ಮಡಿಕೇರಿ, ಮಾ. ೧೦: ಕೊಡಗು -ಮೈಸೂರು ಲೋಕಸಭಾ ಸಂಸದ ಪ್ರತಾಪ್ ಸಿಂಹ ಮೂರನೇ ಬಾರಿಗೆ ಈ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ದೊರಕುವ ಸಾಧ್ಯತೆ ಬಗ್ಗೆ ಅನುಮಾನಗಳು ಕಂಡುಬAದಿದೆ. ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಈ ಕ್ಷೇತ್ರದಿಂದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ತೀವ್ರ ಕಸರತ್ತಿನಲ್ಲಿ ನಿರತವಾಗಿದ್ದು ಹೀಗಾಗಿ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ರಾಜಕೀಯದಲ್ಲಿ ಅನೇಕ ಅಚ್ಚರಿಯ ಬೆಳವಣಿಗೆಗಳು ಕಂಡುಬAದಿದೆ.
೨೦೧೪, ೨೦೧೯ರಲ್ಲಿ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ದೆಯಾಗಿದ್ದ ಪ್ರತಾಪ್ ಸಿಂಹ ಈ ಬಾರಿ ಮೂರನೇ ಬಾರಿಗೆ ಇದೇ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದರು. ಅಂತೆಯೇ ಕಳೆದ ೧ ತಿಂಗಳಿನಿAದ ಕ್ಷೇತ್ರ ವ್ಯಾಪಿ ಸಂಚರಿಸಿ ಪ್ರಚಾರವನ್ನೂ ಪ್ರಾರಂಭಿಸಿದ್ದರು.
ಆದರೆ ಲೋಕಸಭೆಯ ಚುನಾವಣೆಗೆ ದಿನಾಂಕ ಘೋಷಣೆಗೆ ಕೆಲವೇ ದಿನಗಳಿರುವಂತೆಯೇ ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಹೈಕಮಾಂಡ್ ಈ ಬಾರಿ ಸ್ಪರ್ಧೆಗೆ ಅವಕಾಶ ನೀಡುವದು ಸಂಶಯ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಭಾನುವಾರ ನಿಗದಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಚುನಾವಣಾ ಸಮಿತಿ ಸಭೆಯನ್ನು ಕೂಡ ಮುಂದೂಡಲಾಗಿದ್ದು, ಪ್ರಧಾನಿ ಮೋದಿ ಅವರೇ ಪ್ರತಾಪ್ ಸಿಂಹ ಸ್ಪರ್ಧೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಪ್ರತಾಪ್ ಸಿಂಹ ಬೇಡ ಎನ್ನಲು ಕಾರಣಗಳೇನು?
ಸಂಸದರಾಗಿರುವ ಪ್ರತಾಪ್ ಸಿಂಹ ಮೈಸೂರು - ಕೊಡಗು ಜಿಲ್ಲೆಗಳಲ್ಲಿ ಬಿಜೆಪಿಯ ನಾಯಕರು, ಮಾಜಿಗಳಾಗಿರುವ ಶಾಸಕರೊಂದಿಗೆ ನಿಕಟವಾಗಿಲ್ಲ ಎಂಬುದು ಪ್ರಮುಖ ಕಾರಣವಾಗಿದೆ. ಈ ಜಿಲ್ಲೆಗಳ ಪ್ರಮುಖರೊಂದಿಗೆ ಪ್ರತಾಪ್ ಸಿಂಹ ಉತ್ತಮ ಭಾಂದವ್ಯ ಹೊಂದಿಲ್ಲ ಎಂಬ ದೂರುಗಳು ಹೈಕಮಾಂಡ್ ನಾಯಕರ ಕಿವಿಗೆ ಬಿದ್ದಿವೆ. ಪಕ್ಷದೊಳಗಿನ ಇಂಥ ಒಳ ಏಟುಗಳು ಗೆಲುವಿಗೆ ಅಡ್ಡಿಯಾಗುತ್ತದೆ ಎಂದೂ ಲೆಕ್ಕಾಚಾರಗಳು ನಡೆದಿದೆ. ಪ್ರತಾಪ್ ಸಿಂಹ ಬಿಜೆಪಿಯ ಪ್ರಮುಖರನ್ನು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ದೂರುಗಳೂ ಕೇಳಿಬಂದಿವೆ. ಎರಡು ಬಾರಿ ಸಂಸದರಾಗಿದ್ದಾರೆ. ಮೂರನೇ ಅವಧಿಗೆ ಹೊಸಬರಿಗೆ ಅವಕಾಶ ನೀಡಬೇಕೆಂದು ಪ್ರತಾಪ್ ಸಿಂಹ ವಿರೋಧಿ ಬಣ ಒತ್ತಾಯಿಸುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ, ನಾಲ್ಕು ಗೋಡೆಗಳ ನಡುವೆ ನಡೆದಿರುವ ಚರ್ಚೆಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದಾರೆ. ಅಂದರೆ, ಪ್ರತಾಪ್ ಸಿಂಹ ವಿರುದ್ಧ ದೂರುಗಳು ಬಂದಿವೆ. ಅದೆಲ್ಲವನ್ನು ಗೋಡೆಗಳ ಹೊರಗಡೆ ಹೇಳಲು ಅಸಾಧ್ಯ ಎಂದು ವಿಜಯೇಂದ್ರ ಹೇಳಿದಂತಾಗಿದೆ. ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಕೂಡ ಪ್ರತಾಪ್ ಸಿಂಹ ಸ್ಪರ್ಧೆಯ ಬಗ್ಗೆ ಖಚಿತವಾಗಿ ಹೇಳಿಕೆ ನೀಡುತ್ತಿಲ್ಲ. ಅನೇಕ ಕಡೆ ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಅಶೋಕ್ ಹೇಳಿರುವ ಮಾತಿನಲ್ಲಿ ಮೈಸೂರು ಕೊಡಗಿನಲ್ಲಿ ಕೂಡ ಈ ಸಾಧ್ಯತೆ ಇದೆಯೇ ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ. ಆರ್.ಎಸ್ ಎಸ್ ಒತ್ತಡದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ನಾಲ್ಕು ದಿನಗಳ ಮೊದಲು ಅಶೋಕ್ ಬೆಂಗಳೂರಿನಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರನ್ನು ಭೇಟಿಯಾಗಿ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಸಂಸದ ಪ್ರತಾಪ್ ಹೇಳುವುದೇನು?
ಮೂರನೇ ಬಾರಿಗೆ ಸ್ಪರ್ಧೆ ಬಯಸಿರುವ ಪ್ರತಾಪ್ ಸಿಂಹ ತನ್ನ ಸ್ಪರ್ಧೆಯ ಬಗ್ಗೆ ವಿಶ್ವಾಸದಿಂದಲೇ ಇದ್ದಾರೆ. ಬಿಜೆಪಿಯ ಕೆಲವರು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಜತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ತನ್ನ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ ಎಂದೂ ಪ್ರತಾಪ್ ಹೇಳಿಕೆ ನೀಡಿದ್ದಾರೆ. ಪ್ರತಾಪ್ ಪ್ರಕಾರ, ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರನ್ನು ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿಸಲು ಚಿಂತನೆ ನಡೆದಿದೆ. ತಾನು ಸ್ಪರ್ಧಿಸಿದರೆ ಯತೀಂದ್ರ ಗೆಲುವಿಗೆ ತೊಡಕಾಗಲಿದೆ. ಹೀಗಾಗಿ ತನ್ನನ್ನು ಸ್ಪರ್ಧಿಸದಂತೆ ತಡೆಯಲು ಬಿಜೆಪಿಯ ಕೆಲವು ಮುಖಂಡರೊAದಿಗೆ ಕಾಂಗ್ರೆಸ್ ಒಳ ಒಪ್ಪಂದದ ಷಡ್ಯಂತ್ರಕ್ಕೆ ಮುಂದಾಗಿದೆ . ಇದೆಲ್ಲವನ್ನೂ ತಾನು ಗಮನಿಸಿದ್ದೇನೆ. ಜನರು ಸದಾ ನನ್ನ ಜತೆಗೇ ಇದ್ದಾರೆ. ಜನರು ಏನು ಬಯಸುತ್ತಿದ್ದಾರೆ ಎಂಬುದನ್ನೂ ಪಕ್ಷದ ಹೈಕಮಾಂಡ್ ಸೂಕ್ಷö್ಮವಾಗಿ ಗಮನಿಸುತ್ತಿದೆ. ಸ್ಪರ್ಧೆಗೆ ಅವಕಾಶ ನೀಡುವುದರಲ್ಲಿ ಅನುಮಾನವಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಯದುವೀರ್ ಒಡೆಯರ್ ನಿಲುವೇನು?
