ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ ಮಹಾ ಶಿವರಾತ್ರಿ ಹಬ್ಬದ ಶ್ರದ್ಧಾಭಕ್ತಿಯಿಂದ ಹೋಮ ಹವನ ಕಾರ್ಯಗಳು ನಡೆದವು. ಹಬ್ಬದ ಅಂಗವಾಗಿ ಬೆಳಿಗ್ಗಿನಿಂದ ಮಹಾಗಣಪತಿ ಹೋಮ, ಶ್ರೀ ಮಹಾ ಮೃತ್ಯುಂಜಯ ಹೋಮ, ಶ್ರೀ, ರುದ್ರಹೋಮ, ರುದ್ರಾಭಿಷೇಕ, ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಕೇರಳದ ಶ್ರೀ ಹರಿ ಪಣಿಕರ್ ನೇತೃತ್ವದಲ್ಲಿ ದೇವಾಲಯದ ಆವರಣದಲ್ಲಿ ನಡೆದವು. ನಂತರ ಸಂಜೆ ವಿದ್ಯುತ್ ಅಲಂಕೃತ ವಾದ ಭವ್ಯ ಮಂಟಪದಲ್ಲಿ ಶ್ರೀ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಹುದುಗೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ನಂತರ ದೇವಾಲಯ ತಲುಪಿತು. ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು. ಆಗಮಿಸಿದ ಭಕ್ತರಿಗೆ ದೇವಾಲಯ ಸಮಿತಿಯ ವತಿಯಿಂದ ಅನ್ನಸಂತರ್ಪಣೆ ನಡೆಯಿತು.ಸಿದ್ದಾಪುರ : ನೆಲ್ಯಹುದಿಕೇರಿ ಶ್ರೀ ಮುತ್ತಪ್ಪ ಯುವಕಲಾಸಂಘದ ವತಿಯಿಂದ ೭ ನೇ ವರ್ಷದ ಶಿವರಾತ್ರಿ ಜಾಗರಣ ಮಹೋತ್ಸವ ನೆಲ್ಯಹುದಿಕೇರಿ ಶ್ರೀ ಮುತ್ತಪ್ಪ ಸಭಾಂಗಣದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಕಾರ್ಯಕ್ರಮದ ಅಂಗವಾಗಿ ಕಾವೇರಿ ನದಿಗೆ ಬಾಗಿನ ಅರ್ಪಿಸಿ, ಮೆರವಣಿಗೆ ನಡೆಸಲಾಯಿತು. ನಂತರ ಶ್ರೀ ಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಿ ಡಿ ಚೀಯಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಜಾಗರಣ ವೇದಿಕೆ ಮಾತೃ ಶಕ್ತಿಯ ರಾಜ್ಯ ಸಂಚಾಲಕ ಗಣರಾಜ್ ಭಟ್ ದಿನದ ಮಹತ್ವವನ್ನು ತಿಳಿಸಿದರು. ಜಾಗರಣದ ಅಂಗವಾಗಿ ರಾತ್ರಿಯಿಂದ ಬೆಳಗ್ಗಿನವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ತೊಗಲು ಗೊಂಬೆಯಾಟ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು. ಉತ್ಸವದ ಅಂಗವಾಗಿ ನೆರೆದಿದ್ದವರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ಅಲ್ಲದೆ ಶಿವರಾತ್ರಿ ಜಾಗರಣೆ ಮಾಡುವವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಮುತ್ತಪ್ಪ ಯುವಕಲಾ ಸಂಘದ ಅಧ್ಯಕ್ಷ ಪ್ರಣವ್, ಕಾರ್ಯದರ್ಶಿ ನಿತಿನ್, ಕೋಶಾಧಿಕಾರಿ ಶಿಂಜಿತ್, ಉಪಾಧ್ಯಕ್ಷ ಸಜಿತ್, ಸದಸ್ಯರುಗಳಾದ ಜಯನ್, ಮಂಜು ಸೇರಿದಂತೆ ಇನ್ನಿತರರು ಹಾಜರಿದ್ದರು. ಕೂಡಿಗೆ: ತೊರೆನೂರು ಗ್ರಾಮದಲ್ಲಿರುವ ಶ್ರೀ ಶನೇಶ್ಚರ ದೇವಾಲಯದ ಆವರಣದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ವಿವಿಧ ಹೋಮ ಹವನ ಕಾರ್ಯಗಳು ನಡೆದವು. ಹಬ್ಬದ ಅಂಗವಾಗಿ ಬೆಳಿಗ್ಗೆ ಮಹಾಗಣಪತಿ ಹೋಮ, ನವಗ್ರಹ ಪೂಜೆ, ಸ್ವಾಮಿಗೆ ವಿವಿಧ ಅಭಿಷೇಕ ಹಾಗೂ ಸಾಮೂಹಿಕ ಮೃತ್ಯುಂಜಯ ಹೋಮವು ಕುಶಾಲನಗರದ ಪುರುಪೋತ್ತಮನವರ ತಂಡದ ನೇತೃತ್ವದಲ್ಲಿ ದೇವಾಲಯದ ಆವರಣದಲ್ಲಿ ನಡೆಯಿತು.
