ಸೋಮವಾರಪೇಟೆ, ಮಾ. ೧೪: ಪಟ್ಟಣದಲ್ಲಿ ಕಸವಿಲೇವಾರಿ ಸಮಸ್ಯೆ ಕಗ್ಗಂಟಾಗಿ ಪರಿಣಮಿಸಿದ್ದು, ಸಾರ್ವಜನಿಕರು ಎಲ್ಲೆಂದರಲ್ಲಿ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಶೌಚಾಲಯ ಸಮೀಪ, ಸಿ.ಕೆ. ಸುಬ್ಬಯ್ಯ ರಸ್ತೆ, ತೋಟಗಾರಿಕಾ ಇಲಾಖೆ ಸಮೀಪ, ವಿರಕ್ತ ಮಠದ ಜಾಗದಲ್ಲಿ ಬೇಕಾಬಿಟ್ಟಿ ಕಸ ಎಸೆಯಲಾಗುತ್ತಿದೆ.
ವಿರಕ್ತ ಮಠದ ಜಮೀನು ಪ್ರಸ್ತುತ ಕಸದ ಕೊಂಪೆಯಾಗಿದೆ. ಆದರೆ ಮಠದ ವ್ಯವಸ್ಥಾಪಕ ರಾಗಲಿ, ಪಟ್ಟಣ ಪಂಚಾಯಿತಿಯಾಗಲಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಪಟ್ಟಣದ ವಾರ್ಡ್ ೩ರ ಕರ್ಕಳ್ಳಿ ರಸ್ತೆಯ ಮಠದ ಶಾಲೆ ಹಾಗೂ ಕಟ್ಟೆ ಬಸವೇಶ್ವರ ದೇವಾಲಯದ ಸಮೀಪದ ಸಿಕ್ಕ ಸಿಕ್ಕವರೆಲ್ಲಾ ತಮ್ಮ ಮನೆಯ ಅನುಪಯುಕ್ತ ವಸ್ತುಗಳು, ದಿನನಿತ್ಯದ ತ್ಯಾಜ್ಯಗಳನ್ನು ತಂದು ಸುರಿಯುತ್ತಿರು ವುದರಿಂದ ಅಕ್ಕಪಕ್ಕದ ಮನೆಯವರು, ಶಾಲೆಯ ಮಕ್ಕಳು ಮೂಗುಮುಚ್ಚಿ ಕುಳಿತುಕೊಳ್ಳಬೇಕಾಗಿದೆ.
ಮಠದ ಜಮೀನಿನಲ್ಲಿ ಹಲವು ವರ್ಷಗಳಿಂದ ಶುಂಠಿ ಕೃಷಿ ಮಾಡಿ ಕೊಂಡಿರುವವರು ಪಂಚಾಯ್ತಿಯ ಚರಂಡಿಯನ್ನು ಮುಚ್ಚಿ ರಸ್ತೆ ಮಾಡಿ ಕೊಂಡಿರುವುದರಿAದ ವಾಹನಗಳಲ್ಲಿ ಕಸವನ್ನು ತಂದು ಸುರಿಯುತ್ತಿದ್ದಾರೆ. ಕಟ್ಟಡ ಒಡೆದ ಇಟ್ಟಿಗೆ, ಸಿಮೆಂಟ್ ವಸ್ತುಗಳು, ಸಮೀಪದ ಕೋಳಿಮಾಂಸ ಅಂಗಡಿಯವರು ಚೀಲ, ಚೀಲಗಳಲ್ಲಿ ರೆಕ್ಕೆ, ಪುಕ್ಕ ಸೇರಿದಂತೆ ಅದರ ತ್ಯಾಜ್ಯಗಳನ್ನು ತಂದು ಸುರಿಯುತ್ತಿರು ವುದರಿಂದ ಇಲ್ಲಿನ ವಾತಾವರಣ ಗಬ್ಬೆದ್ದು ನಾರುತ್ತಿದೆ. ಮನೆಯ ಹಳೆಯ ಕಮೊಡ್, ಟಿವಿ ಸೇರಿದಂತೆ ನಿರುಪಯುಕ್ತ ವಸ್ತುಗಳ ರಾಶಿಯೇ ಬಿದ್ದಿದೆ. ಸ್ಯಾನಿಟರಿ ಪ್ಯಾಡ್ಗಳನ್ನು ಚೀಲಗಳಲ್ಲಿ ತಂದು ಹಾಕಲಾಗಿದೆ. ಇನ್ನು ಎಣ್ಣೆ ಪ್ರಿಯರು ಇದೇ ಜಾಗದಲ್ಲಿ ಮದ್ಯ ಹಾಕಿಕೊಂಡು ಇಸ್ಪೀಟ್ ಆಡುವುದು ಮಾಮೂಲಿಯಾಗಿದೆ. ಎಲ್ಲೆಲ್ಲೋ ಎಣ್ಣೆ ಪಾರ್ಟಿ ಮಾಡಿ ಖಾಲಿ ಬಾಟಲ್ ಹಾಗೂ ಟೆಟ್ರಾ ಪ್ಯಾಕ್ಗಳನ್ನೂ ತಂದು ಇಲ್ಲಿ ಹಾಕಲಾಗಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಪೊಟ್ಟಣಗಳು ಕಂಡುಬರುತ್ತಿದ್ದು, ಹಕ್ಕಿ ಪಕ್ಷಿಗಳು, ನಾಯಿಗಳು ಕಚ್ಚಿಕೊಂಡು ರಸ್ತೆ ಹಾಗೂ ಅಕ್ಕ ಪಕ್ಕದಲ್ಲಿ ಹಾಕುತ್ತಿರುವುದರಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ. ಜಾನುವಾರುಗಳು ಕೂಡ ಪ್ಲಾಸ್ಟಿಕ್ ತಿನ್ನುತಿರುವುದರಿಂದ ಅವುಗಳ ಪ್ರಾಣಕ್ಕೆ ಸಂಚಕಾರವಾಗಲಿದೆ. ಆದರೆ ಮಠದ ಜಮೀನಿನಲ್ಲಿ ಈ ರೀತಿ ರಾಶಿರಾಶಿ ಕಸ ಹಾಕುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಸುತ್ತಮುತ್ತಲಿನ ನಿವಾಸಿಗಳಿಗೆ ಸಮಸ್ಯೆಯಾಗಿದೆ. ತಕ್ಷಣವೇ ಮಠದ ಜಮೀನಿಗೆ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯೆ ಮೋಹಿನಿ ಆಗ್ರಹಿಸಿದ್ದಾರೆ.
ಬೇಸಿಗೆ ಕಾಲವಾಗಿದ್ದು ಕೋಳಿ ತ್ಯಾಜ್ಯ ಹಾಗೂ ಸ್ಯಾನಿಟರಿ ಪ್ಯಾಡ್ ಗಳಂತಹ ವಸ್ತುಗಳಿಂದ ರೋಗರುಜಿನಗಳು ಹರಡುವ ಸಾಧ್ಯತೆ ಇರುವುದರಿಂದ ಪಟ್ಟಣ ಪಂಚಾಯಿತಿ ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.