ನೆನಪಿರಲಿ ಮೂರು ವರ್ಷಗಳ ಹಿಂದೆ ಪ್ರಧಾನಿ ಮೋದಿ ಮೈಸೂರು ಅರಮನೆಗೆ ಭೇಟಿ ನೀಡಿ ಪ್ರಮೋದದೇವಿ ಮತ್ತು ಯದುವೀರ್ ಜತೆ ಸುಧೀರ್ಘ ಚರ್ಚೆ ನಡೆಸಿದ್ದರು. ಆಗಲೇ, ಯದುವೀರ್ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಈವರೆಗೂ ಯದುವೀರ್ ಒಡೆಯರ್ ತಾನು ರಾಜಕೀಯದಿಂದ ದೂರವೇ ಉಳಿದಿದ್ದೇನೆ ಎಂದು ಹೇಳುತ್ತಲೇ ಬಂದಿದ್ದರು. ಇದೀಗ ಮೂರು ದಿನಗಳಿಂದ ಮತ್ತೆ ಯದುವೀರ್ ರಾಜಕೀಯ ಸೇರ್ಪಡೆ ಸದ್ದು - ಸುದ್ದಿಯಾಗುತ್ತಿದೆ.
ಯಾವುದೇ ಹೇಳಿಕೆ ನೀಡದ ಯದುವೀರ್ ಮನಸ್ಸಿನಲ್ಲಿ ಏನಿದೆ ಎಂಬುದು ಸದ್ಯಕ್ಕೆ ನಿಗೂಡವಾಗಿದೆ. ರಾಜಮಾತೆ ಪ್ರಮೋದದೇವಿ ಒಡೆಯರ್ ಯಾವ ನಿಲುವು ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಯದುವೀರ್ ರಾಜಕೀಯ ಪ್ರವೇಶ ಅವಲಂಭಿತವಾಗಿದೆ. ಯದುವೀರ್ ಪತ್ನಿ ತ್ರಿಶಾ ರಾಜಸ್ಥಾನ ಮೂಲದ ರಾಜವಂಶಸ್ಥೆಯಾಗಿದ್ದಾರೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಪ್ರಮುಖರು ರಾಜಸ್ಥಾನದ ರಾಜವಂಶಸ್ಥರ ಮೂಲಕವೇ ಯದುವೀರ್ಗೆ ಗಾಳ ಹಾಕುತ್ತಿದ್ದಾರೆ ಎನ್ನಲಾಗಿದೆ.
ಯದುವೀರ್ ಸ್ಪರ್ಧೆ ಲಾಭ ಹೇಗೆ?
