ನಾಪೋಕ್ಲು, ಮಾ. ೯: ಇಲ್ಲಿಗೆ ಸಮೀಪದ ಮರಂದೋಡ-ಯವಕಪಾಡಿ ಗ್ರಾಮಗಳ ಅಂಚಿನಲ್ಲಿ ಶುಕ್ರವಾರ ರಾತ್ರಿ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿನಕಾಡು ಸಮೀಪದ ತಡಿಯಂಡಮೊಳ್ ಬೆಟ್ಟದ ಸಾಲಿನ ಕರಡಿಮೊಳೆ ಎಂಬಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ವಿಷಯ ಅರಿತ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ . ಇಂದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ನೂರಾರು ಎಕರೆ ಕಾಡು ಸುಟ್ಟು ಹೋಗಿದೆ. ಬಿಸಿಲಿನ ಝಳ ಹೆಚ್ಚಿದ್ದು ಬೆಂಕಿ ನಂದಿಸುವುದು ಕಷ್ಟಕರವಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ದೇವಯ್ಯ ಅವರು ತಿಳಿಸಿದ್ದು ಸ್ಥಳಕ್ಕೆ ಅಗ್ನಿಶಾಮಕ ವಾಹನಗಳನ್ನು ತರಲು ಅಸಾಧ್ಯವಾಗಿ ಬೆಂಕಿ ನಂದಿಸುವ ಕಾರ್ಯ ಕಷ್ಟಕರವಾಗಿದೆ.

ಗ್ರಾಮ ಪಂಚಾಯಿತಿ ಸದಸ್ಯರಾದ ಹರೀಶ್ ಮೊಣ್ಣಪ್ಪ, ಲೀಲಾವತಿ,

ಕೆ.ಆರ್. ಅರಣ್ಯಾಧಿಕಾರಿ ದೇವಯ್ಯ, ಉಪ ವಲಯ ಅರಣ್ಯಾಧಿಕಾರಿ ಅನಿಲ್ ಸಿ.ಟಿ., ಗಸ್ತು ವನಪಾಲಕ ಮಾಲತೇಶ ಬಡಿಗೇರ್, ಕ್ಯಾಂಪ್ ಸಿಬ್ಬಂದಿ ಸುರೇಶ್, ಬಿ.ಅರ್. ಭರತ್, ಬಿ. ಜಿ. ಲತೇಶ್, ವಿಕಾಸ್, ಮಹೇಶ್ ಪೂಜಾರಿ, ಗ್ರಾಮಸ್ಥರಾದ ನಾಚಪ್ಪ, ಕೃತಿಕ ಮತ್ತು ವರುಣ ಹಾಜರಿದ್ದರು.