ಚಂದ್ರಮೋಹನ್

ಕುಶಾಲನಗರ, ಮಾ. ೧೩ : ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷೀಣಗೊಂಡಿದ್ದು ವಾರಾಂತ್ಯದಲ್ಲಿ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯಲ್ಲಿ ಬಹುತೇಕ ಏರುಪೇರು ಉಂಟಾಗುವ ಸಾಧ್ಯತೆ ಖಚಿತವಾಗಿದೆ.

ಪಟ್ಟಣ ಹಾಗೂ ಗ್ರಾಮಗಳ ವ್ಯಾಪ್ತಿಯ ಸುಮಾರು ೩೨ ಸಾವಿರ ನಾಗರಿಕರಿಗೆ ಮತ್ತು ಅಗತ್ಯ ಕೇಂದ್ರಗಳಿಗೆ ನೀರನ್ನು ಸರಬರಾಜು ಮಾಡುವ ನಿಟ್ಟಿನಲ್ಲಿ ಬೈಚನಹಳ್ಳಿ ಪಂಪ್ ಹೌಸ್ ಬಳಿ ನದಿಗೆ ಅಡ್ಡಲಾಗಿ ಮರಳು ಬಂಡ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆ ಮೂಲಕ ನೀರು ಸಂಗ್ರಹಿಸಿ ಕುಡಿಯುವ ನೀರು ಸರಬರಾಜು ಮಾಡಲು ಕುಶಾಲನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಬೇಸಿಗೆಯ ಬಿಸಿಲಿನ ನಡುವೆ ನದಿ ಬಹುತೇಕ ಬತ್ತಿ ಹೋಗಿದ್ದು ನೀರಿನ ಹರಿವು ಕೆಲವೆಡೆ ಸಂಪೂರ್ಣ ಸ್ಥಗಿತಗೊಂಡಿರುವ ದೃಶ್ಯ ಗೋಚರಿಸಿದೆ.

ಈ ಸಂಬAಧ ಬೈಚನಹಳ್ಳಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಮರಳಿನ ಚೀಲಗಳ ಬಂಡ್‌ಗಳನ್ನು ಅಳವಡಿಸಿ ಕುಶಾಲನಗರ ಮತ್ತು ಮೈಸೂರು ಭಾಗದ ಪಿರಿಯಾಪಟ್ಟಣ ಕಡೆಗೆ ಪಂಪ್‌ಹೌಸ್‌ಗಳಿಗೆ ನೀರು ಸಂಗ್ರಹ ಮಾಡಲಾಗುತ್ತಿದೆ ಎಂದು ಕರ್ನಾಟಕ ಒಳಜರಂಡಿ ಮತ್ತು ನೀರು ಸರಬರಾಜು ಮಂಡಳಿಯ ಅಧಿಕಾರಿ ಆನಂದ್ ಅವರು ಶಕ್ತಿಗೆ ಮಾಹಿತಿ ನೀಡಿದ್ದಾರೆ. ವ್ಯಕ್ತಿಯೊಬ್ಬರಿಗೆ ದಿನನಿತ್ಯ ನೂರು ಲೀಟರ್ ಪ್ರಮಾಣದ ನೀರಿನ ಅವಶ್ಯಕತೆ ಇದ್ದು ಅದನ್ನು ಪೂರೈಸುವ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದೆ. ಪ್ರಸಕ್ತ ಮಳೆ ಬೀಳದಿದ್ದಲ್ಲಿ ನೀರಿಗೆ ಸಮಸ್ಯೆ ಉಂಟಾಗಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಬೈಚನಹಳ್ಳಿ ಪಂಪ್ ಹೌಸ್ ಬಳಿಯಿಂದ ಕುಶಾಲನಗರಕ್ಕೆ ೬೦ ಅಶ್ವ ಶಕ್ತಿಯ ೨ ಮೋಟರ್ ಪಂಪುಗಳು ದಿನವಿಡಿ ನೀರೆತ್ತಿ ಶುದ್ಧೀಕರಣ ಘಟಕಕ್ಕೆ ಹಾಯಿಸುತ್ತಿದೆ. ಅತ್ತ ಪಿರಿಯಾಪಟ್ಟಣ ನಗರಕ್ಕೆ ಪಂಪ್ ಹೌಸ್ ಮೂಲಕ ೭೫ ಅಶ್ವ ಶಕ್ತಿ ಎರಡು ಪಂಪುಗಳು ದಿನದ ೨೪ ಗಂಟೆಗಳ ಕಾಲ ನೀರು ಎತ್ತುತ್ತಿದ್ದು ಇನ್ನೊಂದೆಡೆ ಭಾರಿ ಅಶ್ವಶಕ್ತಿಯ ಎರಡು ಮೋಟಾರ್ ಪಂಪುಗಳು ಕೊಪ್ಪ ಸೇರಿದಂತೆ ೧೫ ಹಳ್ಳಿಗಳಿಗೆ ನಿತ್ಯ ಕುಡಿಯುವ