ಮೈಸೂರು ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಮೈಸೂರು ರಾಜವಂಶಸ್ಥರಿಗೆ ಇಂದಿಗೂ ಅಪಾರವಾದ ಗೌರವ ಇದ್ದೇ ಇದೆ. ಗ್ರಾಮೀಣ ಜನತೆ ಇಂದಿಗೂ ರಾಜಮನೆತನದವರನ್ನು ಸಾಕ್ಷಾತ್ ರಾಜರು ಎಂದೇ ಭಾವಿಸಿದ್ದಾರೆ. ಅಂಥ ಗೌರವ ಇಂದಿಗೂ ಇದೆ. ಮೈಸೂರು ರಾಜವಂಶಸ್ಥರಾದ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ನಾಲ್ಕು ಬಾರಿ ಕಾಂಗ್ರೆಸ್ನಿAದ ಸಂಸದರಾಗಿ ಗೆಲುವು ಸಾಧಿಸಿದ್ದರು. ಎರಡು ಬಾರಿ ಸೋಲನ್ನೂ ಕಂಡಿದ್ದರು. ಪ್ರತೀ ಚುನಾವಣೆಯಲ್ಲಿಯೂ ರಾಜವಂಶಸ್ಥರನ್ನು ಬಿಜೆಪಿ, ಕಾಂಗ್ರೆಸ್ ಮುಖಂಡರು ತಮ್ಮ ಪಕ್ಷದಿಂದಲೇ ಸ್ಪರ್ಧಿಸುವಂತೆ ಆಹ್ವಾನ ನೀಡುವುದು ಹಲವು ವರ್ಷಗಳಿಂದ ಇದೆ. ಈವರೆಗೂ ರಾಜಕೀಯದಿಂದ ದೂರವೇ ಉಳಿದಿರುವ ಯದುವೀರ್ ಈ ಬಾರಿ ಬಿಜೆಪಿ ಪ್ರಮುಖರ ಒತ್ತಡಕ್ಕೆ ಮಣಿದು ಸ್ಪರ್ಧಿಸುವ ಮೂಲಕ ಸಂಸದರಾಗಲು ಚಿಂತಿಸುವರೇ ಎಂಬುದೇ ಕುತೂಹಲಕಾರಿಯಾಗಿದೆ. ಯದುವೀರ್ ಸ್ಪರ್ಧಿಸಿದ್ದೇ ಆದಲ್ಲಿ ಮೈಸೂರು ಜಿಲ್ಲೆಯಲ್ಲಿ ಬಿಜೆಪಿಗೆ ಅತ್ಯಧಿಕ ಮತಗಳು ಲಭಿಸುತ್ತದೆ ಎಂಬುದು ನಿಸ್ಸಂದೇಹ. ಯದುವೀರ್ ವಿರುದ್ದ ಸ್ಪರ್ಧಿಸಲು ಕಾಂಗ್ರೆಸ್ ಕೂಡ ಸಮಸ್ಯೆ ಎದುರಿಸಲಿದೆ. ರಾಜಮನೆತನದವರ ವಿರುದ್ದ ಹೇಳಿಕೆ ನೀಡಲೂ ಹಿಂದೇಟು ಹಾಕುವಂಥ ಪರಿಸ್ಥಿತಿ ಮೈಸೂರು ಜಿಲ್ಲೆಯಲ್ಲಿ ನಿರ್ಮಾಣವಾಗಲಿದೆ.
ಯದುವೀರ್ ಸ್ಪರ್ಧೆ ಕೊಡಗಿನಲ್ಲಿ ಅಂಥ ಪರಿಣಾಮ ಬೀರಲಾರದು. ಈ ಜಿಲ್ಲೆಯಲ್ಲಿ ಮೋದಿ ಹವಾ ಎದುರಿಸಲು ಇಬ್ಬರು ಕಾಂಗ್ರೆಸ್ ಶಾಸಕರು ಯಾವ ರೀತಿ ತಂತ್ರಗಾರಿಕೆ ಮಾಡುತ್ತಾರೆ ಎಂಬುದು ಕುತೂಹಲಕಾರಿ. ಮೈಸೂರಿನಲ್ಲಿ ಕಳೆದುಕೊಳ್ಳುವ ಮತಗಳನ್ನು ಕೊಡಗಿನಲ್ಲಿ ಹೆಚ್ಚುವರಿಯಾಗಿ ಪಡೆದುಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್ಗೆ ಸೃಷ್ಟಿಯಾಗಬಹುದು.
