ಸೋಮವಾರಪೇಟೆ, ಮಾ. ೧೩: ಕನ್ನಡ ಭಾಷೆಗೆ ಸಾಹಿತ್ಯವೇ ತಾಯಿಬೇರಿದ್ದಂತೆ. ಭಾಷೆ ಉಳಿಯ ಬೇಕಿದ್ದರೆ ಸಾಹಿತ್ಯದ ಬೆಳವಣಿಗೆ ಯಾಗಬೇಕು. ಈ ನಿಟ್ಟಿನಲ್ಲಿಯೂ ಕರ್ನಾಟಕ ರಕ್ಷಣಾ ವೇದಿಕೆ ಮುನ್ನಡಿ ಯಿಡಲಿ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅವರು ಕರೆ ನೀಡಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತಿಕವಾಗಿ ಕನ್ನಡ ಬೆಳೆಯ ಬೇಕು. ಸಾಹಿತ್ಯವೇ ಕನ್ನಡದ ತಾಯಿ ಬೇರು. ಸಾಹಿತ್ಯ, ಸಾಹಿತಿಗಳಿಗೆ ಸಮಾಜದಿಂದ ಪ್ರೋತ್ಸಾಹ ಬೇಕು. ಜೊತೆಜೊತೆಯಾಗಿ ಹೆಜ್ಜೆ ಹಾಕುವ ಮೂಲಕ ಭಾಷಾ ಬೆಳವಣಿಗೆಯಲ್ಲಿ ನಾವೆಲ್ಲರೂ ಸಾಗಬೇಕು ಎಂದರು.

ರಾಜಧಾನಿ ಬೆಂಗಳೂರಿನ ಹೊಟೇಲ್, ಅಂಗಡಿ ಮುಂಗಟ್ಟು ಸೇರಿದಂತೆ ಕಟ್ಟಡದ ಕೆಲಸಗಳಲ್ಲಿ ಕನ್ನಡೇತರರೇ ಹೆಚ್ಚಿದ್ದಾರೆ. ಪಟ್ಟಣ ಪ್ರದೇಶಗಳಲ್ಲಿ ಕನ್ನಡ ಅಪಾಯದ ಅಂಚಿನಲ್ಲಿರುವAತೆ ಭಾಸವಾಗುತ್ತಿದೆ. ಕನ್ನಡ ಭಾಷೆ, ಗಡಿ ರಕ್ಷಣೆಯ ಅಗತ್ಯವಿದೆ. ಕನ್ನಡ ಉಳಿಯಬೇಕು, ಬೆಳೆಯಬೇಕು. ಆ ಕಾರ್ಯದಲ್ಲಿ ಕೊಡಗು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯು ಯಶಸ್ಸು ಗಳಿಸಲಿ. ಕನ್ನಡಿಗರೆಲ್ಲರೂ ಈ ಕಾರ್ಯದಲ್ಲಿ ಕೈಜೋಡಿಸಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಕಸಾಪ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಸಂಘಟನೆಯ ಉದ್ದೇಶ ಒಳ್ಳೆಯದಿದ್ದರೆ ಮಾತ್ರ ಸಂಘಟನೆ ಬೆಳೆಯುತ್ತದೆ. ಗಡಿ ವ್ಯಾಪ್ತಿಯಲ್ಲಿ ಕನ್ನಡಿಗರ ಬದುಕು ಶೋಚನೀಯ ವಾಗಿದೆ. ಸರ್ಕಾರಗಳೂ ಸಹ ಗಡಿಗ ಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿವೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್, ಕಳೆದ ಎರಡೂವರೆ ದಶಕದಿಂದ ಕರವೇ ನಿರಂತರ ಜಾಗೃತಿ ಮೂಡಿಸುವುದ ರೊಂದಿಗೆ ನೆಲ, ಜಲ, ಗಡಿ, ಭಾಷೆಯ ರಕ್ಷಣೆ ಮಾಡುತ್ತಾ ಬಂದಿದೆ. ಕನ್ನಡದ ಹೋರಾಟದಲ್ಲಿ ಕಾರ್ಯಕರ್ತರು ಹಲವಷ್ಟು ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಆದರೂ ಕನ್ನಡದ ಕೆಲಸವನ್ನು ನಿಲ್ಲಿಸುವುದಿಲ್ಲ ಎಂದರು.

ಇದೇ ಸಂದರ್ಭ ಸೋಮ ವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ರನ್ನಾಗಿ ಕೆ.ಆರ್. ರೋಹಿತ್, ಕುಶಾಲನಗರ ತಾಲೂಕು ಅಧ್ಯಕ್ಷರಾಗಿ ಬಿ.ಜೆ. ಅಣ್ಣಯ್ಯ ಅವರನ್ನು ಆಯ್ಕೆ ಮಾಡಲಾಯಿತು. ಕೊಡಗು ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಕೆ.ಆರ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಪಿ. ಸುದರ್ಶನ್, ಉಪಾಧ್ಯಕ್ಷರಾಗಿ ಚಂದ್ರು, ಸಂಚಾಲಕರಾಗಿ ಬಿ.ವಿ.ರವಿ, ಉಪ ಸಂಚಾಲಕರಾಗಿ ತಾಕೇರಿ ಶೇಖರ್, ಯುವ ಘಟಕದ ಅಧ್ಯಕ್ಷರಾಗಿ ನಿತಿನ್ ಮಿಟ್ಟು, ಕಾರ್ಮಿಕ ಘಟಕದ ಸಂಚಾಲಕರಾಗಿ ಹೆಚ್. ಮಂಜುನಾಥ್, ಸಹ ಸಂಚಾಲಕರಾಗಿ ಮಧುಸೂದನ್, ಕೋಶಾಧಿಕಾರಿಯಾಗಿ ಜಗನ್ನಾಥ್, ತಾಲೂಕು ಕಾರ್ಮಿಕ ಘಟಕದ ಸಂಚಾಲಕರಾಗಿ ಬಿ.ಜಿ. ರವಿ, ಆಟೋ ಘಟಕದ ಸಂಚಾಲಕರಾಗಿ ಕಲ್ಕಂದೂರು ರಮೇಶ್ ಸೇರಿದಂತೆ ಗ್ರಾಮ ಸಮಿತಿಗಳಿಗೆ ಸಂಚಾಲಕರುಗಳನ್ನು ನೇಮಿಸಲಾಯಿತು.

ವೇದಿಕೆಯಲ್ಲಿ ಶರಣ ಸಾಹಿತ್ಯ ಪರಿಷತ್‌ನ ಎಸ್.ಮಹೇಶ್, ದೊಡ್ಡಮಳ್ತೆ ಗ್ರಾ.ಪಂ. ಸದಸ್ಯ ರುದ್ರಪ್ಪ, ಕೆಟಿಡಿಓ ತಾಲೂಕು ಅಧ್ಯಕ್ಷ ಬಿ.ವಿ. ರವಿ ಉಪಸ್ಥಿತರಿದ್ದರು. ವೇದಿಕೆಯ ರಾಣಿ ರವೀಂದ್ರ ಅವರು ಕಾರ್ಯಕ್ರಮ ನಿರ್ವಹಿಸಿದರು.