ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಗಂಭೀರ ಗಾಯ

ಕೋಲ್ಕತ್ತಾ, ಮಾ. ೧೪: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಗಂಭೀರ ಗಾಯವಾಗಿರುವ ಬಗ್ಗೆ ವರದಿಯಾಗಿದೆ. ಮಮತಾ ಬ್ಯಾನರ್ಜಿ ಅವರ ಹಣೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಟಿಎಂಸಿ ಪಕ್ಷ ಅಧಿಕೃತವಾಗಿ ತಿಳಿಸಿದೆ. ಟಿಎಂಸಿ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಮತಾ ಬ್ಯಾನರ್ಜಿ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿರುವ ಫೋಟೋ ಹಂಚಿಕೊAಡಿದ್ದು, ಅವರ ಹಣೆಯ ಮಧ್ಯದಲ್ಲಿ ಆಳವಾದ ಗಾಯವಾಗಿದ್ದು, ರಕ್ತ ಮುಖದ ಮೇಲೆ ಬಿದ್ದಿರುವ ಫೋಟೋಗಳನ್ನು ಹರಿಯಬಿಟ್ಟಿದೆ. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ.

ದೇವಸ್ಥಾನದಲ್ಲಿ ಪ್ರಸಾದ ಪರಿಶೀಲನೆ

ಬೆಂಗಳೂರು, ಮಾ. ೧೪: ಕರ್ನಾಟಕ ಸರಕಾರದ ಧಾರ್ಮಿಕ ಹಾಗೂ ದತ್ತಿಗಳ ಇಲಾಖೆ ಅಧೀನದಲ್ಲಿ ಬರುವ ದೇವಾಲಯಗಳಲ್ಲಿ ವಿತರಣೆ ಮಾಡುವ ಪ್ರಸಾದದ ಗುಣಮಟ್ಟ ಪರೀಕ್ಷೆ ಮಾಡುವ ಸಂಬAಧ ಸರಕಾರ ಆದೇಶ ಹೊರಡಿಸಿದೆ. ಇಲಾಖಾ ವ್ಯಾಪ್ತಿಯ ಹಲವಾರು ದೇವಾಲಯಗಳಲ್ಲಿ ವಿತರಿಸಲಾಗುವ ಪ್ರಸಾದದ ಸೇವನೆಯಿಂದ ಸಾರ್ವಜನಿಕರ ಆರೋಗ್ಯವು ಹದಗೆಡುವ ಅನೇಕ ಪ್ರಕರಣಗಳು ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕರಿಂದ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ವಿತರಿಸಲಾಗುವ ಪ್ರಸಾದಕ್ಕೆ ಬಳಸಲಾಗುವ ಕಚ್ಛಾ ಸಾಮಗ್ರಿಗಳ ಗುಣಮಟ್ಟವನ್ನು ಪರೀಕ್ಷಿಸುವುದು ಅಗತ್ಯವಾಗಿರುತ್ತದೆ. ಈ ಸಂಬAಧ ಇಲಾಖಾ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಪ್ರಸಾದ ತಯಾರಿಕೆಗೆ ಬಳಸಲಾಗುವ ಕಚ್ಛಾ ಸಾಮಗ್ರಿಗಳನ್ನು ಎಫ್.ಎಸ್.ಎಸ್.ಎ.ಐ. ಅಗೀಕೃತ, ಎನ್.ಎ.ಬಿ.ಎಲ್. ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ತಮ್ಮ ಇಲಾಖಾ ಅನುದಾನದಲ್ಲಿ ಕಾಲಕಾಲಕ್ಕೆ ಗುಣವಿಶ್ಲೇಷಣೆಗೊಳಪಡಿಸಿ ನಂತರ ಉಪಯೋಗಿಸುವಂತೆ ಸಂಬAಧಿಸಿದವರಿಗೆ ಅಗತ್ಯ ಸೂಚನೆಗಳನ್ನು ನೀಡುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಬಿಟ್‌ಕಾಯಿನ್ ಹಗರಣ: ಎಸ್‌ಐಟಿ ಕೇಸಿನ ಹಿಂದೆ ದುರುದ್ದೇಶ; ಆರೋಪಿ ಇನ್ಸ್ಪೆಕ್ಟರ್ ಚಂದ್ರಧರ ಹೇಳಿಕೆ