(ಮೊದಲ ಪುಟದಿಂದ) ನೀರು ಸರಬರಾಜು ಮಾಡಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಒಂದು ವಾರದೊಳಗೆ ಕಾವೇರಿ ನದಿ ತಟದ ಪಟ್ಟಣಗಳು ಗ್ರಾಮಗಳ ವ್ಯಾಪ್ತಿಯ ನಾಗರಿಕರು ಕುಡಿಯುವ ನೀರಿಗೆ ಹಾಹಾಕಾರ ಎದುರಿಸುವ ಸಾಧ್ಯತೆ ಅಧಿಕ ಎನ್ನಲಾಗಿದೆ.

ಕುಶಾಲನಗರ ಪಟ್ಟಣ ಮತ್ತು ಸಮೀಪದ ಮುಳ್ಳುಸೋಗೆ, ವ್ಯಾಪ್ತಿಯಲ್ಲಿ ಕಾವೇರಿ ನದಿಯ ಶೇಕಡ ೮೦ರಷ್ಟು ಪ್ರದೇಶಗಳಿಗೆ ನದಿ ನೀರು ಸರಬರಾಜು ಆಗುತ್ತಿದೆ.

ಕುಶಾಲನಗರ ಪಟ್ಟಣದ ಕೆಲವೆಡೆ ಬಡಾವಣೆಗಳು, ಮುಳ್ಳುಸೋಗೆ , ಗೊಂದಿಬಸವನಹಳ್ಳಿ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸುವ ವ್ಯವಸ್ಥೆಗೆ ಎಲ್ಲ ಸಿದ್ಧತೆಗಳನ್ನು ನಡೆಸಲಾಗುತ್ತದೆೆ ಎಂದು ಪುರಸಭೆ ಮುಖ್ಯ ಅಧಿಕಾರಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ.

ಗ್ರಾಮಾಂತರ ಪ್ರದೇಶಗಳಲ್ಲಿ ಶೇಕಡ ೨೦ರಷ್ಟು ಕೊಳವೆಬಾವಿ, ಜಲಜೀವನ್ ಮಿಷನ್ ಮತ್ತಿತರ ವ್ಯವಸ್ಥೆಗಳಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ಬಹುತೇಕ ಬತ್ತಿ ಹೋಗಿದ್ದು ನದಿಯಲ್ಲಿ ಅಲ್ಲಲ್ಲಿ ಪಾಚಿ ಕಟ್ಟಿದ ನೀರು ಹಾಗೂ ಬಂಡೆಗಳು ಮಾತ್ರ ಕಂಡುಬರುತ್ತವೆ.

ದುಬಾರೆ ಪ್ರವಾಸಿ ಕೇಂದ್ರದಲ್ಲಿ ಕೂಡ ಕಾವೇರಿ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರವಾಸಿಗರು ನದಿ ದಾಟಿ ದುಬಾರೆ ಆನೆ ಶಿಬಿರಕ್ಕೆ ತೆರಳುತ್ತಿರುವ ದೃಶ್ಯ ಕಂಡು ಬಂದಿದೆ.

ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಈ ತಿಂಗಳ ಅಂತ್ಯದೊಳಗೆ ಪೂರೈಕೆಗೆ ಬಾರಿ ತೊಂದರೆ ಉಂಟಾಗುವ ಸಂಭವ ಅಧಿಕವಾಗಿದೆ ಎಂದು ‘ಶಕ್ತಿ’ಯೊಂದಿಗೆ ಸ್ಥಳೀಯರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.