ಮಡಿಕೇರಿ, ಮಾ. ೧೫: ನದಿ ಹಾಗೂ ನದಿಮೂಲಗಳಿಂದ ಅನ್ಯಬಳಕೆಗೆ ನೀರು ಬಳಸುವುದನ್ನು ನಿಷೇಧ ಮಾಡಿರುವ ಜಿಲ್ಲಾಧಿಕಾರಿಗಳ ಆದೇಶವನ್ನು ವಿರೋಧಿಸಿ ಕೊಡಗು ಜಿಲ್ಲಾ ರೈತ ಸಂಘ ನಗರದ ಜಿಲ್ಲಾಡಳಿತ ಭವನ ಎದುರು ‘ನಮ್ಮ ನೀರು, ನಮ್ಮ ಹಕ್ಕು’ ಎಂಬ ಘೋಷವಾಕ್ಯದಡಿ ಪ್ರತಿಭಟನೆ ನಡೆಸಿ ರೈತರಿಗೆ ವಿನಾಯಿತಿ ನೀಡುವಂತೆ ಆಗ್ರಹಿಸಿತು.

ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ರೈತ ಸಂಘ ಸದಸ್ಯರು ಘೋಷಣೆ ಕೂಗಿ ಸರಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರೈತ ಸಂಘ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮಾತನಾಡಿ, ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶವಾಗಿದೆ ಹೊರತು ರೈತರಿಂದಲ್ಲ. ಅರಣ್ಯಕ್ಕಿಂತ ಹೆಚ್ಚಿನ ಗಿಡ-ಮರಗಳು ತೋಟಗಳಲ್ಲಿವೆ.

(ಮೊದಲ ಪುಟದಿಂದ) ಪ್ರಕೃತಿಯನ್ನು ಪೂಜಿಸುವ ರೈತರು ನೀರನ್ನು ಬಳಸಲು ನಿಜವಾದ ಹಕ್ಕುದಾರರು. ಜಿಲ್ಲಾಡಳಿತದ ಈ ಆದೇಶ ರೈತರಿಗೆ ಮಾರಕವಾಗಿದೆ. ವಾಣಿಜ್ಯ ಉದ್ದೇಶ ಅಥವಾ ಬೇರೆ ವಿಚಾರಗಳಿಗೆ ನೀರು ಪೋಲು ಮಾಡುವುದನ್ನು ನಾವು ಒಪ್ಪುವುದಿಲ್ಲ. ರೈತರ ಬಳಕೆಗೆ ನಿರ್ಬಂಧ ಸರಿಯಲ್ಲ. ನೀರಿನ ಸಮಸ್ಯೆಗೆ ನಿಯಮ ರೂಪಿಸುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾರಣ ಎಂದು ಟೀಕಿಸಿದರು.

ನೀರಿನ ಸಂಗ್ರಹಕ್ಕೆ ಚೆಕ್‌ಡ್ಯಾಂ ನಿರ್ಮಾಣ ಮಾಡಬೇಕು, ಕೊಳವೆ ಬಾವಿಗಳ ನಿರ್ಮಾಣ ಹೆಚ್ಚಾಗಬೇಕು, ಮಳೆ ಕೊಯ್ಲು, ಅಂತರ್ಜಲ ವೃದ್ಧಿಗೆ ಯೋಜನೆ ರೂಪಿಸಬೇಕು, ತಾಂತ್ರಿಕ ಸಮಿತಿ ರಚಿಸಿ ನೀರಿನ ಬಿಕ್ಕಟ್ಟು ಶಮನ ಮಾಡಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟರು. ರೈತ ಸಂಘದ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಈ ಕ್ರಮವಹಿಸಲಾಗಿದೆ. ನೀರು ದಿಢೀರ್ ಬತ್ತಲು ಆರಂಭಿಸಿದ ಹಿನ್ನೆಲೆ ಅನ್ಯಬಳಕೆಗೆ ನಿಷೇಧಿಸಲಾಗಿದೆ. ರೈತರಿಗೆ ಈ ಆದೇಶದಿಂದ ಯಾವುದೇ ಸಮಸ್ಯೆಯಾಗದ ರೀತಿ ಚರ್ಚಿಸಿ ಕ್ರಮವಹಿಸಲಾಗುವುದು. ಮುಂದಿನ ದಿನಗಳಲ್ಲಿ ಮಳೆ ಬರುವ ಲಕ್ಷಣವಿದೆ. ರೈತರಿಗೆ ತೊಂದರೆ ಕೊಡುವ ಉದ್ದೇಶ ಜಿಲ್ಲಾಡಳಿತದಲ್ಲ. ರೈತರು ನೀರನ್ನು ಹಾಗೂ ಪರಿಸರ ಉಳಿಸುತ್ತಾರೆ. ಈ ಆದೇಶ ರೈತರ ವಿರುದ್ಧವಲ್ಲ. ರೈತ ಸಂಘ ನೀಡಿದ ಸಲಹೆಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್, ಪ್ರಮುಖರಾದ ಕಿಸ ಮಾಚಯ್ಯ, ತಾಣಚ್ಚಿರ ಲೆಹರ್ ಬಿದ್ದಪ್ಪ, ಚೆಟ್ಟಂಗಡ ಕಂಬ ಕಾರ್ಯಪ್ಪ, ಜೀವನ್, ಲಕ್ಷö್ಮಣ್ ಗೌಡ, ಅಶೋಕ್, ಮಂಜುನಾಥ್, ಸುರೇಶ್, ಪೊನ್ನಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.