ಗೋಣಿಕೊಪ್ಪ ವರದಿ, ಮಾ. ೭: ಪೊನ್ನಂಪೇಟೆ ತಾಲೂಕಿನ ಕಿರುನಾಲ್ಕುನಾಡು ಮತ್ತೂರು ಶ್ರೀ ಭೂತನಾಥ ಅಯ್ಯಪ್ಪ ದೇವರ ದೇವಸ್ಥಾನದಲ್ಲಿ ಕೊಡಿಮರ ಪ್ರತಿಷ್ಠಾಪನೆ ಕಾರ್ಯ ನೆರವೇರಿತು.
ರೂ. ೧೫ ಲಕ್ಷ ವೆಚ್ಚದಲ್ಲಿ ಕೊಡಿಮರ ಪ್ರತಿಷ್ಠಾಪನೆ ನಡೆಯಿತು. ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ತಂತ್ರಿಗಳಾದ ಜನಾರ್ಧನ್ ಭಟ್ ನೇತೃತ್ವದಲ್ಲಿ ಬೆಳಿಗ್ಗೆ ಮಹಾಗಣಪತಿ ಪೂಜೆ, ಪುಣ್ಯಾಹ ವಾಚನ, ಮಂಡಲ ದರ್ಶನ, ಕಲಾವೃದ್ಧಿ ಹೋಮ ನಡೆದವು. ವೃಷಭ ಲಗ್ನದಲ್ಲಿ ಕೊಡಿಮರಕ್ಕೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು.
ನಂತರ ಬ್ರಹ್ಮ ಕಲಶಾಭಿಷೇಕ, ಅಲಂಕಾರ ಹಾಗೂ ದೇವರು ಹೊರಬರುವುದು ಮಹಾಮಂಗಳಾರತಿ ನೆರವೇರಿದ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿತು.
ಕೊಡಿಮರ ಸ್ಥಾಪನೆಗೆ ಆರ್ಥಿಕ ಸಹಾಯ ನೀಡಿದ ದಾನಿ ಚೆಪ್ಪುಡಿರ ಹ್ಯಾರಿ ದೇವಯ್ಯ ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚೆಪ್ಪುಡಿರ ಎಂ. ಪೊನ್ನಪ್ಪ ಸನ್ಮಾನಿಸಿದರು. ದೇವಸ್ಥಾನ ಆಡಳಿತ ಮಂಡಳಿ ಕಾರ್ಯದರ್ಶಿ ಪಿ.ಆರ್. ದಾಮೋದರ್, ಪ್ರಮುಖರಾದ ಪಿ.ಬಿ. ನಟೇಶ್, ಪಿ.ಎ. ರಮೇಶ್, ಹೆಚ್.ಎಸ್. ಸಂಜು, ಎ.ಎ. ರಮೇಶ್, ಎ.ಎನ್. ಜಗತ್, ಉತ್ತಪ್ಪ, ಶ್ರೀನಿವಾಸ ಇದ್ದರು.