ತೊರೆನೂರು, ಅಳುವಾರ ಸಿದ್ಧಲಿಂಗಪುರ, ಹೆಬ್ಬಾಲೆ, ಶಿರಂಗಾಲ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು. ಆಗಮಿಸಿದ ಭಕ್ತರಿಗೆ ದೇವಾಲಯ ಸಮಿತಿಯ ವತಿಯಿಂದ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಸಿ. ಎ. ಮಾದಪ್ಪ, ಕಾರ್ಯದರ್ಶಿ ಕೆ.ಎಸ್. ಕೃಷ್ಣ ಗೌಡ, ಸೇರಿದಂತೆ ಸಮಿತಿಯ ನಿರ್ದೇಶಕರು ಹಾಗೂ ಸದಸ್ಯರು ಭಾಗವಹಿಸಿದ್ದರು. ನಾಪೋಕ್ಲು : ಸಮೀಪದ ಪಾಲೂರು ಗ್ರಾಮದ ಮಹಾಲಿಂಗೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳನ್ನು ಹಮ್ಮಿಕೊಳ್ಳಲಾಯಿತು.
ಈಸ್ಟ್ ಕೊಳಕೇರಿ ಗ್ರಾಮದ ಬಿದ್ದಾಟಂಡ ವಾಡೆ ಸಮೀಪದಲ್ಲಿರುವ ಶ್ರೀ ಮಹಾದೇವ ಕೋಟ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ದೇವಾಲಯದಲ್ಲಿ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾಕಾರ್ಯಗಳು ನಡೆದವು. ಮಧ್ಯಾಹ್ನ ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಇಂದಿರಾನಗರದಲ್ಲಿ ಮಕ್ಕಳು ವೇಷಭೂಷಣ ಧರಿಸಿ ಮನೆಮನೆಗೆ ತೆರಳಿ ಕುಣಿದು ಸಂಭ್ರಮಿಸಿದರು. ಶಿವರಾತ್ರಿಯ ಅಂಗವಾಗಿ ನಡೆಯುತ್ತಿದ್ದ ವೇಷಧಾರಿಗಳ ಕುಣಿತ ಆಧುನಿಕತೆಗೆ ಸಿಲುಕಿ ನಶಿಸುತ್ತಿದೆ. ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಕುಶಾಲನಗರ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಕುಶಾಲನಗರ ಶಾಖೆಯಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆಯೋಂದಿಗೆ ದ್ಯಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಿ.ವೈ.