ಮಡಿಕೇರಿ, ಮಾ. ೫: ಮಾರಾಕಾಯುಧದಿಂದ ಅರಣ್ಯ ರಕ್ಷಕನ ಮೇಲೆ ಹಲ್ಲೆ ನಡೆಸಿದ್ದ ಅಪರಾಧಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ೧೦ ವರ್ಷ ಜೈಲು ಶಿಕ್ಷೆ ಮತ್ತು ರೂ, ೧೫,೫೦೦ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

ಗಾಳಿಬೀಡು ನಿವಾಸಿ ತಿಮ್ಮಯ್ಯ ಶಿಕ್ಷೆಗೆ ಒಳಗಾದ ಅಪರಾಧಿ. ತಾ. ೧೧-೫-೨೦೨೨ ರಂದು ಬೆಳಿಗ್ಗೆ ೧೦.೩೦ ಗಂಟೆ ಸಮಯದಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಗಾಳಿಬೀಡು ಗ್ರಾಮದ ಕಾನೆಕಂಡಿ-ಗಾಳಿಬೀಡು-ಕಾಲೂರು ರಸ್ತೆಯಲ್ಲಿ ಅರಣ್ಯ ರಕ್ಷಕ ಅಣ್ಣಪ್ಪ ರೈ ಎಂಬವರು ನಡೆದುಕೊಂಡು ಹೋಗುವ ಸಂದರ್ಭ ತಿಮ್ಮಯ್ಯ ಅವರನ್ನು ತಡೆದು ‘ಗಾಳಿಬೀಡು ಗ್ರಾಮ ಪಂಚಾಯಿತಿಯವರಿಗೆ ನಮ್ಮ ಮನೆಯ ಪಕ್ಕದಲ್ಲಿರುವ ಜಾಗವನ್ನು ಕಸ ವಿಲೇವಾರಿ ಮಾಡಲು ತೋರಿಸಿಕೊಟ್ಟಿದ್ದೀಯ’ ಎಂದು ಹೇಳಿ ಕೈಯಲ್ಲಿದ್ದ ಕತ್ತಿಯಿಂದ ಅಣ್ಣಪ್ಪ ಅವರ ಕುತ್ತಿಗೆ ಭಾಗಕ್ಕೆ ಕಡಿಯಲು ಬಂದಾಗ ಅದನ್ನು ತಡೆಯುವ ಸಂದರ್ಭ ಅಣ್ಣಪ್ಪ ಅವರ ಎಡಗೈ ಕಡಿದ ಪರಿಣಾಮ ಹಸ್ತ ಸಹಿತ ಬೆರಳುಗಳು ಬೇರ್ಪಟ್ಟಿದ್ದವು. ಮತ್ತೇ ಅದೇ ಕತ್ತಿಯಿಂದ ಕಡಿಯಲು ಬಂದಾಗ ಬಲಗೈಗೂ ಪೆಟ್ಟಾಗಿತ್ತು. ಈ ಸಂಬAಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.

ನ್ಯಾಯಾಧೀಶರಾದ ಹೆಚ್.ಸಿ. ಶ್ಯಾಮ್ ಪ್ರಸಾದ್ ವಿಚಾರಣೆ ನಡೆಸಿ ದಂಡ ಸಹಿತ ೧೦ ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ಘೋಷಿಸಿದ್ದಾರೆ. ಸರಕಾರಿ ಅಭಿಯೋಜಕಿ ಕೆ.ಜಿ. ಅಶ್ವಿನಿ ವಾದ ಮಂಡಿಸಿದರು.