ನವದೆಹಲಿ, ಮಾ. ೧೬: ಇಡೀ ದೇಶವೇ ತೀವ್ರ ಕುತೂಹಲದಿಂದ ಕಾಯುತ್ತಿದ್ದ ೨೦೨೪ರ ಲೋಕಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿಗೊಳಿಸಿದೆ. ದೇಶದಲ್ಲಿ ಏಪ್ರಿಲ್ ೧೯ ರಿಂದ ಒಟ್ಟು ೭ ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಜೂನ್ ೪ ರಂದು ಫಲಿತಾಂಶ ಘೋಷಣೆಯಾಗಲಿದೆ.

ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, ನಾವು ಭಾರತೀಯ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬಕ್ಕೆ ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ಫೇಕ್ ಸುದ್ದಿಗಳ ಮೇಲೂ ತೀವ್ರ ನಿಗಾ ಇಡಲಾಗುವುದು. ಅಭ್ಯರ್ಥಿಗಳ ಬಗ್ಗೆ ಮಾತನಾಡಲು ಅವಕಾಶವಿದೆ. ಆದರೆ ಸುಳ್ಳು ಸುದ್ದಿಗಳ ಮೂಲಕ ತೆಗಳಲು ಅವಕಾಶವಿಲ್ಲ ಎಂದು ಹೇಳಿದರು. ೨೦೨೪ ರ ಲೋಕಸಭೆ ಚುನಾವಣೆ ಜೊತೆಗೆ ಆಂಧ್ರ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಹಾಗೂ ಒಡಿಶಾ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಲ್ಲದೆ ರಾಜ್ಯದ ಸುರಪುರ ವಿಧಾನಸಭಾ ಕ್ಷೇತ್ರಕ್ಕೂ ಉಪ ಚುನಾವಣೆ ಘೋಷಿಸಲಾಗಿದೆ.

ಕರ್ನಾಟಕಕ್ಕೆ ೨ ಹಂತದ ಚುನಾವಣೆ

ಏಪ್ರಿಲ್ ೨೬ ರಂದು ರಾಜ್ಯದ ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕ್ಷೇತ್ರಕ್ಕೆ ಮತದಾನ ನಡೆಯಲಿದೆ.

ಮೇ ೭ ರಂದು ಎರಡನೇ ಹಂತದಲ್ಲಿ ಒಟ್ಟು ೧೪ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಬೆಳಗಾವಿ, ಬಳ್ಳಾರಿ, ಚಿಕ್ಕೋಡಿ, ಹಾವೇರಿ-ಗದಗ, ಕಲಬುರಗಿ, ಬೀದರ್, ಹುಬ್ಬಳಿ - ಧಾರವಾಡ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಬಾಗಲಕೋಟೆ, ವಿಜಯಪುರದಲ್ಲಿ ಮೇ ೭ ರಂದು ಚುನಾವಣೆ ನಡೆಯಲಿದೆ ಎಂದು ತಿಳಿಸಿದರು. ಏನೆಲ್ಲ ಕ್ರಮಗಳು..?

ಚುನಾವಣೆಯಲ್ಲಿ ಪಕ್ಷಗಳು ವೈಯಕ್ತಿಕ ದಾಳಿ ನಡೆಸದೇ, ಆರೋಗ್ಯಕರ ಸ್ಪರ್ಧೆಗೆ ಒತ್ತು ನೀಡಬೇಕು ಎಂದು ತಿಳಿಸಿದ ಚುನಾವಣಾಧಿಕಾರಿ, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ವೀಕ್ಷಕರ ಸಮ್ಮುಖದಲ್ಲೇ ಇವಿಎಂಗಳ ವಿತರಣೆ, ಸಂಗ್ರಹ, ಮತ ಎಣಿಕೆಯನ್ನು ನಡೆಸಲಾಗುವುದು. ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳ ಬಳಕೆಗೆ ನಿಷೇಧ. ಉಲ್ಲಂಘಿಸಿದರೆ ಕಠಿಣ ಕ್ರಮವಹಿಸಲಾಗುವುದು ಎಂದು ರಾಜೀವ್ ಎಚ್ಚರಿಸಿದರು.

ಆನ್‌ಲೈನ್‌ನಲ್ಲಿ ನಡೆಯುವ ಹಣದ ವಹಿವಾಟಿನ ಮೇಲೂ ಕಣ್ಣು ಇಡಲಿದ್ದೇವೆ. ಮತದಾರರಿಗೆ ಯಾವುದೇ ರೀತಿಯ ಆಮಿಷಗಳನ್ನು ಒಡ್ಡುವಂತಿಲ್ಲ. ಮತದಾರರನ್ನು ದಿಕ್ಕು ತಪ್ಪಿಸುವಂತೆ ಮಾಡುವ ಹಾಗಿಲ್ಲ. ಸೂರ್ಯಾಸ್ತದ

