ಮುಳ್ಳೂರು, ಮಾ. ೧೩: ಕೊಡಗು-ಹಾಸನ ಜಿಲ್ಲಾ ಗಡಿ ಭಾಗದಲ್ಲಿರುವ ಕೊಡ್ಲಿಪೇಟೆ ಹೋಬಳಿಗೆ ಸೇರಿದ ಬೆಸೂರು ಗ್ರಾ.ಪಂ. ವ್ಯಾಪ್ತಿಯ ಆಗಳಿ ಗ್ರಾಮದಲ್ಲಿರುವ ಪುರಾಣ ಮತ್ತು ಇತಿಹಾಸ ಪ್ರಸಿದ್ಧ ಉದ್ಭವ ಗವಿಸಿದ್ಧೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶನಿವಾರ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.

ಶನಿವಾರ ಗವಿ ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ೭ ಗಂಟೆಯಿAದ ಸಂಜೆ ೫ ಗಂಟೆ ವರೆಗೆ ಉದ್ಬವ ಶ್ರೀಗವಿ ಸಿದ್ದೇಶ್ವರ ಸ್ವಾಮಿಗೆ ಅರ್ಚಕ ಎಂ.ಎಸ್. ಈರಣ್ಣಯ್ಯ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನವನ್ನು ನೆರವೇರಿಸಲಾಯಿತು. ಸ್ಥಳೀಯರು, ಅಕ್ಕಪಕ್ಕದ ಭಕ್ತಾದಿಗಳು ಸೇರಿದಂತೆ ಪಕ್ಕದ ಹಾಸನ ಜಿಲ್ಲೆಯ ಅರಕಲಗೂಡು ಕಡೆಯಿಂದ ಭಕ್ತಾದಿಗಳು ಪಾಲ್ಗೊಂಡಿದ್ದರು. ಶಿವರಾತ್ರಿ ಪೂಜಾ ಮಹೋತ್ಸವದ ಅಂಗವಾಗಿ ದೇವಾಲಯ ಸಮಿತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಲಘು ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ದೇವಾಲಯ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತು. ಬೆಟ್ಟದ ಕೆಳ ಭಾಗದಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೆ ಪುಟ್ಟ ಜಾತ್ರೆಯನ್ನು ನಡೆಸಲಾಯಿತು. ಪೂಜಾ ಮಹೋತ್ಸವ ಅಂಗವಾಗಿ ನಡೆದ ಸರಳ ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶನಿವಾರಸಂತೆ ಆರ್‌ಎಫ್‌ಒ ಗಾನಶ್ರೀ, ದೇವಾಲಯ ಸಮಿತಿ ಕಾರ್ಯದರ್ಶಿ ಸುಬ್ಬಯ್ಯ ಮಾತನಾಡಿದರು. ಗ್ರಾಮದ ಹಿರಿಯ ಧರ್ಮಪ್ಪ, ಮತ್ತಿತರರು ಹಾಜರಿದ್ದರು. ಪೂಜಾ ಮಹೋತ್ಸವ ಅಂಗವಾಗಿ ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ದೇವಾಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭ ಜಿ.ಪಂ. ಮಾಜಿ ಸದಸ್ಯ ಪುಟ್ಟರಾಜು, ಮುಂತಾದವರು ಹಾಜರಿದ್ದರು.