ಮಡಿಕೇರಿ, ಮಾ. ೬: ರಾಜ್ಯ ಸರ್ಕಾರ ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ ೧೯೯೭ಕ್ಕೆ ಮತ್ತಷ್ಟು ತಿದ್ದುಪಡಿಯನ್ನು ತಂದಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘ ದಿಂದ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಸರ್ಕಾರ ಮಾಡಿರುವ ತಿದ್ದುಪಡಿಯಲ್ಲಿ ಹಲವಾರಿ ದೋಷಗಳಿವೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಈ ತಿದ್ದುಪಡಿಯು ದೇವಸ್ಥಾನಗಳ ಪರಂಪರೆಯ ರಕ್ಷಣೆಯ ದೃಷ್ಟಿಯಿಂದ ಅಪಾಯಕಾರಿಯಾಗಿದೆ ಎಂದರು.
ಕಲಂ ೬೯ ಇ ನಲ್ಲಿ ಜಿಲ್ಲಾಮಟ್ಟದ ಮತ್ತು ರಾಜ್ಯಮಟ್ಟದ ಉನ್ನತ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಜಿಲ್ಲಾಮಟ್ಟದ ಸಮಿತಿಗೆ ೯ ಜನ ಸದಸ್ಯರ ನೇಮಕಾತಿಯ ಬಗ್ಗೆ ಉಲ್ಲೇಖ ಮಾಡಲಾಗಿದೆ. ಪದನಿಮಿತ್ತ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ, ಲೋಕೋಪಯೋಗಿ ಅಭಿಯಂತರರು ಸೇರಿದಂತೆ ೯ ಜನರ ಸಮಿತಿ ರಚನೆ ಮಾಡಲಾಗಿದೆ. ಇದೇ ರೀತಿಯಲ್ಲಿ ೧೬ ಜನರ ರಾಜ್ಯಮಟ್ಟದ ಸಮಿತಿಯನ್ನು ರಚನೆ ಮಾಡಲಾಗಿದ್ದು, ಅದರಲ್ಲಿ ಸ್ಥಳೀಯ ಶಾಸಕರು, ಸಂಸದರು ಸೇರಿ ವಿವಿಧ ಇಲಾಖೆಗಳ ಕಾರ್ಯದರ್ಶಿಗಳನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಇದರಲ್ಲಿ ಹಿಂದೂಗಳ ಲ್ಲದವರು ಇರುವ ಸಾಧ್ಯತೆ ಇದ್ದು, ಇದು ಅತ್ಯಂತ ಅಪಾಯಕಾರಿಯಾಗಿದೆ.
ಕಲಂ ೧೯ರಲ್ಲಿ ಸಾಮಾನ್ಯ ಸಂಗ್ರಹಣ ನಿಧಿಯ ಉಲ್ಲೇಖ ಮಾಡಲಾಗಿದೆ. ಈ ನಿಧಿಯನ್ನು ಇತರ ಧಾರ್ಮಿಕ ಸಂಸ್ಥೆಗಳಿಗೆ ನೀಡುವ ಬಗ್ಗೆ ಉಲ್ಲೇಖಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಅನ್ಯ ಸಮುದಾಯದವರಿಗೂ ಸಹ ಹಿಂದೂ ದೇವಸ್ಥಾನಗಳ ಹಣ ಸಂದಾಯವಾಗುವ ಸಾಧ್ಯತೆ ಇದೆ.
ಕಲಂ ೨೫ರಲ್ಲಿ ಸಂಯೋಜಿತ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ರಚನೆ ಸಂದರ್ಭದಲ್ಲಿ ಹಿಂದೂಗಳಲ್ಲದವರನ್ನು ನೇಮಕ ಮಾಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದು ದೇವಸ್ಥಾನಗಳ ಪರಂಪರೆ ರಕ್ಷಣೆಯ ವಿಷಯದಲ್ಲಿ ಅತ್ಯಂತ ಕಳವಳಕಾರಿಯಾಗಿದೆ.
ಕಲಂ ೧೭ರಲ್ಲಿ ಯಾವ ಸಂಸ್ಥೆಗಳ ಆದಾಯ ೧ ಕೋಟಿ ಮೀರಿರುವುದೋ ಅವುಗಳ ೧೦% ನಿವ್ವಳ ಆದಾಯದ ಪ್ರತಿಶತ ಹಣವನ್ನು ೫ ರಿಂದ ೧೦ ಲಕ್ಷ ಆದಾಯ ಇರುವ ದೇವಸ್ಥಾನಗಳ ೫ ಶೇ. ಹಣವನ್ನು ಸಾಮಾನ್ಯ ಸಂಗ್ರಹಣಾ ನಿಧಿಗೆ ವರ್ಗಾವಣೆ ಮಾಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದು ದೇವಸ್ಥಾನಗಳ ಹಣವನ್ನು ದೋಚುವ ಹುನ್ನಾರವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರತಿಭಟನೆಯನಲ್ಲಿ ಸಂಘದ ಸಂಯೋಜಕ ವಿಜಯ್ಕುಮಾರ್, ಸದಸ್ಯರಾದ ಧರ್ಮಜ, ಪವನ್ ಬಿದ್ದಪ್ಪ, ಜಗದೀಶ್ ಮತ್ತಿತರರು ಪಾಲ್ಗೊಂಡಿದ್ದರು.