ವೀರಾಜಪೇಟೆ, ಮಾ. ೧೦: ಬೊಟ್ಟಿಯತ್ನಾಡ್ ಶ್ರೀ ಈಶ್ವರ ದೇವರ ವಾರ್ಷಿಕ ಉತ್ಸವಕ್ಕೆ ಅಂತಿಮ ತೆರೆ ಎಳೆಯಲಾಯಿತು. ಕುಂದ, ಮುಗುಟಗೇರಿ, ಹಳ್ಳಿಗಟ್ಟು, ಹುದೂರು, ಅರ್ವತೋಕ್ಲು ಹಾಗೂ ಈಚೂರು ಸೇರಿದಂತೆ ಸುತ್ತಮುತ್ತಲ ಆರು ಗ್ರಾಮಗಳಿಗೆ ಸೇರಿದ ನಾಡ್ ದೇವಸ್ಥಾನ ಎಂದು ಕರೆಯಲ್ಪಡುವ ಶ್ರೀ ಈಶ್ವರ ದೇವಸ್ಥಾನದಲ್ಲಿ ಫೆ. ೨೬ ರಂದು ಕೊಡಿಮರ ನಿಲ್ಲಿಸುವ ಮೂಲಕ ೯ ದಿನಗಳ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ತಾ. ೫ರಂದು ದೇವರ ಅವಭೃತ ಸ್ನಾನದ ಮೂಲಕ ೯ ದಿನಗಳ ಹಬ್ಬಕ್ಕೆ ತೆರೆ ಎಳೆಯಲಾಯಿತು.
ತಾ. ೪ರಂದು ಕುಂದ, ಮುಗುಟ ಗೇರಿ ಗ್ರಾಮದಲ್ಲಿರುವ ಶ್ರೀ ಈಶ್ವರ ದೇವಸ್ಥಾನ ಸಮೀಪದ ಅಂಬಲದಲ್ಲಿ ಆರು ಊರುಗಳ ತಕ್ಕಮುಖ್ಯಸ್ಥರು ಸೇರಿದಂತೆ ಶ್ರೀ ಈಶ್ವರ ದೇವಸ್ಥಾನದ ದೇವತಕ್ಕರು, ಭಂಡಾರ ತಕ್ಕರು ಆಯಾಯ ಊರುಗಳಿಂದ ತರ ಲಾಗಿದ್ದ ದವಸಧಾನ್ಯಗಳನ್ನು ಎತ್ತು ಪೋರಾಟದ ಮೂಲಕ ದೇವಸ್ಥಾನಕ್ಕೆ ತಂದರು. ನಂತರ ದೇವಸ್ಥಾನದ ಮುಖ್ಯ ಅರ್ಚಕರು ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಆರು ಊರುಗಳಿಂದ ತರಲಾಗಿದ್ದ ದವಸಧಾನ್ಯಗಳನ್ನು ದೇವಸ್ಥಾನಕ್ಕೆ ಪಡೆದುಕೊಂಡರು. ನಂತರ ನೆರ್ಪು ಪ್ರಯುಕ್ತ ವಿಶೇಷ ಪೂಜೆ, ಅಲಂಕಾರ ಪೂಜೆ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ನಡೆದವು.