೭ಕುಶಾಲನಗರ, ಮಾ.೭: ಕಾವೇರಿ ನದಿಯಿಂದ ಅಕ್ರಮವಾಗಿ ಅಥವಾ ಅನಧಿಕೃತವಾಗಿ ಪಂಪ್‌ಸೆಟ್ ಮೂಲಕ ನೀರು ಹಾಯಿಸುವುದನ್ನು ನಿಷೇಧಿಸಿರುವ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ಗುರುವಾರ ಕುಶಾಲನಗರ ವ್ಯಾಪ್ತಿಯ ಕಾವೇರಿನದಿ ತಟದಲ್ಲಿ ಅಳವಡಿಸಿರುವ ಪಂಪ್ ಸೆಟ್‌ಗಳ ಪರಿಶೀಲನೆ ನಡೆಸಿದರು.

ಕುಶಾಲನಗರ ಪಟ್ಟಣ ಬೈಚನಹಳ್ಳಿ ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಸಿಬ್ಬಂದಿಗಳೊAದಿಗೆ ತೆರಳಿದ ತಹಶೀಲ್ದಾರ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ನದಿ ನೀರಿನ ಹರಿವಿನ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಎಲ್ಲ ತಾಲೂಕು ತಹಶೀಲ್ದಾರ್ ಮೂಲಕ ವರದಿಗಳನ್ನು ಸಲ್ಲಿಸಲಾಗಿದೆ.

ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ನದಿ ತಟದ ಸರ್ವೆ ಕಾರ್ಯ ನಡೆಸಿ ಅಕ್ರಮ ಅನಧಿಕೃತ ಪಂಪ್ ಸೆಟ್‌ಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪಂಪ್ ಸೆಟ್ ಮಾಲೀಕರನ್ನು ಕರೆಸಿ ಅವರಿಗೆ ಸೂಚನೆ ನೀಡಲಾಗುವುದು.

ನಿಯಮ ಉಲ್ಲಂಘಿಸಿದಲ್ಲಿ ಪಂಪ್‌ಸೆಟ್ ವಶಪಡಿಸಿಕೊಳ್ಳುವುದರೊಂದಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಗುಡ್ಡೆಹೊಸೂರಿನಿಂದ ಕಾವೇರಿ ನಿಸರ್ಗಧಾಮ ಮೂಲಕ ಹರಿಯುವ ಕಾವೇರಿ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಂಡಿದ್ದು, ಕೆಲವೆಡೆ ನದಿಗೆ ಅಡ್ಡಲಾಗಿ ಬಂಡ್‌ಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ತೆರವುಗೊಳಿಸಿ, ಸರಾಗವಾಗಿ ನೀರು ಹರಿಯುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭ ಗ್ರಾಮ ಸಹಾಯಕ ಗೌತಮ್ ಮತ್ತು ಇಲಾಖಾ ಸಿಬ್ಬಂದಿಗಳು ಇದ್ದರು.

ಕುಶಾಲನಗರ ಕಾವೇರಿ ನಿಸರ್ಗಧಾಮದಲ್ಲಿ ನದಿಯಲ್ಲಿ ನೀರಿನ ಹರಿವಿನ ಕೊರತೆ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ತೂಗು ಸೇತುವೆ ಕೆಳಭಾಗ ನದಿಯಲ್ಲಿ ದೋಣಿ ಸಂಚಾರ ಸೌಲಭ್ಯ ಸ್ಥಗಿತಗೊಳಿಸಿದ್ದಾರೆ.

-ಚಂದ್ರಮೋಹನ್