ಗಮನಾರ್ಹ ಎಂದರೆ, ಯದುವೀರ್ ಸ್ಪರ್ಧಿಸಿದ್ದೇ ಆದಲ್ಲಿ ಶಾಸಕ ಡಾ.ಮಂತರ್ ಗೌಡ ಪಾಲಿಗೆ ಇರಿಸು ಮುರಿಸಾಗುವ ಸಾಧ್ಯತೆ ಇಲ್ಲದಿಲ್ಲ. ಯದುವೀರ್ ಮತ್ತು ಮಂತರ್ ಗೌಡ ಆತ್ಮೀಯ ಗೆಳೆಯರಾಗಿದ್ದು ಯದುವೀರ್ ಸ್ಪರ್ಧೆಯಿಂದಾಗಿ ಮಂತರ್ ಗೌಡ ತನ್ನ ಗೆಳೆಯನ ವಿರುದ್ದವೇ ಚುನಾವಣಾ ಕಣದಲ್ಲಿ ಮಾತನಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಲಿದೆ.
ಯದುವೀರ್ ಅಲ್ಲದಿದ್ದರೆ ಬೇರೆ ಯಾರು?
ಪ್ರತಾಪ್ ಸಿಂಹ ಬೇಡ ಎಂದಾದಲ್ಲಿ, ಯದುವೀರ್ ಕೂಡ ಸ್ಪರ್ಧೆಗೆ ನಿರಾಕರಿಸಿದ್ದೇ ಆದಲ್ಲಿ, ಬಿಜೆಪಿಯಿಂದ ಬೇರೆ ಯಾರಿದ್ದಾರೆ? ಮಡಿಕೇರಿಯ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸ್ಪರ್ಧೆಗೆ ತುದಿಗಾಲಲ್ಲಿ ನಿಂತಿದ್ದಾರೆ. ರಂಜನ್ ಹೆಸರೂ ಹೈಕಮಾಂಡ್ ಗಮನದಲ್ಲಿದೆ. ಮೈಸೂರಿನ ಮಾಜಿ ಶಾಸಕರೂ ರಂಜನ್ ಪರವಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ. ಪ್ರತಾಪ್ ಸಿಂಹ ರಾಜಕೀಯ ವಿರೋಧಿಗಳೂ ರಂಜನ್ ಪರವಾಗಿಯೇ ಹೈಕಮಾಂಡ್ ಮುಂದೆ ಮಾತನಾಡಿದ್ದಾರೆ ಎನ್ನಲಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿ ಬಿ.ಭಾಸ್ಕರ ರಾವ್ ತಾನೂ ಆಕಾಂಕ್ಷಿ ಎಂದು ಹೇಳಿಕೆ ನೀಡಿದ್ದಾರಾದರೂ ಇವರ ಹೆಸರು ಪ್ರಬಲವಾಗಿ ಕೇಳಿಬರುತ್ತಿಲ್ಲ. ಜೆಡಿಎಸ್ ಕೂಡ ಬಿಜೆಪಿ ಜತೆ ಮೈತ್ರಿ ಸಾಧಿಸಿರುವ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹೆಸರು ಪ್ರಸ್ತಾಪಗೊಂಡಿತ್ತಾದರೂ ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಸಾ.ರಾ.ಮಹೇಶ್ ತಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಾರೆ ಎಂದು ದೂರಸರಿದಿದ್ದಾರೆ. ಪ್ರತಾಪ್ ಸಿಂಹ ಬೇಡ, ಯದುವೀರ್ ಒಪ್ಪಲಾರರು ಎಂದಾದಲ್ಲಿ ಅಚ್ಚರಿಯ ಅಭ್ಯರ್ಥಿಯಾಗಿ ಅಪ್ಪಚ್ಚು ರಂಜನ್ಗೆ ಅವಕಾಶ ಸಿಕ್ಕುವ ಸಾಧ್ಯತೆಯೂ ಇಲ್ಲದಿಲ್ಲ.
