ವೀರಾಜಪೇಟೆ, ಮಾ. ೧೧: ಕೊಡಗಿನಲ್ಲಿ ಇತ್ತೀಚೆಗೆ ಕಾನೂನು ದುರ್ಬಳಕೆ ಮಾಡಿಕೊಂಡು ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳ, ಕಾಫಿ ಬೆಳೆಗಾರರ ವಿರುದ್ಧ ಜಾತಿ ನಿಂದನೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದು ಹಾಗೂ ಕೊಡಗಿನ ಜನರ ಸಾಮರಸ್ಯವನ್ನು ಕೆಡಿಸಲು ಕಾಂಗ್ರೆಸ್ ಸರಕಾರ ಷಡ್ಯಂತರ ನಡೆಸುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ವೀರಾಜಪೇಟೆಯ ಪೊಲೀಸ್ ಉಪ ಅಧೀಕ್ಷಕರ ಕಚೇರಿ ಮುಂಭಾಗದಲ್ಲಿ ಕಾನೂನು ದುರ್ಬಳಕೆ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಹೋರಾಟ ಸಮಿತಿಯವರು ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳಕ್ಕೆ ಜಾತಿ ನಿಂದನೆಯ ಲೇಪವನ್ನು ಮೆತ್ತಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕಾಫಿ ಬೆಳೆಗಾರರ ಮೇಲೂ ಕೂಡ ಇದೇ ರೀತಿಯ ಪ್ರಕರಣಗಳು ದಾಖಲಾಗುತ್ತಿವೆ. ಯಾವುದೇ ಘಟನೆಯನ್ನು ಸಂಪೂರ್ಣವಾಗಿ ಪರಿಶೀಲಿಸದೆ ಸತ್ಯತೆಯನ್ನು ತಿಳಿಯದೆ ನೇರವಾಗಿ ಜಾತಿ ನಿಂದನೆ ಮೊಕದ್ದಮೆ ಹೂಡಲು ಕಾಂಗ್ರೆಸ್ ಪಕ್ಷದ ಪ್ರಮುಖರು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ಸಂದರ್ಭ ಪ್ರತಿಭಟನಾಕಾರರು ಶಾಸಕ ಎ.ಎಸ್ ಪೊನ್ನಣ್ಣ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಗೆ ಹೋರಾಟ ಸಮಿತಿ ಸದಸ್ಯರುಗಳು ಆಗಮಿಸುತ್ತಿದ್ದಂತೆ ಪೊಲೀಸ್ ಠಾಣೆ ಎದುರು ಬ್ಯಾರಿಕೇಡ್ ಹಾಕಿ ತಡೆಯಲಾಯಿತು. ಪ್ರತಿಭಟನಾಕಾರರು ರಸ್ತೆ ಬದಿಯಲ್ಲೇ ನಿಂತು ಪ್ರತಿಭಟನೆ ನಡೆಸಿ ಸರಕಾರ ಮತ್ತು ಶಾಸಕರ ವಿರುದ್ಧ ಘೋಷಣೆ ಕೂಗಿ ಬ್ಯಾರಿಕೇಡ್ ತೆರವುಗೊಳಿಸುವಂತೆ ಒತ್ತಾಯಿಸಿದರು. ಈ ವೇಳೆ ಪೊಲೀಸರು ತೆರವುಗೊಳಿಸದ ಹಿನ್ನೆಲೆ ಕೆರಳಿದ ಪ್ರತಿಭಟನಾಕಾರರು ಇದೇನು ಪಾಕಿಸ್ತಾನವೇ, ನಾವು ಉಗ್ರವಾದಿಗಳಲ್ಲ, ಕೇವಲ ಪ್ರತಿಭಟನೆ ನಡೆಸಿ ನಮ್ಮ ಮನವಿ ಸಲ್ಲಿಸುತ್ತಿದ್ದೇವೆ. ಪೊಲೀಸರು ಕಾಂಗ್ರೆಸ್ ಸರಕಾರದ ಏಜೆಂಟರAತೆ ಕೆಲಸ ಮಾಡಬಾರದು. ರಕ್ಷಣೆ ಕೊಡುವವರು ಘರ್ಷಣೆಗೆ ಅವಕಾಶ ಕೊಡಬಾರದು. ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸ್ ಠಾಣೆಗೆ ಪ್ರತಿಭಟನಾಕಾರರು ಬರದಂತೆ ಬ್ಯಾರಿಕೇಡ್ ಹಾಕಲಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಡಿವೈಎಸ್‌ಪಿ ಮೋಹನ್ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಶಿವರುದ್ರ ಅವರು ಬ್ಯಾರಿಕೇಡ್ ತೆರವುಗೊಳಿಸಿದರು. ಕೂಡಲೇ ಪ್ರತಿಭಟನಾನಿರತರು ಡಿವೈಎಸ್‌ಪಿ ಕಚೇರಿ ಮುಂದೆ ತೆರಳಿ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಅಭಿಜಿತ್, ಈಗಿನ ಸರಕಾರ ದಲಿತರ ಉದ್ಧಾರ ಮಾಡುತ್ತೇವೆ ಎಂದು ಹೇಳಿ ದಲಿತರನ್ನು ಶೋಷಣೆ ಮಾಡುತ್ತಿದೆ. ಕಾಂಗ್ರೆಸ್ ಸರಕಾರದಲ್ಲಿ ಕಾರ್ಮಿಕರ ವಿಭಾಗ ಸೇರಿದಂತೆ ಬೇರೆ ಬೇರೆ ವಿಭಾಗಗಳನ್ನು ಮಾಡುವುದರೊಂದಿಗೆ ಅಟ್ರಾಸಿಟಿ ವಿಭಾಗವೊಂದನ್ನು ಮಾಡಿಕೊಂಡು ಪಾಪದವರ ಮೇಲೆ ಅಟ್ರಾಸಿಟಿ ಕೇಸ್ ದಾಖಲು ಮಾಡಲಾಗುತ್ತಿದೆ. ಅಮಾಯಕ ವ್ಯಕ್ತಿಯೊಬ್ಬರ ಮೇಲೆ ರಾಜಕೀಯ ಕುಮ್ಮಕ್ಕಿನಲ್ಲಿ ಜಾತಿನಿಂದನೆ ಪ್ರಕರಣ ದಾಖಲಿಸಲು ಕಾಂಗ್ರೆಸ್ ಸರಕಾರ ಕಾರಣವಾಗಿದೆ, ಶಾಸಕರು ರಾಜೀನಾಮೆ ಕೊಡಲಿ ಎಂದರು.

ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ರವಿ ಮೊಗೇರ ಮಾತನಾಡಿ, ರಾಜಕೀಯ ಕಾರಣಕ್ಕೆ ದಲಿತರನ್ನು ಬಲಿಪಶು ಮಾಡಲಾಗುತ್ತಿದೆ. ಕಾನೂನಿನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸುಳ್ಳು ಮೊಕದ್ದಮೆ ದಾಖಲಿಸಿರುವುದನ್ನು ಕೂಡಲೇ ಕೈ ಬಿಡಬೇಕು ಎಂದರು. ಬಸ್ ಮಾಲೀಕರ ಸಂಘದ ಅಧ್ಯಕ್ಷ ಸುರೇಶ್, ಎಸ್‌ಟಿ ಮೋರ್ಚಾದ ಅಧ್ಯಕ್ಷ ಪರಮೇಶ್ವರ ಮಾತನಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ ಇತ್ತೀಚೆಗೆ ಕೊಡಗಿನಲ್ಲಿ ಹಲವರ ಮೇಲೆ ಜಾತಿನಿಂದನೆ ಪ್ರಕರಣ ದಾಖಲು ಮಾಡಲಾಗುತ್ತಿದೆ. ಕಾಂಗ್ರೆಸ್ ಸರಕಾರ ಕೋಮು ಸಂಘರ್ಷ ಸೇರಿದಂತೆ ಜಾತಿ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ. ಕೂಡಲೇ ಅಮಾಯಕ ವ್ಯಕ್ತಿಯ ಮೇಲೆ ದಾಖಲು ಮಾಡಿರುವ ಪ್ರಕರಣವನ್ನು ಕೈ ಬಿಡಬೇಕು ಎಂದರು.

ರಾಜ್ಯ ಎಸ್ ಸಿ ಮೋರ್ಚಾ ಕಾರ್ಯದರ್ಶಿ ಪರಮಾನಂದ್ ಮಾತನಾಡಿ ಸಣ್ಣ ವಿಚಾರಕ್ಕೆ ನಡೆದ ಘಟನೆಗೆ ರಾಜಕೀಯ ಬೆರೆಸಿ ದಲಿತರ ಕಾಯ್ದೆಗಳನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆ. ದಲಿತರಿಗೆ ದೌರ್ಜನ್ಯವಾದರೆ ಈ ಕಾಯ್ದೆಗಳನ್ನು ಬಳಸಿಕೊಳ್ಳಬೇಕಿದೆ. ಆದರೆ ಸುಮ್ಮನೆ ದಲಿತರ ಹೆಸರಿನಲ್ಲಿ ಮೂರನೇಯ ವ್ಯಕ್ತಿಯೊಬ್ಬ ಹಿಂದೂ ಕಾರ್ಯಕರ್ತನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ಇದರ ನೈಜಾಂಶ ತಿಳಿದು ಅಮಾಯಕ ವ್ಯಕ್ತಿಯ ಪ್ರಕರಣ ಕೈಬಿಟ್ಟು ಪ್ರಕರಣ ನೀಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು.

ಬಳಿಕ ನೈಜಾಂಶ ಇಲ್ಲದೆ ದಾಖಲಾದ ಪ್ರಕರಣಗಳನ್ನು ಕೈ ಬಿಡುವಂತೆ ಒತ್ತಾಯಿಸಿ ಡಿವೈಎಸ್‌ಪಿ ಮೋಹನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವವನ್ನು ವೀರಾಜಪೇಟೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ವಹಿಸಿದ್ದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್, ಕುಟ್ಟಂಡ ಅಜಿತ್ ಕರುಂಬಯ್ಯ, ಪಕ್ಷದ ರಾಜ್ಯ ಶಿಸ್ತು ಸಮಿತಿ ಸದಸ್ಯೆ ರೀನಾ ಪ್ರಕಾಶ್, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ವೀರಾಜಪೇಟೆ ಪುರಸಭೆ ಸದಸ್ಯರುಗಳಾದ ಅನಿತಾ, ಸುನೀತಾ ಜೂನಾ, ಆಶಾ ಸುಬ್ಬಯ್ಯ, ಮಹದೇವ್, ಹಿಂದೂ ಸಂಘಟನೆಗಳ ಪ್ರಮುಖರಾದ ಗಣೇಶ್ ಗೌಡ, ಟಿ.ಪಿ. ಕೃಷ್ಣ, ಚೇತನ್ ಶಿವಪ್ಪ, ವಿವೇಕ್ ರೈ ಬಿಜೆಪಿಯ ಪಟ್ರಪಂಡ ರಘು ನಾಣಯ್ಯ, ಸಚಿನ್ ಕುಟ್ಟಯ್ಯ, ಯಮುನಾ ಚಂಗಪ್ಪ, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.