ಎಸ್ಪಿ ಗಂಗಾಧರಪ್ಪ, ಕುಶಾಲನಗರ ಆಸ್ಪತ್ರೆಯ ಮಕ್ಕಳ ತಜ್ಞರಾದ ಶಿವಕುಮಾರ್, ಕೇಂದ್ರ ರಾಜಸ್ಥಾನದ ಅಬು ಪರ್ವತದಿಂದ ಆಗಮಿಸಿದ ಮೂಲತಃ ಚೆಟ್ಟಳ್ಳಿ ನಿವಾಸಿಗಳಾದ ಸುರೇಶ್, ಮೋಹನ್, ಸುರೇಶ್ ನೂಜಿಬೈಲ್ ಹಾಗೂ ಕುಶಾಲನಗರ ಕೇಂದ್ರದ ಸಂಚಾಲಕಿ ಲಲಿತಾಮಣಿ ಹಾಗೂ ಗ್ರಾಮಸ್ಥರು ಹಾಜರಿದ್ದರು. ಸೋಮವಾರಪೇಟೆ : ಇಲ್ಲಿಗೆ ಸಮೀಪದ ಗೌಡಳ್ಳಿ ಶ್ರೀನವದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ನವದುರ್ಗಾ ಪರಮೇಶ್ವರಿ ಕೃಪಾ ಪೋಷಿತ ಯಕ್ಷಗಾನ ಸಮಿತಿ ಗೌಡಳ್ಳಿ ಇವರ ವತಿಯಿಂದ ವೀರಗಾಸೆ ಮತ್ತು ಶ್ರೀರಾಮಚರಿತ್ರೆ ಕಥಾ ಭಾಗದ ಬಯಲಾಟ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ ವಹಿಸಿ ಮಾತನಾಡಿ, ಸ್ಥಾಪಕ ಪ್ರಧಾನ ಅರ್ಚಕರಾದ ದಿ.ಎ.ಟಿ.ವೆಂಕಟರಮಣಾಚಾರ್ಯ ಅವರು ಶ್ರೀನವದುರ್ಗಾ ಪರಮೇಶ್ವರಿ ದೇವಾಲಯವನ್ನು ಸರ್ವಧರ್ಮ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲು ಹೆಚ್ಚಿನ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ, ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದೆ ಎಂದರು.
ವಾರ್ಷಿಕ ಜಾತ್ರೋತ್ಸವ, ಕ್ರೀಡಾಕೂಟ, ಅನ್ನದಾನ ನಡೆಯುತ್ತಿದೆ. ಪವಿತ್ರ ಕ್ಷೇತ್ರದ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ ಯಕ್ಷಗಾನ ಕಲೆಯನ್ನು ಕೊಡಗಿನಲ್ಲೂ ಪಸರಿಸುವ ಪ್ರಯತ್ನ ಮುಂದುವರಿದಿದೆ. ಗ್ರಾಮೀಣ ಭಾಗದಿಂದ ಒಂದೂವರೆ ಸಾವಿರದಷ್ಟು ಜನರು ಯಕ್ಷಗಾನ ನೋಡಲು ಬಂದಿದ್ದಾರೆ. ಜನರಿಗಿರುವ ಕಲೆಯ ಮೇಲಿನ ಗೌರವವನ್ನು ಇದು ಸೂಚಿಸುತ್ತದೆ ಎಂದು ಹೇಳಿದರು. ಭಾಗವತರಾದ ಎ.ಟಿ.ವೆಂಕಟರಮಣಾಚಾರ್ಯ ಅವರ ಸ್ಮರಣಾರ್ಥ ಆರೋಗ್ಯ ಸುರಕ್ಷಾ ಅಧಿಕಾರಿ ಕೆ.ಪಿ.ಪಾರ್ವತಿ, ದಾನಿಗಳಾದ ಚನ್ನಾಪುರ ಪ್ರೇಮ ಅವರುಗಳನ್ನು ಸನ್ಮಾನಿಸಲಾಯಿತು. ದಾನಿಗಳನ್ನು ಇದೇ ಸಂದರ್ಭ ವೇದಿಕೆಯಲ್ಲಿ ಗೌರವಿಸಲಾಯಿತು.
