ವೀರಾಜಪೇಟೆ, ಮಾ. ೬: ವೀರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದುಕೋಟೆ ಗ್ರಾಮದಲ್ಲಿ ಮಿತಿಮೀರಿರುವ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಒತ್ತಾಯಿಸಿ ನಾಗರಿಕರು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಂ. ಶರಣ ಬಸಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದರು.

ಪೊದುಕೋಟೆ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ನಿರಂತರವಾಗಿ ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ಹಾನಿಗೊಳಿಸುತ್ತಿವೆ. ಕಾಫಿ, ಅಡಿಕೆ, ತೆಂಗು ಹಾಗೂ ಇತರೆ ಹಣ್ಣು ಹಂಪಲುಗಳ ಮರಗಳನ್ನು ಧ್ವಂಸಗೊಳಿಸುತ್ತಿದ್ದು, ಇದರಿಂದಾಗಿ ಅಪಾರ ನಷ್ಟ ಸಂಭವಿಸುತ್ತಿದೆ ಎಂದು ಗ್ರಾಮಸ್ಥ ಕೊಳುವಂಡ ಮಂದಪ್ಪ ಹೇಳಿದರು.

ಮರಿಯಾನೆ ಸೇರಿದಂತೆ ಹತ್ತಕ್ಕೂ ಅಧಿಕ ಕಾಡಾನೆಗಳು ಈ ಭಾಗ ತೋಟಗಳಲ್ಲಿ ಸಂಚರಿಸುತ್ತಿವೆ. ಇದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂದೇಟು ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.

ಕಾಫಿ ಬೆಳೆಗಾರ ಮಂಡೇಪAಡ ಚಿಟ್ಟಿಯಪ್ಪ ಮಾತನಾಡಿ, ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಹಾಗೂ ಶಾಶ್ವತ ಯೋಜನೆಯನ್ನು ರೂಪಿಸುವಂತೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅಧಿಕಾರಿ ಶರಣಬಸಪ್ಪ, ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಫಿ ಕೊಯ್ಲು ನಡೆಯುತ್ತಿರುವ ಕಾರಣದಿಂದ ಕೆಲವು ಬೆಳೆಗಾರರು ಕಾಡಾನೆಗಳನ್ನು ಕಾಡಿಗಟ್ಟುವ ಸಂದÀರ್ಭದಲ್ಲಿ ಕಾರ್ಮಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಹಾಗೂ ಬೆಳೆಹಾನಿಯಾಗುವ ಸಂಭವ ಇರುವುದರಿಂದ ಕಾಡಾನೆಗಳನ್ನು ಕಾಡಿಗೆ ಅಟ್ಟದಂತೆ ಮನವಿ ಮಾಡಿಕೊಂಡಿದ್ದಾರೆ. ಇದಲ್ಲದೆ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್.ಆರ್.ಟಿ ತಂಡದ ಸಿಬ್ಬಂದಿಗಳ ಕೊರತೆ ಇದೆ. ಇದರಿಂದಾಗಿ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ. ಮುಂದಿನ ೨೦ ದಿನಗಳ ಬಳಿಕ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ನಡೆಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮಸ್ಥರಾದ ಕೊಳುವಂಡ ಗಣಪತಿ, ಸುಬ್ಬಯ್ಯ, ವೀರಪ್ಪ, ಚೆಂಗಪ್ಪ, ಜಯರಾಮ್ ಮಂಡೇಪAಡ ಜಾಲಿ, ನೀರನ್, ಪೊರ್ಕೋಂಡ ನಾಚಪ್ಪ, ವೀರಾಜಪೇಟೆ ಪ್ರಬಾರ ವಲಯ ಅರಣ್ಯ ಅಧಿಕಾರಿ ಕೆ.ಎಂ. ದೇವಯ್ಯ, ಉಪ ವಲಯ ಅರಣ್ಯಾಧಿಕಾರಿ ಮೋನಿಷಾ ಹಾಜರಿದ್ದರು.