(ಮೊದಲ ಪುಟದಿಂದ) ಬಳಿಕ ಎ.ಟಿ.ಎಂ. ವಾಹನ ಸಂಚರಿಸುವAತಿಲ್ಲ ಎಂದು ಮಾಹಿತಿ ಒದಗಿಸಿದ ಅವರು, ಹಣ ಬಲ, ತೋಳು ಬಲವನ್ನು ಚುನಾವಣಾ ಅಕ್ರಮಗಳಿಗೆ ಬಳಿಸಿದರೆ ವಿರುದ್ಧ ಕಠಿಣ ಕ್ರಮ ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹಣ ಅಕ್ರಮ ಸಾಗಣೆ ತಡೆಗೆ ರಸ್ತೆ, ರೈಲು ಮತ್ತು ವಾಯು ಮಾರ್ಗದಲ್ಲೂ ತಪಾಸಣೆಗೆ ಕ್ರಮವಹಿಸಲಾಗುವುದು. ಹಣ ಅಕ್ರಮ ಸಾಗಣೆ, ಹಂಚಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಜಿಲ್ಲೆಯಲ್ಲೂ ಚುನಾವಣಾ ನಿಯಂತ್ರಣ ಕೊಠಡಿ ಸ್ಥಾಪನೆ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಸ್ಥಾಪನೆ ಗಡಿ ಭಾಗಗಳಲ್ಲಿ ಡ್ರೋನ್ ಮೂಲಕ ಕಣ್ಗಾವಲು. ಗಲಭೆ ನಡೆಸಿದರೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದರು.

ದೇಶದಲ್ಲಿ ೨.೧೮ ಲಕ್ಷ ಶತಾಯುಷಿಗಳು ಮತ ಚಲಾಯಿಸಲಿದ್ದಾರೆ. ಅಭ್ಯರ್ಥಿಗಳು ತಮ್ಮ ಮೇಲಿನ ಕ್ರಿಮಿನಲ್ ಕೇಸ್‌ಗಳನ್ನು ಆಯೋಗಕ್ಕೆ ನೀಡುವುದು ಕಡ್ಡಾಯವಾಗಿರುತ್ತದೆ. ೮೦ ವರ್ಷ ಮೇಲಿನ ಮತದಾರರನ್ನು ಮತಗಟ್ಟೆಗೆ ಕರೆತರಲು ವಾಹನ ವ್ಯವಸ್ಥೆ, ೧ ಮತಗಟ್ಟೆಗಳಲ್ಲಿ ಮಾಹಿತಿ ಕೇಂದ್ರ, ಗಾಲಿ ಕುರ್ಚಿ ಕುಡಿಯುವ ನೀರು ವ್ಯವಸ್ಥೆ. ಶೇ ೪೦ಕ್ಕಿಂತ ಹೆಚ್ಚಿನ ಅಂಗವೈಕಲ್ಯತೆ ಇರುವವರಿಗೆ ಮನೆಯಿಂದಲೇ ಮತದಾನ ಅವಕಾಶ ನೀಡಲಾಗುವುದು. ವಯೋವೃದ್ಧ ಮತದಾರರನ್ನು ಮತಗಟ್ಟೆಗೆ ಕರೆತರಲು ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ೪೮ ಸಾವಿರ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಇದ್ದಾರೆ. ೧೨ ರಾಜ್ಯಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಜಾಸ್ತಿ ಇದೆ ಎಂದು ವಿವರ ನೀಡಿದರು.

ದೇಶದಲ್ಲಿ ೮೫ ವರ್ಷ ಮೇಲ್ಪಟ್ಟ ೮೨ ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. ಒಟ್ಟು ೫೫ ಲಕ್ಷ ಇವಿಎಂಗಳ ಬಳಕೆಯಾಗಲಿದೆ. ೧.೮ ಕೋಟಿ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ದೇಶದಲ್ಲಿ ಸುಮಾರು ೯೭ ಕೋಟಿ ಮತದಾರರು ಇದ್ದಾರೆ. ೧.೫ ಕೋಟಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಚುನಾವಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ೪೯.೭ ಕೋಟಿ ಪುರುಷ ಮತದಾರರು, ೪೭.೧ ಕೋಟಿ ಮಹಿಳಾ ಮತದಾರರು ಇದ್ದಾರೆ. ಸಮಾರು ೧೯.೭೪ ಕೋಟಿ ಯುವ ಮತದಾರರು ಇರುವುದಾಗಿ ರಾಜೀವ್ ಕುಮಾರ್ ಸವಿವರ ನೀಡಿದರು.

ಲೋಕಸಭೆ ಚುನಾವಣೆ ನಡೆಸಲು ಆಯೋಗ ಸರ್ವಸನ್ನದ್ಧವಾಗಿದೆ ಎಂದು ಘೋಷಿಸಿದ ಮುಖ್ಯ ಚುನಾವಣಾ ಆಯುಕ್ತರು, ೧೮ನೇ ಲೋಕಸಭೆಗೆ ಚುನಾವಣಾ ದಿನಾಂಕ ಘೋಷಣೆ, ಅಧಿಸೂಚನೆ ಪ್ರಕಟ, ೫೪೩ ಲೋಕಸಭಾ ಕ್ಷೇತ್ರ. ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಂಪೂರ್ಣ ತಯಾರಿಯಾಗಿದೆ ಎಂದು ಹೇಳಿದರು.