ಗೋಣಿಕೊಪ್ಪಲು, ಮಾ. ೧೧: ಕೊಡಗಿನ ಪ್ರವಾಸಿ ತಾಣಕ್ಕೆ ಮತ್ತೊಂದು ಗರಿ ಸೇರ್ಪಡೆಗೊಂಡಿದ್ದು, ಸಾರ್ವಜನಿಕರ ಬಹು ಬೇಡಿಕೆಯಾಗಿದ್ದ ದಕ್ಷಿಣ ಕೊಡಗಿನ ಮತ್ತಿಗೋಡು ಸಾಕಾನೆ ಶಿಬಿರ ರೂ. ೧ ಕೋಟಿ ವೆಚ್ಚದಲ್ಲಿ ಅರಣ್ಯ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಲಾಗಿದ್ದು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಲೋಕಾರ್ಪಣೆ ಮಾಡಿದರು.

ಸಾಕಾನೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಎ.ಎಸ್.ಪೊನ್ನಣ್ಣ, ಉತ್ತಮವಾದ ಅವಕಾಶವನ್ನು ಅರಣ್ಯ ಇಲಾಖೆಯು ಪ್ರವಾಸಿಗರಿಗೆ, ನಾಗರಿಕರಿಗೆ ಒದಗಿಸಿದೆ. ಪ್ರಾಣಿಗಳ ಹಾಗೂ ಮನುಷ್ಯನ ನಡುವೆ ಇರುವ ಅಂತರವನ್ನು ಕಾಪಾಡಲೇ ಬೇಕಾಗಿದೆ. ಪ್ರಾಣಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದAತೆ ಜವಾಬ್ದಾರಿ ಯುತವಾಗಿ ನಡೆದು ಕೊಳ್ಳಬೇಕು, ಶಿಬಿರದ ಆವರಣದಲ್ಲಿ ಪ್ರಾಣಿಗಳಿಗೆ ಗೌರವ ಸಿಗಬೇಕು. ಪ್ರವಾಸಿಗರು ಇಲ್ಲಿನ ನಿಯಮ ತಪ್ಪದೆ ಪಾಲಿಸಬೇಕು ಎಂದು ಕರೆ ನೀಡಿದರು.

ನಾಗರಹೊಳೆ ವನ್ಯ ಜೀವಿ ವಿಭಾಗದ ನಿರ್ದೇಶಕ ಹರ್ಷಕುಮಾರ್ ಪ್ರಸ್ತುತ ಅರಣ್ಯ ಇಲಾಖೆಯಲ್ಲಿ ಬಳಸುವ ಅತ್ಯಾಧುನಿಕ ಮಾದರಿಯ ಉಪಕರಣಗಳಾದ ಕ್ಯಾಮರಾ, ವಾಕಿಟಾಕಿ, ಡ್ರೋನ್, ಸೇರಿದಂತೆ ಇನ್ನಿತರ ಉಪಕರಣಗಳನ್ನು ಶಾಸಕರಾದ ಪೊನ್ನಣ್ಣ ಅವರಿಗೆ ಪರಿಚಯಿಸಿದರು. ಶಿಬಿರದಲ್ಲಿರುವ ೧೭ ಸಾಕಾನೆಗಳ ವೀಕ್ಷಣೆ ಮಾಡಿದರು. ಅಲ್ಲದೆ ಆನೆಗಳಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿದರು.

ಕೊಡಗು ಮೈಸೂರು ಮುಖ್ಯ ರಸ್ತೆಯ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ, ಗಡಿಭಾಗ ಆನೆಚೌಕೂರುವಿನ ಅನತಿ ದೂರದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಆನೆಗಳನ್ನು ಅತ್ಯಂತ ಸಮೀಪದಿಂದ ವೀಕ್ಷಣೆ ಮಾಡುವ ಸೌಲಭ್ಯವನ್ನು ಒದಗಿಸಲಾಗಿದೆ. ಈ ಸಾಕಾನೆ ಶಿಬಿರವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಅರಣ್ಯ ಇಲಾಖೆಯು ಕಳೆದ ೧ ವರ್ಷದಿಂದ ಕಾರ್ಯೋನ್ಮುಖ ವಾಗಿತ್ತು. ಈ ವಿಶೇಷ ಯೋಜನೆಗೆ ಸರ್ಕಾರದಿಂದ ೧ ಕೋಟಿ ಅನುದಾನವು ಬಿಡುಗಡೆಯಾಗಿತ್ತು. ವಿಸ್ತಾರವಾದ ಪ್ರದೇಶದಲ್ಲಿ ಕಾಮಗಾರಿಗೆ ಚಾಲನೆ ನೀಡ ಲಾಗಿತ್ತು. ಇದೀಗ ಗುಣ ಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ತಿತಿಮತಿ- ಆನೆಚೌಕೂರು ಮುಖ್ಯ ರಸ್ತೆಯ ಬದಿಯಲ್ಲಿರುವ ಸಾಕಾನೆ ಶಿಬಿರಕ್ಕೆ ಸಾರ್ವಜನಿಕರು ತಮ್ಮ ವಾಹನದ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಮೂಲಕ ತೆರಳಲು ನೂತನವಾದ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು ಪ್ರವಾಸಿಗರ ಸುರಕ್ಷತೆಗೆ ವಿಶೇಷ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆನೆ ಶಿಬಿರದ ಆವರಣದಲ್ಲಿ ಮಾಹಿತಿ ಕೆಂದ್ರವನ್ನು ಪ್ರಾರಂಭಿಸಲಾಗಿದ್ದು ಸಾರ್ವಜನಿ ಕರಿಗೆ ವನ್ಯ ಪ್ರಾಣಿಗಳ ಬಗ್ಗೆ ಅಗತ್ಯ ಮಾಹಿತಿ ಕೇಂದ್ರದಲ್ಲಿ ದೊರೆಯಲಿದೆ. ತಾಣಕ್ಕೆ ಆಗಮಿಸಲು ಗುಣಮಟ್ಟದ ಇಂಟರ್‌ಲಾಕ್‌ಗಳನ್ನು ಅಳವ ಡಿಸಲಾಗಿದ್ದು ಪ್ರವಾಸಿಗರು ನಡೆದುಕೊಂಡು ಶಿಬಿರದತ್ತ ತೆರಳಲು ಅನುಕೂಲ ಕಲ್ಪಿಸಿದೆ.

ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ದ.ಕೊಡಗಿನ ಮತ್ತಿಗೋಡುವಿನಲ್ಲಿ ಪ್ರವಾಸಿಗರಿಗೆ ಆನೆಗಳ ವೀಕ್ಷಣೆಗೆ ಮುಕ್ತ ಅವಕಾಶ ಒದಗಿಸಲಾಗಿದೆ. ಇದರಿಂದ ಸಾಕಾನೆ ಶಿಬಿರವು ಅಭಿವೃದ್ಧಿಯಾಗುವ ಆಶಾ ಭಾವನೆ ವ್ಯಕ್ತವಾಗಿದೆ. ಕಳೆದ ಹಲವಾರು ವರ್ಷಗಳಿಂದ ಸಾಕಾನೆ ಶಿಬಿರವು ಕಾರ್ಯ ನಿರ್ವಹಿಸುತ್ತಿದ್ದು ಅಭಿವೃದ್ಧಿಯನ್ನು ಕಂಡಿರಲಿಲ್ಲ. ಈ ಹಿಂದೆ ಅರಣ್ಯ ಇಲಾಖೆಯ ಬೆಂಗಳೂರಿನ ಹಿರಿಯ ಅಧಿಕಾರಿಗಳು ಶಿಬಿರಕ್ಕೆ ಆಗಮಿಸಿದ ಸಂದರ್ಭ ಇಲ್ಲಿಯ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದರು.

ಈ ಮುನ್ನ ಪ್ರವಾಸಿಗರು ರಸ್ತೆ ಬದಿಯಲ್ಲಿ ನಿಂತು ಸಾಕಾನೆಗಳನ್ನು ವೀಕ್ಷಣೆ ಮಾಡುತ್ತಿದ್ದರು. ಆನೆ ಶಿಬಿರಕ್ಕೆ ಪ್ರವೇಶಿಸಲು ಪ್ರವಾಸಿಗರಿಂದ ಶುಲ್ಕ ಪಾವತಿ ನಿಗದಿಗೊಳಿಸಲಾಗಿದೆ.

ಮತ್ತಿಗೋಡು ಸಾಕಾನೆ ಶಿಬಿರ ಉದ್ಘಾಟನೆ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ, ಡಿಸಿಸಿ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಡಿಸಿಸಿ ಸದಸ್ಯರಾದ ವಿನಯ್ ಕುಮಾರ್, ಅಬ್ದುಲ್ ರೆಹಮಾನ್ ಬಾಪು, ಅರವಿಂದ್ ಕುಟ್ಟಪ್ಪ, ಮಾಜಿ ಜಿ.ಪಂ. ಸದಸ್ಯರುಗಳಾದ ಪಿ.ಆರ್.ಪಂಕಜ, ಬಾನಂಡ ಪ್ರಥ್ಯು, ತಿತಿಮತಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್, ಮಾಯಮುಡಿ ಗ್ರಾ.ಪಂ. ಅಧ್ಯಕ್ಷ ಟಾಟೂ ಮೊಣ್ಣಪ್ಪ, ತಿತಿಮತಿ ಗ್ರಾ.ಪಂ. ಅಧ್ಯಕ್ಷೆ ರಾಣಿ, ಎಸಿಎಫ್ ಡಿ.ಎಸ್. ದಯಾನಂದ್, ಕೆ.ಪಿ. ಗೋಪಾಲ್, ಪಿ. ಅನುಷ, ವಲಯ ಅರಣ್ಯ ಅಧಿಕಾರಿಗಳಾದ ಸುಬ್ರಮಣ್ಯ, ಜಿಶಾನ್, ರಾಜ್‌ಶೇಖರ್ ಸೇರಿದಂತೆ ಆನೆ ಮಾವುತರು, ಕಾವಾಡಿಗರು ಹಾಗೂ ಮತ್ತಿಗೋಡು ಅರಣ್ಯ ಸಿಬ್ಬಂದಿಗಳು ಹಾಜರಿದ್ದರು.

-ಹೆಚ್.ಕೆ. ಜಗದೀಶ್