ಕುಶಾಲನಗರ, ಮಾ. ೧೩: ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಆಶ್ರಯದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅವರೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಂವಾದ ಕಾರ್ಯಕ್ರಮ ಶಾಸಕರ ಗೈರು ಹಾಜರಿಯಿಂದ ರದ್ದುಪಡಿಸಲಾಯಿತು ಎಂದು ಅಧ್ಯಕ್ಷರಾದ ರವೀಂದ್ರ ರೈ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಶಾಸಕರು ಆಗಮಿಸದೆ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸುಮಾರು ಮೂರು ಗಂಟೆಗಳ ಕಾಲ ಕಾದು ನಂತರ ಸಭೆಯನ್ನು ರದ್ದುಗೊಳಿಸಲಾಯಿತು.
ಪಟ್ಟಣದ ಅಭಿವೃದ್ಧಿಯ ಉದ್ದೇಶ ಹೊತ್ತು ಶಾಸಕರೊಂದಿಗೆ ಸಭೆಯ ಬಗ್ಗೆ ಮುಂಚಿತವಾಗಿ ಚರ್ಚಿಸಿ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಚೇಂಬರ್ ಸದಸ್ಯರು ಸುಮಾರು ಮೂರು ಗಂಟೆಗಳ ಕಾಲ ಶಾಸಕರ ಆಗಮನಕ್ಕೆ ಕಾದು ಕುಳಿತಿದ್ದು ಕೊನೆಗಳಿಗೆಯಲ್ಲಿ ತಮ್ಮನ್ನು ಪ್ರವಾಸಿ ಮಂದಿರಕ್ಕೆ ಬರುವಂತೆ ತಿಳಿಸಲಾಯಿತು.
ಶಾಸಕರು ಸಭೆಗೆ ಗೈರುಹಾಜರಾಗಿರುವ ಬಗ್ಗೆ ತಮಗೆ ತುಂಬಾ ಬೇಸರ ಉಂಟಾಗಿದೆ. ಈ ನಿಟ್ಟಿನಲ್ಲಿ ನಡೆಯಬೇಕಾಗಿದ್ದ ಸಭೆಯನ್ನು ರದ್ದು ಗೊಳಿಸಲಾಯಿತು ಎಂದು ಚೇಂಬರ್ ಅಧ್ಯಕ್ಷರಾದ ರವೀಂದ್ರ ರೈ ವಿಷಾದ ವ್ಯಕ್ತಪಡಿಸಿದ್ದಾರೆ.