ಕಾಂಗ್ರೆಸ್ ನಿಂದ ಯಾರು?
ಕಾಂಗ್ರೆಸ್ ಕೂಡ ಬಿಜೆಪಿಯ ಹೆಜ್ಜೆಗಳನ್ನು ಸೂಕ್ಷö್ಮವಾಗಿ ಗಮನಿಸುತ್ತಿದೆ. ಹೀಗಾಗಿ ಈ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯನ್ನು ಮೊದಲ ಪಟ್ಟಿಯಲ್ಲಿ ಘೋಷಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೆಸರು ಮುಂಚೂಣಿಯಲ್ಲಿ ಇತ್ತಾದರೂ ಅಕಸ್ಮಾತ್ ಯತೀಂದ್ರ ಸೋಲು ಕಂಡರೆ ಅದು ಸಿದ್ದರಾಮಯ್ಯ ವರ್ಚಸ್ಸಿಗೆ ತೀವ್ರ ಪೆಟ್ಟಾಗುತ್ತದೆ ಮತ್ತು ಯತೀಂದ್ರ ರಾಜಕೀಯ ಭವಿಷ್ಯ ಮಂಕಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಯತೀಂದ್ರ ಹೆಸರನ್ನು ಕೈಬಿಡಲಾಗಿದೆ. ಡಾ.ಸುಶ್ರುತ್ ಗೌಡ ಹೆಸರು ಪ್ರಬಲವಾಗಿ ಕೇಳಿಬಂದಿತ್ತಾದರೂ ಕೊನೇ ಹಂತದಲ್ಲಿ ಈ ಹೆಸರನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂಡಾ ಅಧ್ಯಕ್ಷರಾಗಿದ್ದ ಕಾಂಗ್ರೆಸ್ನ ವಕ್ತಾರ ಎಂ.ಲಕ್ಷö್ಮಣ್ ಈಗಾಗಲೇ ತಾವೇ ಅಭ್ಯರ್ಥಿ ಎಂದು ಪ್ರಚಾರ ಪ್ರಾರಂಭಿಸಿದ್ದಾರೆ. ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರುತ್ತಿರುವ ಲಕ್ಷö್ಮಣ್ ಖಡಕ್ ಹೇಳಿಕೆಗಳಿಗೆ ಹೆಸರಾದವರು. ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಂಗ್ರೆಸ್ ಶಾಸಕರೇ ಹೆಚ್ಚಾಗಿರುವುದರಿಂದಾಗಿ ತನ್ನ ಗೆಲುವು ಖಂಡಿತಾ ಎಂದು ಲಕ್ಷö್ಮಣ್ ಹೇಳಿದ್ದಾರೆ.
