ಕುಶಾಲನಗರ, ಮಾ. ೭: ಕಾವೇರಿ ನದಿಗೆ ಸ್ನಾನಕ್ಕಿಳಿದ ಮೂವರು ಯುವಕರು ನೀರು ಪಾಲಾದ ಘಟನೆ ಹಳೆ ಕೂಡಿಗೆ ಬಳಿ ನಡೆದಿದೆ.

ಚಿಕ್ಕತ್ತೂರಿನ ಶ್ರೀನಿವಾಸ್ ಅಲಿಯಾಸ್ ಅಪ್ಪು (೨೩), ಕಣಿವೆಯ ಹಕ್ಕೆ ಸಚಿನ್ (೨೫), ಮುಳ್ಳುಸೋಗೆ ಜನತಾ ಕಾಲೋನಿಯ ವಿನೋದ್ (೨೫) ನೀರು ಪಾಲಾದವರಾಗಿದ್ದಾರೆ.

ನಾಲ್ವರು ಸ್ನೇಹಿತರು ನದಿ ಬಳಿ ಕಾರು ನಿಲ್ಲಿಸಿ ಸ್ನಾನಕ್ಕೆ ತೆರಳಿದ ಸಂದರ್ಭ ಓರ್ವ ಆಳವಾದ ಜಾಗದಲ್ಲಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ಮತ್ತೋರ್ವ ಮುಳುಗುವುದನ್ನು ಕಂಡು ಆತನನ್ನು ರಕ್ಷಿಸಲು ಇನ್ನೋರ್ವ ಮುಂದಾದ ಸಂದರ್ಭ ಮೂವರೂ ನೀರು ಪಾಲಾಗಿದ್ದಾರೆ. ಈ ಪೈಕಿ ಶ್ರೀನಿವಾಸ ಅಲಿಯಾಸ್ ಅಪ್ಪು (೨೫) ವಿನ ದೇಹ ಪತ್ತೆಯಾಗಿದ್ದು, ಕುಶಾಲನಗರ ಆಸ್ಪತ್ರೆಗೆ ಸಾಗಿಸಿದ ಸಂದರ್ಭ ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಇನ್ನಿಬ್ಬರಿಗಾಗಿ ನದಿಯಲ್ಲಿ ಶೋಧ ಕಾರ್ಯ ರಾತ್ರಿ ೮ ಗಂಟೆವರೆಗೆ ನಡೆಯಿತಾದರೂ ಪತ್ತೆಯಾಗಿಲ್ಲ. ಶೋಧ ಕಾರ್ಯದಲ್ಲಿ ಕುಶಾಲನಗರದ

(ಮೊದಲ ಪುಟದಿಂದ) ಅಗ್ನಿ ಶಾಮಕದಳ ಮತ್ತು ದುಬಾರೆಯ ರ‍್ಯಾಫ್ಟಿಂಗ್ ತಂಡದವರು ಭಾಗವಹಿಸಿದ್ದರು.

ಸ್ಥಳಕ್ಕೆ ಎಸ್ಪಿ ರಾಮರಾಜನ್, ಎಎಸ್ಪಿ ಸುಂದರ್ ರಾಜ್, ಡಿವೈಎಸ್ಪಿ ಗಂಗಾಧರಪ್ಪ, ತಹಶೀಲ್ದಾರ್ ಕಿರಣ್ ಗೌರಯ್ಯ, ವೃತ್ತ ನಿರೀಕ್ಷಕ ರಾಜೀವ್ ಭೇಟಿ ನೀಡಿದ್ದರು. ಶೋಧಕಾರ್ಯ ತಾ.೮ರಂದು (ಇಂದು) ಮುಂದುವರಿಯಲಿದೆ.