ಶನಿವಾರಸಂತೆ, ಮಾ. ೭: ಸ್ಥಳೀಯ ಗ್ರಾಮ ಪಂಚಾಯಿತಿಯ ಮಾಸಿಕ ಸಾಮಾನ್ಯ ಸಭೆ ಅಧ್ಯಕ್ಷೆ ಗೀತಾ ಹರೀಶ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿ ಚರ್ಚಿಸಿ ಅಂಗೀಕರಿಸ ಲಾಯಿತು. ಜಮಾ ಖರ್ಚಿನ ವಿವರ, ಸರ್ಕಾರಿ ಸುತ್ತೋಲೆ, ಸಮುದಾಯ ಆರೋಗ್ಯ ಕೇಂದ್ರದ ಆವರಣದ ಸ್ವಚ್ಛತೆ, ಲೋಕ ಅದಾಲತ್, ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಸಹಕಾರ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಸಾರ್ವಜನಿಕ ಅರ್ಜಿಯ ಬಗ್ಗೆ ಪರಿಶೀಲಿಸಲಾಯಿತು. ಕಸ ವಿಲೇವಾರಿ ಬಗ್ಗೆ ಚರ್ಚೆ ನಡೆದು ಘಟಕದ ಸುತ್ತಲಿನ ತಡೆಗೋಡೆ ನಿರ್ಮಾಣವಾಗಿದ್ದು ಉದ್ಘಾಟನೆ ಬಗ್ಗೆ ತೀರ್ಮಾನಿಸಲಾಯಿತು. ಪಂಚಾಯಿತಿ ಕಾಮಗಾರಿಗಳ ಬಗ್ಗೆ, ಜೆಜೆಎಂ ಬಗ್ಗೆ ಸದಸ್ಯರಿಗೆ ಮಾಹಿತಿ ಇಲ್ಲ ಎಂದು ದೂರಿದ ಉಪಾಧ್ಯಕ್ಷ ಸರ್ದಾರ್ ಅಹಮ್ಮದ್, ಸದಸ್ಯರಾದ ಎಸ್.ಎನ್. ರಘು, ಆದಿತ್ಯ ಗೌಡ, ಎಸ್.ಸಿ. ಶರತ್ ಶೇಖರ್ ಪಟ್ಟಣದಲ್ಲಿ ಬಾಕಿಯಾಗಿರುವ ಕಾಮಗಾರಿಗಳ ಬಗ್ಗೆ ಗಮನ ಸೆಳೆದರು. ಎಲ್ಲವನ್ನು ಪಂಚಾಯಿತಿ ಗಮನಕ್ಕೆ ತಂದು ಕೆಲಸ ಮಾಡಿಸುವಂತೆ ಪಿಡಿಓ ಹರೀಶ್ ಅವರಿಗೆ ಸೂಚಿಸಿದರು.

ಅಧ್ಯಕ್ಷೆ ಗೀತಾ ಹರೀಶ್ ಮಾತನಾಡಿ, ಎಲ್ಲಾ ವಿಭಾಗದ ಸದಸ್ಯರು ಅವರವರ ವಿಭಾಗದ ಕೆಲಸ ಮಾಡಿಸಬೇಕು. ಪಟ್ಟಣದಲ್ಲಿ ಅಲ್ಲಲ್ಲಿ ಕಸದ ರಾಶಿ ಇದೆ. ನಗರ ನೈರ್ಮಲ್ಯ ಪಿಡಿಓ ಕರ್ತವ್ಯ. ಪೌರ ಕಾರ್ಮಿಕರಿಂದ ಕೆಲಸ ಮಾಡಿಸಬೇಕು ಎಂದರು.

ಕಾರ್ಯ ವೈಫಲ್ಯದಿಂದ ಸಾಮಾನ್ಯ ಸಭೆ ಮುಂದೂಡಲ್ಪಡುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಮಾಡಿಸುವ ಕೆಲಸಗಳನ್ನು ಗುತ್ತಿಗೆದಾರ ಮೇಸ್ತಿç ಪಂಚಾಯಿತಿ ಗಮನಕ್ಕೆ ತರಬೇಕು ಎಂದು ಸದಸ್ಯರು ಆಗ್ರಹಿಸಿದರು. ಸಮುದಾಯ ಆರೋಗ್ಯ ಕೇಂದ್ರದ ಕೆಲಸಗಳನ್ನು ರಕ್ಷಾ ಸಮಿತಿಯಿಂದ ಮಾಡಿಸಿಕೊಳ್ಳಲಿ. ಬಗೆ ಹರಿಸಲಾಗದ ಕೆಲವು ಜಾಗಗಳ ಸಮಸ್ಯೆಗಳನ್ನು ನ್ಯಾಯ ಸಮಿತಿಗೆ ಹಾಕಬಹುದು ಎಂದು ಪಿಡಿಒ ಹರೀಶ್ ಸಲಹೆ ನೀಡಿದರು. ಮಾ. ೯ ರ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಸಹಕಾರ, ಸಂತೆ ಮಾರುಕಟ್ಟೆ ದ್ವಾರಕ್ಕೆ ಸಮಾಜ ಸೇವಕ ಮಾಜಿ ಪುರಸಭಾಧ್ಯಕ್ಷ ಗಂಗಪ್ಪ ಕರ್ಕೇರ ಹೆಸರಿನ ಫಲಕ ಅಳವಡಿಸಲು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲು ಹಾಗೂ ಬಸ್ ನಿಲ್ದಾಣ ಜಾಗದ ಪಕ್ಕ ಇನ್ನೂ ಹೆಚ್ಚಿನ ೧೫ ಸೆಂಟ್ ಜಾಗ ಮಂಜೂರಾತಿಗೆ ನಿಯೋಗ ತೆರಳುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಂತೆ ಸುಂಕ ಎತ್ತಾವಳಿ, ಮಾರುಕಟ್ಟೆಯೊಳಗಿನ ಮೀನು ಮಾರಾಟ ಮತ್ತು ಕುರಿ-ಹಂದಿ ಮಾಂಸ ಮಾರಾಟ ಮಳಿಗೆಗಳಿಗೆ ಬಹಿರಂಗ ಹರಾಜು ಮಾಡಿ ಲೈಸೆನ್ಸ್ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಪಂಚಾಯಿತಿ ಉಪಾಧ್ಯಕ್ಷ ಸರ್ದಾರ್ ಅಹಮ್ಮದ್, ಸದಸ್ಯರಾದ ಎಸ್.ಸಿ. ಶರತ್ ಶೇಖರ್, ಎಸ್.ಎನ್. ರಘು, ಸರೋಜಾ ಶೇಖರ್, ಆದಿತ್ಯ ಗೌಡ, ಎಸ್.ಆರ್. ಮಧು, ಫರ್ಜಾನಾ ಶಾಹಿದ್, ಕಾವೇರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಕಾರ್ಯದರ್ಶಿ ದೇವರಾಜ್ ಹಾಗೂ ಸಿಬ್ಬಂದಿ ಹಾಜರಿದ್ದರು.