ವೇದಿಕೆಯಲ್ಲಿ ಯಕ್ಷಗಾನ ಸಮಿತಿ ಅಧ್ಯಕ್ಷ ಬಿ.ಎಲ್.ಚಂದ್ರಶೇಖರ್, ಗೌರವಾಧ್ಯಕ್ಷ ಜಿ.ಎನ್.ವೀರಭದ್ರಪ್ಪ, ದೇವಾಲಯ ಸಮಿತಿ ಗೌರವಾಧ್ಯಕ್ಷ ಎಚ್.ಆರ್.ಮುತ್ತಣ್ಣ, ಸಮುದಾಯ ಭವನ ಸಮಿತಿ ಅಧ್ಯಕ್ಷ ಜಿ.ಎ.ಮಹೇಶ್, ಕ್ರೀಡಾಸಮಿತಿ ಅಧ್ಯಕ್ಷ ಎಸ್. ಬಿ. ಗುರುಪ್ರಸಾದ್, ವೀರಗಾಸೆ ಕುಣಿತದ ದಾನಿಗಳಾದ ಎಚ್.ಡಿ.ಸುಬ್ರಮಣಿ, ಜಿ. ಎಂ. ಜಯಪ್ಪ, ಅರ್ಚಕ ಎ. ವಿ. ವಿಶ್ವರೂಪಚಾರ್ಯ ಇದ್ದರು.
ಕಣಿವೆ : ಕುಶಾಲನಗರ ಪಟ್ಟಣದ ಏಕೈಕ ಶಿವ ದೇವಾಲಯವಾದ ಸೋಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ವಿಧಿಗಳು ದಿನವಿಡೀ ಏರ್ಪಟ್ಟವು. ಬೆಳಗ್ಗೆಯಿಂದಲೂ ದೇವಾಲಯದಲ್ಲಿ ಶ್ರೀ ಸೋಮೇಶ್ವರ ದೇವರಿಗೆ ವಿವಿಧ ಅಭಿಷೇಕಗಳು ನಡೆದವು. ಬಳಿಕ ಬಗೆ ಬಗೆಯ ಪುಷ್ಪಗಳಿಂದ ದೇವತಾ ಮೂರ್ತಿಯನ್ನು ಅಲಂಕರಿಸಿ ಪೂಜೆ ನೆರವೇರಿಸಲಾಯಿತು. ಕುಶಾಲನಗರ ಪಟ್ಟಣವೂ ಸೇರಿದಂತೆ ಸುತ್ತಲಿನ ಸಹಸ್ರ ಸಂಖ್ಯೆಯ ಭಕ್ತ ಸಮೂಹ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆಯಿತು. ದೇವಾಲಯಕ್ಕೆ ಇದೇ ಮೊದಲ ಬಾರಿಗೆ ಅಪಾರ ಭಕ್ತ ಸ್ತೋಮ ಧಾವಿಸಿತ್ತು. ಆಗಮಿಸಿದ ಭಕ್ತರಿಗೆ ದೇವಾಲಯದಿಂದ ಪಂಚಾಮೃತ, ಅವಲಕ್ಕಿ ಪ್ರಸಾದವನ್ನು ವಿತರಿಸಲಾಯಿತು. ಹಾಗೆಯೇ ರಾತ್ರಿಯಿಡೀ ಜಾಗರಣಾ ಪೂಜೆಗಳು ಏರ್ಪಟ್ಟವು. ದೇವಾಲಯದ ಅರ್ಚಕ ಸುಬ್ರಮಣ್ಯ ದೀಕ್ಷಿತ್ ತಂಡ ಪೂಜಾ ವಿಧಿ ನಡೆಸಿತು.