ಬೆಂಗಳೂರು, ಮಾ. ೧೪: ಬಿಟ್‌ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ವಿಭಾಗದ ವಿಶೇಷ ತನಿಖಾ ತಂಡ ಹಿಂದಿನ ಬಿಜೆಪಿ ಸರ್ಕಾರದ ಅವ್ಯವಹಾರವನ್ನು ಬಯಲಿಗೆಳೆದು ರಾಜಕೀಯ ಸೇಡು ತೀರಿಸಿಕೊಳ್ಳಲು ನೋಡುತ್ತಿದೆ ಎಂದು ಹಗರಣದ ಆರೋಪಿ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರಕರಣವನ್ನು ಮೊದಲು ೨೦೨೦ ರಲ್ಲಿ ದಾಖಲಿಸಲಾಗಿತ್ತು, ಆದರೆ ಆ ಪ್ರಕರಣದಲ್ಲಿನ ತನಿಖಾಧಿಕಾರಿಗಳನ್ನು ಈಗ ಬಲಿಪಶುಗಳಾಗಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಯಲಹಂಕದ ಸಶಸ್ತç ಪೊಲೀಸ್ ತರಬೇತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ಸ್ಪೆಕ್ಟರ್ ಚಂದ್ರಧರ ಎಸ್‌ಆರ್ ಅವರು ೫೧ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಈ ಆರೋಪಗಳನ್ನು ಮಾಡಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಇಲ್ಲ

ಬೆಂಗಳೂರು, ಮಾ. ೧೪: ಕಳೆದ ಮಾರ್ಚ್ ೭ ರಂದು ಭೌತಶಾಸ್ತçದ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಬಹು ಆಯ್ಕೆಯ ಪ್ರಶ್ನೆಗಳು ಕಷ್ಟಕರವಾಗಿದ್ದರಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡುತ್ತಿದೆ ಎಂದು ಹಬ್ಬಿರುವ ವದಂತಿ ನಿಜವಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. “ಪತ್ರಿಕೆಯ ಭಾಗ ಎಯಲ್ಲಿ ಬ್ಲೂಪ್ರಿಂಟ್ ಅಲ್ಲದ ಬಹು ಆಯ್ಕೆ ಮಾದರಿ ಪ್ರಶ್ನೆಗಳನ್ನು ಪ್ರಯತ್ನಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲು ಮಂಡಳಿಯು ನಿರ್ಧರಿಸಿದೆ. ಪ್ರಶ್ನೆಗಳನ್ನು ಹಾಗೆಯೇ ಪ್ರಯತ್ನಿಸದೆ ಬಿಟ್ಟುಬಿಟ್ಟ ವಿದ್ಯಾರ್ಥಿಗಳಿಗೆ ಯಾವುದೇ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು ಮಾರ್ಚ್ ೧೦ ರಂದು ಹೊರಡಿಸಲಾದ ಸುತ್ತೋಲೆ ನಕಲಿ ಮತ್ತು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ತಪ್ಪುದಾರಿಗೆಳೆಯುವಂಥದ್ದು ಎಂದು ಮಂಡಳಿ ತಿಳಿಸಿದೆ. “ಇಲಾಖೆ ಗ್ರೇಸ್ ಮಾರ್ಕ್ಗಳನ್ನು ನೀಡಲಿದೆ ಎಂದು ಸುತ್ತೋಲೆ ಇಂಟರ್ನೆಟ್, ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಆದರೆ ನಾವು ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪತ್ರಿಕೆಯಲ್ಲಿ ಕಾಣಿಸಿಕೊಂಡ ಎಲ್ಲಾ ಪ್ರಶ್ನೆಗಳು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ಭಾಗವಾಗಿತ್ತು. ಈಗ ಎಲ್ಲೆಡೆ ಹರಿದಾಡುತ್ತಿರುವ ಸುತ್ತೋಲೆ ಮಂಡಳಿಯ ಅಧಿಕೃತ ಸುತ್ತೋಲೆಯಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದರು.