ಮಡಿಕೇರಿ, ಮಾ. ೭: ನಗರದಲ್ಲಿ ತಾ. ೮ರಂದು (ಇಂದು) ನಡೆಯುವ ಜನರಲ್ ತಿಮ್ಮಯ್ಯ ಪ್ರತಿಮೆ ಅನಾವರಣ ಸಮಯದಲ್ಲಿ ಸುಗಮ ವಾಹನ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಪ್ರಯಾಣಿಕರ ಮತ್ತು ಸಾರ್ವಜನಿಕರ ಸಂಚಾರದ ಹಿತದೃಷ್ಟಿಯಿಂದ ಬೆಳಿಗ್ಗೆ ೮ ಗಂಟೆಯಿAದ ಅಪರಾಹ್ನ ೩ ಗಂಟೆಯವರೆಗೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.

ಅದರಂತೆ ಮೈಸೂರು ಕಡೆಯಿಂದ ಮಡಿಕೇರಿ ನಗರದ ಕಡೆಗೆ ಬರುವ ಬಸ್ಸುಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಹನಗಳು ಸಂಪಿಗೆ ಕಟ್ಟೆ, ಮಹದೇವಪೇಟೆ ಮಾರ್ಗವಾಗಿ ಮಡಿಕೇರಿ ನಗರದ ಕಡೆಗೆ ಬರಬೇಕು. ಮಡಿಕೇರಿ ನಗರದಿಂದ ಮೈಸೂರು ಕಡೆಗೆ ತೆರಳುವವರು ಹಳೆಯ ಖಾಸಗಿ ಬಸ್ ನಿಲ್ದಾಣ ಅಜ್ಜಮಾಡ ದೇವಯ್ಯ ವೃತ್ತದ ಮುಖಾಂತರ ಜೂನಿಯರ್ ಕಾಲೇಜು ರಸ್ತೆ, ಗೌಡ ಸಮಾಜ ರಸ್ತೆಗಾಗಿ ಚೈನ್‌ಗೇಟ್ ಮುಖಾಂತರ ಮೈಸೂರು ರಸ್ತೆಗೆ ಸಾಗಬೇಕು. ಕಾರ್ಯಕ್ರಮ ಮುಗಿಯುವವರೆಗೆ ಮಡಿಕೇರಿ ನಗರದಿಂದ ಸಿದ್ದಾಪುರ, ವೀರಾಜಪೇಟೆ, ಮಂಗಳೂರು ಕಡೆಗೆ ತೆರಳುವ ಬಸ್‌ಗಳನ್ನು ಹೊರತುಪಡಿಸಿ ಉಳಿದ ವಾಹನಗಳು ಎಂ.ಎA. ವೃತ್ತದಿಂದ ಓಂಕಾರೇಶ್ವರ ದೇವಸ್ಥಾನ ರಸ್ತೆ, ರೆಡ್‌ಫರ್ನ್ ರಸ್ತೆಯ ಮುಖಾಂತರ ಸುದರ್ಶನ ವೃತ್ತಕ್ಕೆ ತಲುಪಿ ಅಲ್ಲಿಂದ ತಮ್ಮ ತಮ್ಮ ರಸ್ತೆಯ ಕಡೆಗೆ ತೆರಳಬೇಕು.

ವಾಹನ ನಿಲುಗಡೆ ಸ್ಥಳಗಳು

ವಿ.ಐ.ಪಿ. ವಾಹನಗಳನ್ನು ಗಾಂಧಿ ಮೈದಾನದಲ್ಲಿ ನಿಲುಗಡೆಗೊಳಿಸಬೇಕು. ಮೈಸೂರು ರಸ್ತೆ ಮತ್ತು ಸಿದ್ದಾಪುರ ರಸ್ತೆ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ದ್ವಿಚಕ್ರ ವಾಹನಗಳು ಶಾಂತಿ ಚರ್ಚ್ ಮೈದಾನದಲ್ಲಿ ನಿಲುಗಡೆಗೊಳ್ಳಬೇಕು. ವೀರಾಜಪೇಟೆ ಮತ್ತು ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ದ್ವಿಚಕ್ರ ವಾಹನಗಳು ಮೂರ್ನಾಡು ರಸ್ತೆಯ ಬದಿಯಲ್ಲಿರುವ ಐ.ಬಿ. ಮೈದಾನದಲ್ಲಿ ನಿಲ್ಲಬೇಕು.

ಕಾರ್ಯಕ್ರಮಕ್ಕೆ ಬರುವ ಎಲ್ಲಾ ನಾಲ್ಕು ಚಕ್ರ ವಾಹನಗಳು ಆರ್.ಎಂ.ಸಿ. ಮೈದಾನ, ಕೆ.ಎಸ್.ಆರ್.ಟಿ.ಸಿ. ಡಿಪೋ, ಶಾಂತಿ ಚರ್ಚ್ ಮೈದಾನದಲ್ಲಿ ನಿಲುಗಡೆಗೊಳ್ಳಬೇಕು.

ಮೈಸೂರು, ಸೋಮವಾರಪೇಟೆ, ಸಿದ್ದಾಪುರ ಕಡೆಗೆ ಹೋಗುವ ಪ್ರಯಾಣಿಕರನ್ನು ಜಿ.ಟಿ. ವೃತ್ತದಲ್ಲಿರುವ ಬಸ್ ನಿಲ್ದಾಣದ ಬದಲಾಗಿ ಕೆ.ಎಸ್.ಆರ್.ಟಿ.ಸಿ. ಡಿಪೋ ಬಳಿ ಹತ್ತಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಸೂಚಿಸಿದ್ದಾರೆ.