ನಾಪೋಕ್ಲು, ಮಾ. ೧೨: ಸಮೀಪದ ಹೊದ್ದೂರು ಗ್ರಾಮದ ಶ್ರೀ ಭಗವತಿ ದೇವಸ್ಥಾನ ಬ್ರಹ್ಮ ಕಲಶೋತ್ಸವದ ಅಂಗವಾಗಿ ಭಾನುವಾರ ನಾಗಪ್ರತಿಷ್ಠೆ ಜರುಗಿತು.

ಸುಮಾರು ರೂ. ೧.೫ ಕೋಟಿ ವೆಚ್ಚದಲ್ಲಿ ದೇವಾಲಯ ಪುನರ್ ನಿರ್ಮಾಣಗೊಂಡಿದ್ದು, ಬ್ರಹ್ಮಶ್ರೀ ಕೆ.ಯು. ಪದ್ಮನಾಭ ತಂತ್ರಿಗಳ ಹಾಗೂ ದೇವಸ್ಥಾನದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ, ಭಕ್ತರ ಸಮ್ಮುಖದಲ್ಲಿ ನಾಗಪ್ರತಿಷ್ಠೆ ಜರುಗಿತು. ಸಂಜೆ ದೀಪಾರಾಧನೆ, ಅಂಕುರ ಪೂಜೆ, ತ್ರಿಕಾಲ ಪೂಜೆ ನಡೆಯಿತು. ಮಂಗಳವಾರ ಸಂಜೆ ೪ ಗಂಟೆಗೆ ಜಲೋದ್ಧಾರ ಬಿಂಬಶುದ್ಧಿ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ಜರುಗಲಿವೆ. ಬುಧವಾರ ಬೆಳಿಗ್ಗೆ ೮ರಿಂದ ೧೦ ಗಂಟೆ ಒಳಗೆ ಪೀಠ ಪ್ರತಿಷ್ಠೆ, ಬಿಂಬ ಪ್ರತಿಷ್ಠೆ, ನಾಗ ಪ್ರತಿಷ್ಠೆ, ಬ್ರಹ್ಮ ಕಳಶ ಪೂಜೆ ಮತ್ತಿತರ ಕಾರ್ಯಕ್ರಮಗಳು ಜರುಗಲಿವೆ. ಗುರುವಾರ ಮಧ್ಯಾಹ್ನ ೩ ಗಂಟೆಗೆ ದೇವರ ನೃತ್ಯಬಲಿ ಜರುಗಲಿದೆ.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಚೌರಿರ ಕೆ. ಮೇದಪ್ಪ, ದೇವತಕ್ಕ ನೆರವಂಡ ಸಂಜಯ್ ಪೂಣಚ್ಚ, ಸಮಿತಿ ಸದಸ್ಯ ನಿವೃತ್ತ ಶಿಕ್ಷಕ ಚೌರಿರ ಉದಯ ಸೇರಿದಂತೆ ಸಮಿತಿಯ ನಿರ್ದೇಶಕ ಸದಸ್ಯರು, ಭಕ್ತರು ಹಾಜರಿದ್ದರು.