ಮಾಜಿ ಸಂಸದ ಹೆಚ್.ವಿ ಶ್ವನಾಥ್ ಬಿಜೆಪಿಯಿಂದ ವಿಧಾನಪರಿಷತ್ ಸದಸ್ಯರಾದರೂ ಬಿಜೆಪಿಗೆ ಬಿಸಿತುಪ್ಪವಾಗಿಯೇ ಮುಂದುವರೆದಿದ್ದಾರೆ. ಕಾಂಗ್ರೆಸ್ ನಿಂದ ಸ್ಪರ್ಧಿಸಲು ಅವಕಾಶ ಕೇಳಿರುವ ವಿಶ್ವನಾಥ್ ಕೊಡಗಿನಲ್ಲಿ ಸಾಕಷ್ಟು ಬೆಂಬಲಿಗರನ್ನು ಹೊಂದಿದ್ದಾರೆ. ಹಿರಿಯ ರಾಜಕಾರಣಿಯಾಗಿ ಚುನಾವಣಾ ತಂತ್ರಗಾರಿಕೆಯನ್ನು ಬಲ್ಲ ವಿಶ್ವನಾಥ್ ಅವರಿಗೆ ಹೆಚ್ಚಾಗಿರುವ ವಯಸ್ಸು ಚುನಾವಣಾ ಸ್ಪರ್ಧೆಗೆ ಅಡ್ಡಿಯಾಗಬಹುದು.
ಪ್ರತಾಪ್ ಅಭ್ಯರ್ಥಿಯಾದರೆ?
ಅಂಕಣಕಾರ ಪ್ರತಾಪ್ ಸಿಂಹ ೨೦೧೪ ರಲ್ಲಿ ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದವರು. ಲೋಕಸಭಾ ಚುನಾವಣೆಯಲ್ಲಿ ೩೧ ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದ ಪ್ರತಾಪ್ ೨೦೧೯ ರಲ್ಲಿ ಎರಡನೇ ಬಾರಿಗೆ ಸ್ಪರ್ಧಿಸಿ ೧.೩೮ ಲಕ್ಷ ಮತಗಳ ಅಂತರದಿAದ ಭರ್ಜರಿ ಗೆಲವು ಸಾಧಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪರ ಮನಸ್ಸಿಟ್ಟು ಕೆಲಸ ಮಾಡಲಿಲ್ಲ ಎಂಬ ಕಾರಣದಿಂದಾಗಿ ಅಪ್ಪಚ್ಚುರಂಜನ್ ಆಕ್ರೋಶಕ್ಕೆ ಪ್ರತಾಪ್ ಸಿಂಹ ಕಾರಣರಾಗಿದ್ದಾರೆ.
ಬಿಜೆಪಿಯೊಳಗಿನ ಒಳಬೇಗುದಿಯೇ ಪ್ರತಾಪ್ ಪಾಲಿಗೆ ಈ ಬಾರಿ ಸವಾಲಾಗುತ್ತಿದೆ. ಕರ್ನಾಟಕದ ೨೮ ಸಂಸದರ ಪೈಕಿ ಫೈರ್ಬ್ರಾಂಡ್ ಸಂಸದ ಎಂದು ಹೆಸರಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಸಂಸದ ಎನಿಸಿಕೊಂಡಿರುವ ಪ್ರತಾಪ್ ಸಿಂಹ ಅಭ್ಯರ್ಥಿಯಾಗದೇ ಹೋದಲ್ಲಿ ಮುಂದೆ ಅವರ ನಡೆಯೇನು ಎಂಬುದೂ ತೀವ್ರ ಕುತೂಹಲಕಾರಿಯಾಗಿದೆ. ಯಾಕೆಂದರೆ, ಯಾರು ಏನೇ ಟೀಕಿಸಲಿ ಯುವಪೀಳಿಗೆಯ ಬಹುತೇಕ ಮತದಾರರು ಪ್ರತಾಪ್ ಅಭಿಮಾನಿಗಳಾಗಿದ್ದಾರೆ. ಬಹಳ ದೊಡ್ಟ ಫ್ಯಾನ್ ಫಾಲೋವರ್ಸ್ ಪ್ರತಾಪ್ ಪರವಾಗಿದೆ. ಹೀಗಾಗಿ ಪ್ರತಾಪ್ ಸಿಂಹ ಅವರನ್ನು ದೂರವಿಡುವುದು ಬಿಜೆಪಿಗೆ ಸುಲಭ ಸಾಧ್ಯವಿಲ್ಲ.
- ಅನಿಲ್ ಎಚ್.ಟಿ.