷಿಕರು

ಕಳೆದ ಬಾರಿ ಶುಂಠಿ ಬೆಳೆದ ರೈತರಿಗೆ ೬೦ ಕೆ.ಜಿ. ತೂಕದ ಚೀಲವೊಂದರ ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಬರೋಬ್ಬರಿ ಗರಿಷ್ಠ ೬,೫೦೦ ರೂಗಳಿಂದ ಕನಿಷ್ಟ ೫,೦೦೦ ರೂಗಳ ತನಕ ಬೆಲೆ ಸಿಕ್ಕಿತ್ತು. ಇದು ಶುಂಠಿ ಬೆಳೆಯ ಇತಿಹಾಸದಲ್ಲಿ ಐತಿಹಾಸಿಕ ದಾಖಲೆ ಮೆರೆದ ಧಾರಣೆಯಾಗಿತ್ತು.

ಹಾಗಾಗಿ ದಿಢೀರನೇ ಹಣ ಮಾಡಿದ ಬಂಡವಾಳ ಶಾಹಿಗಳು ಮತ್ತದೇ ಆಸೆ ಬುರುಕತನದಿಂದ ಹತ್ತಾರು, ನೂರಾರು ಎಕರೆ ಭೂಮಿಯನ್ನು ಲೀಸ್‌ಗೆ ಪಡೆದು ಶುಂಠಿ ಬೆಳೆಯಲು ಮುಂದಾಗಿದ್ದಾರೆ. ಆದರೀಗ ನೀರಿನ ಅಲಭ್ಯತೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ.

ಎಕರೆಗೆ ರೂ. ೫ ಲಕ್ಷ ವೆಚ್ಚ

ಈ ಬಾರಿ ಶುಂಠಿ ಬೆಳೆವ ಭೂಮಿಗೆ ಎಕರೆಗೆ ಕನಿಷ್ಟ ೮೦ ಸಾವಿರದಿಂದ ಗರಿಷ್ಠ ಒಂದು ಲಕ್ಷದವರೆಗೂ ಹೋದದ್ದು, ಜೊತೆಗೆ ಬಿತ್ತನೆ ಬೀಜಕ್ಕೆ ಚೀಲವೊಂದಕ್ಕೆ ರೂ. ೬,೫೦೦ ಇದ್ದದ್ದು ಸೇರಿದಂತೆ ಎಲ್ಲಾ ಖರ್ಚುಗಳು ಸೇರಿ ೫ ಲಕ್ಷ ಹಣ ಖರ್ಚಾಗಲಿದೆ. ಹೀಗಿರುವಾಗ ಉತ್ತಮ ಮಳೆಯಾಗಿ ಒಂದು ಎಕರೆ ಹೊಲದಲ್ಲಿ ಯಾವುದೇ ರೋಗ ಬಾಧೆ ಬಾಧಿಸದೇ ಸರಾಸರಿ ೩೦೦ ರಿಂದ ೩೫೦ ಚೀಲ ಶುಂಠಿಯ ಫಸಲು ಬಂದು ಕನಿಷ್ಟ ೩ ಸಾವಿರ ಧಾರಣೆ ದೊರಕಿದರೆ ರೈತನ ಶ್ರಮಕ್ಕೆ ಪ್ರತಿಫಲ ದೊರಕುತ್ತದೆ. ಇಲ್ಲವೇ ನಷ್ಟಕ್ಕೆ ಸಿಲುಕಬೇಕಾಗುತ್ತದೆ.

- ಕೆ.ಎಸ್. ಮೂರ್ತಿ