ಕಣಿವೆ : ಕಾವೇರಿ ನದಿ ದಂಡೆಯ ಗಿರಗೂರಿನಲ್ಲಿರುವ ಗಿರಿಜೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ವಿಧಿಗಳು ಏರ್ಪಟ್ಟವು. ಪಿರಿಯಾಪಟ್ಟಣದ ಪುಟ್ಟಸ್ವಾಮಿ ಶಾಸ್ತಿç ಹಾಗೂ ಗುಮ್ಮನಕೊಲ್ಲಿಯ ಬಸವೇಶ್ವರ ದೇವಾಲಯದ ಅರ್ಚಕ ಸೋಮಶೇಖರ್ ಅವರಿಂದ ಗಿತಿಜೇಶ್ವರ ದೇವತಾ ಮೂರ್ತಿಯನ್ನು ಹೂವುಗಳಿಂದ ಅಲಂಕರಿಸಿ ಮಹಾ ಮಂಗಳಾರತಿ ನಡೆಸಲಾಯಿತು. ಬಳಿಕ ಪೂಜೋತ್ಸವದಲ್ಲಿ ಪಾಲ್ಗೊಂಡ ಭಕ್ತ ಸಮೂಹಕ್ಕೆ ಅನ್ನ ಪ್ರಸಾದ ನೀಡಲಾಯಿತು. ದೇವಾಲಯದ ಧರ್ಮದರ್ಶಿ ಬಿ. ನಟರಾಜು, ಸಂಗಮೇಶ್, ಕೊಡಗು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಕುಶಾಲನಗರದ ವೀರಶೈವ ಸಮಾಜದ ಅಧ್ಯಕ್ಷ ಎಂ. ಎಸ್. ಶಿವಾನಂದ ಮತ್ತಿತರರು ಪಾಲ್ಗೊಂಡಿದ್ದರು.ಕಣಿವೆ : ಕಾವೇರಿ ನದಿ ದಂಡೆಯ ಗಿರಗೂರಿನಲ್ಲಿರುವ ಗಿರಿಜೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ವಿಧಿಗಳು ಏರ್ಪಟ್ಟವು. ಪಿರಿಯಾಪಟ್ಟಣದ ಪುಟ್ಟಸ್ವಾಮಿ ಶಾಸ್ತಿç ಹಾಗೂ ಗುಮ್ಮನಕೊಲ್ಲಿಯ ಬಸವೇಶ್ವರ ದೇವಾಲಯದ ಅರ್ಚಕ ಸೋಮಶೇಖರ್ ಅವರಿಂದ ಗಿತಿಜೇಶ್ವರ ದೇವತಾ ಮೂರ್ತಿಯನ್ನು ಹೂವುಗಳಿಂದ ಅಲಂಕರಿಸಿ ಮಹಾ ಮಂಗಳಾರತಿ ನಡೆಸಲಾಯಿತು. ಬಳಿಕ ಪೂಜೋತ್ಸವದಲ್ಲಿ ಪಾಲ್ಗೊಂಡ ಭಕ್ತ ಸಮೂಹಕ್ಕೆ ಅನ್ನ ಪ್ರಸಾದ ನೀಡಲಾಯಿತು. ದೇವಾಲಯದ ಧರ್ಮದರ್ಶಿ ಬಿ. ನಟರಾಜು, ಸಂಗಮೇಶ್, ಕೊಡಗು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಕುಶಾಲನಗರದ ವೀರಶೈವ ಸಮಾಜದ ಅಧ್ಯಕ್ಷ ಎಂ. ಎಸ್. ಶಿವಾನಂದ ಮತ್ತಿತರರು ಪಾಲ್ಗೊಂಡಿದ್ದರು.
ಮಡಿಕೇರಿ: ನಗರದ ದಾಸವಾಳ ರಸ್ತೆಯ ಪ್ರಜಾಪಿತ ಬ್ರಹ್ಮಕುಮಾರಿ ಸಮಾಜದಲ್ಲಿ ಅಮೃತೇಶ್ವರ ಹೆಸರಿನ ಶಿವಲಿಂಗ ದರ್ಶನಕ್ಕೆ ವ್ಯವಸ್ಥೆ ಮಾಡ ಲಾಗಿತ್ತು. ಸಮಾಜದ ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಗಾಯತ್ರಿ ಅವರು ಇದರ ನೇತೃತ್ವ ವಹಿಸಿದ್ದರು. ರಾತ್ರಿಯವರೆಗೂ ಇಲ್ಲಿ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.