ಮಡಿಕೇರಿ, ಮಾ. ೧೩: ರಾಜ್ಯ ಮಟ್ಟದಲ್ಲಿ ಅತ್ಯಂತ ಚರ್ಚೆಗೆ ಗ್ರಾಸವಾಗಿದ್ದ ಜಿಲ್ಲಾಡಳಿತ ಭವನ ಎದುರಿನ ಜರ್ಮನ್ ತಂತ್ರಜ್ಞಾನದ ತಡೆಗೋಡೆಯನ್ನು ಪರಿಶೀಲಿಸಲು ವಿಧಾನಸಭೆ ಉಪಸಭಾಪತಿ, ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿ ಅಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ನೇತೃತ್ವದ ತಂಡ ತಾ. ೧೪ ರಂದು (ಇಂದು) ಆಗಮಿಸಲಿದೆ.

ರೂ. ೭ ಕೋಟಿ ವೆಚ್ಚದಲ್ಲಿ ಮಳೆಗಾಲದಲ್ಲಿ ಎದುರಾಗಬಹುದಾದ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ೨೦೨೧ರಲ್ಲಿ ಮಂಗಳೂರು-ಮಡಿಕೇರಿ ಹೆದ್ದಾರಿ ನಡುವಿನ ಜಿಲ್ಲಾಡಳಿತ ಭವನ ಎದುರಿನ ಬರೆಗೆ ಅಡ್ಡಲಾಗಿ ನಿರ್ಮಾಣಗೊಂಡ ‘ಕಾಂಕ್ರಿಟ್ ಪ್ಯಾನಲ್’ಗಳನ್ನು ಒಳಗೊಂಡ ತಡೆಗೋಡೆಯಲ್ಲಿ ಕಳೆದ ಮಳೆಗಾಲದಲ್ಲಿ ಉಬ್ಬು ಹಾಗೂ ಬಿರುಕು ಕಾಣಿಸಿಕೊಂಡಿತ್ತು. ನಂತರ ಅತ್ಯಂತ ವಿವಾದಕ್ಕೆ ಈ ತಡೆಗೋಡೆ ಕಾರಣವಾಗಿ ಪ್ಯಾನಲ್‌ಗಳನ್ನು ಕಳಚಿ ಮರು ನಿರ್ಮಾಣಕ್ಕೆ ಮುಂದಾಗ ಲಾಗಿತ್ತು. ಈ ಸಂಬAಧ ಜವಾಬ್ದಾರಿ ಹೊತ್ತಿದ್ದ ಅಧಿಕಾರಿಯನ್ನು ರಾಜ್ಯ ಸರಕಾರ ಅಮಾನತ್ತುಗೊಳಿಸಿತ್ತು. ಇಂದಿಗೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.

ಮಡಿಕೇರಿ ಶಾಸಕ ಮಂತರ್ ಗೌಡ ತಡೆಗೋಡೆ ಅವೈಜ್ಞಾನಿಕವಾಗಿ ಕೂಡಿರುವ ಕುರಿತು ಸರಕಾರದ ಗಮನ ಸೆಳೆದು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು. ಜೊತೆಗೆ ಸದನದಲ್ಲಿಯೂ ಪ್ರಸ್ತಾಪಿಸಿದ್ದರು. ಇದರೊಂದಿಗೆ ಕಾಂಗ್ರೆಸ್ ಮುಖಂಡ ತೆನ್ನೀರ ಮೈನಾ ಕೂಡ ಸರಕಾರಕ್ಕೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದ್ದರು.

ಇವೆಲ್ಲ ಕಾರಣಗಳಿಂದ ವಿಧಾನಸಭೆಯ ಅರ್ಜಿಗಳ ಸಮಿತಿಯು ಮಡಿಕೇರಿಗೆ ತಾ. ೧೪ ರಂದು ಬೆಳಿಗ್ಗೆ ಭೇಟಿ ನೀಡಿ ತಡೆಗೋಡೆ ಪರಿಶೀಲಿಸಿ ನಂತರ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಾಧಕ-ಬಾಧಕ ಅರಿತು ತಡೆಗೋಡೆ ಕೆಡವಿ ನವೀನ ತಂತ್ರಜ್ಞಾನದಲ್ಲಿ ನಿರ್ಮಾಣ ಮಾಡಬೇಕ? ಅಥವಾ ದುರಸ್ತಿಗೆ ಕ್ರಮವಹಿಸಬೇಕ? ಎಂಬುದರ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಶಾಸಕ ಡಾ. ಮಂತರ್ ಗೌಡ ‘ಶಕ್ತಿ’ಗೆ ತಿಳಿಸಿದ್ದಾರೆ.

ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಸೇರಿದಂತೆ ಸಮಿತಿ ಸದಸ್ಯರಾದ ಎಸ್. ಸುರೇಶ್, ಈ ತುಕಾರಾಮ್, ಎ. ಮಂಜು, ಸುರೇಶ್ ಬಾಬು ಪರಿಶೀಲನೆಗೆ ಆಗಮಿಸುತ್ತಿದ್ದು, ಲೈಸನ್ಸಿಂಗ್ ಅಧಿಕಾರಿಗಳಾಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಡಿ.ಎಂ. ಗಿರೀಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್ ನಾಯಕ್, ಲಿಂಗರಾಜು, ತಾಂತ್ರಿಕ ಸಹಾಯಕ ಕೆ.ಸಿ. ಸತೀಶ್, ಸಹಾಯಕ ಇಂಜಿನಿಯರ್ ರಾಮಣ್ಣಗೌಡ ಅವರುಗಳನ್ನು ನಿಯೋಜನೆಗೊಳಿಸಲಾಗಿದೆ.